ಗುಂಪು ನಿಯಂತ್ರಿಸಲಾಗದ ಪೊಲೀಸ್
ಗುಲ್ಬರ್ಗ: ಇಲ್ಲಿನ ಮತ ಎಣಿಕೆ ನಡೆದ ಗುಲ್ಬರ್ಗ ವಿವಿ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಭಾರಿ ಜನದಟ್ಟಣೆ. ಆದರೆ ಇದನ್ನು ವ್ಯವಸ್ಥಿತವಾಗಿ ನಿಯಂತ್ರಿಸುವಲ್ಲಿ ಪೊಲೀಸರಿಗೆ ಆಗಲೇ ಇಲ್ಲ. ಬೆಳಗ್ಗೆ ಕಡಿಮೆ ಸಂಖ್ಯೆಯಲ್ಲಿದ್ದ ಜನತೆ ಸಂಜೆಯಾಗುತ್ತಿದ್ದಂತೆಯೇ ಅಧಿಕವಾಗತೊಡಗಿದರು. ವಾಹನಗಳ ದಟ್ಟಣೆಯೂ ಹೆಚ್ಚುತ್ತ ಹೋಯ್ತು. ಇದರಿಂದಾಗಿ ಸೇಡಂ- ರಿಬ್ಬನಪಲ್ಲಿ- ವಾಗ್ದರಿ ರಸ್ತೆ ಸಂಚಾರ ಸಂಜೆ ಹೊತ್ತು ಸಂಪೂರ್ಣ ಬಂದ್ ಆದಂತಾಗಿತ್ತು.
ವಿಜೇತ ಅಭ್ಯರ್ಥಿಗಳು ಅಭಿಮಾನಿಗಳ ಸಮೇತ ಹೊರಗೆ ಬರುತ್ತಿದ್ದಂತೆಯೇ ರಸ್ತೆಯಲ್ಲಿ ಜನದಟ್ಟಣೆ, ವಾಹನ ದಟ್ಟಣೆ ಹೆಚ್ಚುತ್ತಲೇ ಹೋಯ್ತು. ಪಟಾಕಿ ಸಿಡಿಸುವುದು, ಮೆರವಣಿಗೆ ಎಲ್ಲವೂ ನಿಷೇಧಿಸಿದ್ದರೂ ಪೊಲೀಸರ ಸಮ್ಮುಖದಲ್ಲೇ ಇವೆಲ್ಲವು ನಡೆದರೂ ಯಾರೂ ಕ್ಯಾರೆ ಎನ್ನಲಿಲ್ಲ.
ಮಾಧ್ಯಮ ಕೇಂದ್ರದಲ್ಲಿ ನಿಧಾನ: ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿ ನೀಡಲು ಪತ್ರಕರ್ತರಿಗೆ ಅಂಕಿ- ಸಂಖ್ಯೆ ಒದಗಿಸಲು ಗುವಿವಿ ಜೀವಶಾಸ್ತ್ರ ವಿಭಾಗದಲ್ಲಿ ಸ್ಥಾಪಿಸಲಾಗಿದ್ದ ಮಾಧ್ಯಮ ಕೇಂದ್ರದಲ್ಲಿ ಇಡೀ ದಿನ ಮಾಧ್ಯಮ ಮಿತ್ರರು ಕುಳಿತರು ಯಾವ ಮಾಹಿತಿಯೂ ಸಮಯಕ್ಕೆ ಸರಿಯಾಗಿ, ವೇಗವಾಗಿ ಸಿಗಲಿಲ್ಲ.
ಎನ್‌ವೈಸಿ ನಿರ್ವಹಿಸುವ ಇಲ್ಲಿನ ಆನ್‌ಲೈನ್ ಮಾಹಿತಿ ಕೇಂದ್ರದಲ್ಲಿ ಸರ್ವರ್ ವೈಫಲ್ಯದಿಂದಾಗಿ ಆರಂಭದಲ್ಲಿ ಯಾವುದೇ ಮಾಹಿತಿ ಹರಿದು ಬರಲಿಲ್ಲ. ಇದಾದ ನಂತರ ಬಂದ ಮಾಹಿತಿ ಎಣಿಕೆ ಕೇಂದ್ರದಲ್ಲಿ ಒಂದಿದ್ದರೆ ಇಲ್ಲಿ ಮತ್ತೊಂದು ಇರುತ್ತಿತ್ತು. ಇದರಿಂದಾಗಿ ಹೊರಜಗತ್ತಿಗೆ ಸುದ್ದಿ ರವಾನಿಸಬೇಕಾದಂತಹ ಮಾಧ್ಯಮದವರಿಗೇ ಎಣಿಕೆ ಬೆಳವಣಿಗೆ ಸಕಾಲಕ್ಕೆ ಸಿಗದಂತಾಗಿ ತೊಂದರೆಯಾಗಿತ್ತು.
ಮತ ಎಣಿಕೆ ಬೆಳವಣಿಗೆ ಸಕಾಲಕ್ಕೆ ದೊರಕದೆ ಹೋದರು ಇಲ್ಲಿ ಕಾಲಕಾಲಕ್ಕೆ ತಿಂಡಿ- ತೀರ್ಥ ಸರಬರಾಜು ಮಾತ್ರ ಸರಿಯಾಗಿತ್ತು ಮಾಹಿತಿ ದೊರಕುತ್ತಿಲ್ಲವೆಂದು ಜಿಲ್ಲಾಧಿಕಾರಿಗೆ ಕರೆ ಮಾಡಿ ದೂರೋಣ ಎಂದ ಅನೇಕ ಮಾಧ್ಯಮದವರಿಗೆ ಜಿಲ್ಲಾಧಿಕಾರಿ ಫೋನ್‌ನಲ್ಲಿ ಲಭ್ಯವಾಗಲೇ ಇಲ್ಲ.