ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

3 ಕ್ಷೇತ್ರಗಳಲ್ಲಿ ಕೈ, 1 ಕಡೆ ತೆಂಗಿನಕಾಯಿ

Lingaraj Badiger
Updated On : 9 May 2013, 11:07 am

ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಯಾದಗಿರಿ, ಸುರಪುರ ಹಾಗೂ ಗುರುಮಠಕಲ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾಗಿದ್ದು, ಶಹಾಪುರ ಕ್ಷೇತ್ರ ಕೆಜೆಪಿ ಪಾಲಾಗಿದೆ.
  ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಎ.ಬಿ.ಮಾಲಕರೆಡ್ಡಿ ಅವರು 40434 ಮತಗಳನ್ನು ಪಡೆಯುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರನ್ನು 9104 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ವೀರಬಸವಂತರೆಡ್ಡಿ 31330 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನ ಎ.ಸಿ.ಕಾಡ್ಲೂರ 23977 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರೆ, ಬಿಜೆಪಿಯ ಚಂದ್ರಶೇಖರ ಮಾಗನೂರ 3556 ಮತಗಳನ್ನು ಪಡೆದಿದ್ದಾರೆ.
ಕೆಜೆಪಿಗೆ ಕೊನೆ ಸ್ಥಾನ: ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ್ ಅವರು 36051 ಮತಗಳನ್ನು ಪಡೆಯುವ ಮೂಲಕ ಸಮೀಪದ ಪ್ರತಿಸ್ಪರ್ಥಿ ಜೆಡಿಎಸ್‌ನ ನಾಗಣ್ಣಗೌಡ ಕಂದಕೂರ ಅವರನ್ನು 1650 ಮತಗಳಿಂದ ಸೋಲಿಸಿದ್ದಾರೆ. ನಾಗಣ್ಣಗೌಡ ಕಂದಕೂರ ಅವರು 34401 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ ಕೆಜೆಪಿಯ ವೆಂಕಟರೆಡ್ಡಿ ಮುದ್ನಾಳ 32362 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಬಿಜೆಪಿಯ ಗಿರೀಶ ಮಟ್ಟಣ್ಣವರ 9795 ಮತಗಳನ್ನು ಪಡೆದಿದ್ದಾರೆ.
ಬಿಜೆಪಿ 5ನೇ ಸ್ಥಾನಕ್ಕೆ: ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಜಾವೆಂಕಟಪ್ಪ ನಾಯಕ 65033 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ರಾಜುಗೌಡ ಅವರನ್ನು 4075 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ರಾಜುಗೌಡ ಅವರು 60958 ಮತಗಳನ್ನು ಪಡೆದಿದ್ದಾರೆ. ಕೆಜೆಪಿಯ ಶಿವರಾಜ ಮಲ್ಲೇಶಿ 8239 ಮತ ಪಡೆದು ಮೂರನೇ, ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಮದನಗೋಪಾಲ ನಾಯಕ 3249 ಮತಗಳನ್ನು ಪಡೆಯುವ ಮೂಲಕ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
  ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿಯ ಗುರುಪಾಟೀಲ ಶಿರವಾಳ ಅವರು 54924 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶರಣಬಸಪ್ಪ ದರ್ಶನಾಪುರ ಅವರನ್ನು 5796 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಇಲ್ಲಿ ಜೆಡಿಎಸ್‌ನ ಶರಣಪ್ಪ ಸಲಾದಪುರ 12159 ಮತಗಳನ್ನು ಪಡೆದು 3ನೇ ಸ್ಥಾನದಲ್ಲಿ, ಬಿಎಸ್ಸಾರ್ ಕಾಂಗ್ರೆಸ್‌ನ ಶಂಕ್ರಣ್ಣ ವಣಿಕ್ಯಾಳ 1796 ಮತ ಪಡೆದು 6ನೇ ಸ್ಥಾನದಲ್ಲಿ ಹಾಗೂ ಬಿಜೆಪಿಯ ವೀರಣಗೌಡ ಮಲ್ಲಾಬಾದಿ 1484 ಮತ ಪಡೆದು 7ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಶಿರವಾಳ ಕುಟುಂಬಕ್ಕೆ ಬೆಂಬಲ
ಯಾದಗಿರಿ: ಶಹಾಪುರ ಕ್ಷೇತ್ರದಲ್ಲಿ ಈ ಬಾರಿ ಕೆಜೆಪಿ ಅಭ್ಯರ್ಥಿ ಶಿರವಾಳ ಕುಟುಂಬದ ಗುರು ಪಾಟೀಲ ಅವರನ್ನು ಬೆಂಬಲಿಸುವ ಮೂಲಕ ಅಲ್ಲಿಯ ಮತದಾರರು ಇತಿಹಾಸ ಮರುಕಳಿಸುವಂತೆ ಮಾಡಿದ್ದಾರೆ.
ನಿಷ್ಠೆ ಬದಲಾವಣೆ: ಮಾಜಿ ಸಚಿವ, ಹಾಲಿ ಶಾಸಕ ಕಾಂಗ್ರೆಸ್‌ನ ಶರಣಬಸಪ್ಪ ದರ್ಶನಾಪುರ ಅವರನ್ನು 5 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಗುರು ಪಾಟೀಲ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದಾರೆ. ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ದರ್ಶನಾಪುರ ಹಾಗೂ ಶಿರವಾಳ ಕುಟುಂಬಗಳ ಮಧ್ಯೆಯೇ ರಾಜಕೀಯ ಗಿರಕಿ ಹೊಡೆಯುತ್ತಿತ್ತು. ಒಮ್ಮೆ ದರ್ಶನಾಪುರ ಕುಟಂಬವನ್ನು ಬೆಂಬಲಿಸುವ ಮತದಾರ ಮತ್ತೊಮ್ಮೆ ಶಿರವಾಳ ಕುಟುಂಬವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಕುಟುಂಬದ ನಿಷ್ಠೆ ಜತೆಗೆ ಪಕ್ಷವನ್ನೂ ಬದಲಾಯಿಸುತ್ತ ಬಂದಿರುವುದು ಶಹಾಪುರ ಕ್ಷೇತ್ರದ ವಿಶೇಷ.
  ಶರಣಬಸಪ್ಪ ದರ್ಶನಾಪುರ ಅವರು ಮಾಜಿ ಶಾಸಕ ದಿ. ಬಾಪುಗೌಡ ದರ್ಶನಾಪುರ ಅವರ ಪುತ್ರರಾದರೆ, ಗುರು ಪಾಟೀಲ ಅವರು ಮಾಜಿ ಶಾಸಕ ದಿ. ಶಿವಶೇಖರಪ್ಪಗೌಡ ಶಿರವಾಳ ಅವರ ಮಗ. ಶರಣಬಸಪ್ಪ ದರ್ಶನಾಪುರ ಅವರು 2004ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 1999ರಲ್ಲಿ ಕಾಂಗ್ರೆಸ್‌ನ ಶಿವಶೇಖರಪ್ಪಗೌಡ ಗೆದ್ದಿದ್ದರು. 2008ರಲ್ಲಿ ದರ್ಶನಾಪುರ ಅವರು ಪಕ್ಷ ಬದಲಿಸಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು.   
  ಮತ್ತೆ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿದ್ದ ದರ್ಶನಾಪುರಗೆ ಮತದಾರ ಕೈ ಕೊಟ್ಟಿದ್ದು, ಆದ್ದರಿಂದ ಕೆಜೆಪಿಯ ಗುರುಪಾಟೀಲ ಶಿರವಾಳ ಗೆದ್ದು, ಇತಿಹಾಸ ಮರುಕಳಿಸುವಂತೆ ಮಾಡಿದ್ದಾರೆ. ಈ ನಡುವೆ ಕ್ಷೇತ್ರದಲ್ಲಿ ಗುರು ಪಾಟೀಲರಿಗೆ ಅನುಕಂಪವೂ ಕೆಲಸ ಮಾಡಿದೆ. ದಿ.ಶಿವಶೇಖರಪ್ಪ ಅಭಿಮಾನಿ ಬಳಗ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು ಫಲ ನೀಡಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement