ದಲಿತರಿಗೆ ಸಿಎಂ ಹುದ್ದೆ ನೀಡಲು ಆಗ್ರಹ
ಯಾದಗಿರಿ: ಈ ಬಾರಿ ದಲಿತರೊಬ್ಬರಿಗೆ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕು ಎಂದು ಜಿಲ್ಲಾ ಛಲವಾದಿ ಮಹಾಸಭಾ ಕಾಂಗ್ರೆಸ್ ಹೈಕಮಾಂಡ್ನ್ನು ಆಗ್ರಹಿಸಿದೆ. ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಕೆ. ಮಾತನಾಡಿ, ಸಾಮಾಜಿಕ ನ್ಯಾಯದ ಮಾತನಾಡುವ ಕಾಂಗ್ರೆಸ್ ಈ ಬಾರಿ ತನ್ನ ಮಾತನ್ನು ಉಳಿಸಿಕೊಳ್ಳಬೇಕು. ಸ್ವಾತಂತ್ರ್ಯ ಸಿಕ್ಕು ಇಲ್ಲಿಯವರೆಗೆ ದಲಿತರು ಮುಖ್ಯಮಂತ್ರಿಯಾಗಿಲ್ಲ. ಇದೀಗ ಅಂತಹ ಸುವರ್ಣಾವಕಾಶ ಬಂದೊದಗಿದೆ. ದಲಿತರಿಗೆ ಈ ಸ್ಥಾನ ನೀಡಿದಲ್ಲಿ ಪಕ್ಷಕ್ಕೂ ಉತ್ತಮ ಹೆಸರು ಬರುವುದಲ್ಲದೇ ಇತಿಹಾಸ ನಿರ್ಮಿಸಿದಂತಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ನಿರ್ಣಯ ಕೈಗೊಂಡು ದಲಿತರೊಬ್ಬರಿಗೆ ಸಿಎಂ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.