ಗುಲ್ಬರ್ಗ ಜಿಲ್ಲೆ ಕಾಂಗ್ರೆಸ್ಮಯ
ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 8
ಗುಲ್ಬರ್ಗ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ವಿಜಯ ದುಂದುಭಿ ಮೊಳಗಿಸಿದೆ. ಜಿಲ್ಲೆಯ 9 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಕಾಂಗ್ರೆಸ್ಸಿನ 7 ಮಂದಿ ಗೆಲವು ಸಾಧಿಸುವ ಮೂಲಕ ಇಲ್ಲಿ ಕೈ ಬಲಪಡಿಸಿದ್ದಾರೆ. ಉಳಿದ 2 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಕೆಜೆಪಿ ತಲಾ ಒಂದೊಂದು ಸ್ಥಾನ ಹಂಚಿಕೊಂಡಿವೆ. ಜೆಡಿಎಸ್ ಜಿಲ್ಲೆಯಲ್ಲಿ ಯಾವ ಸ್ಥಾನವನ್ನೂ ಪಡೆಯಲಾಗದೆ ಶೂನ್ಯ ಸಾಧನೆ ಮಾಡಿದೆ.
ಕೈ ಗೆಲವು: ಗುಲ್ಬರ್ಗ ಉತ್ತರ (ಖಮರುಲ್ ಇಸ್ಲಾಂ), ಗುಲ್ಬರ್ಗ ಗ್ರಾಮೀಣ (ರಾಮಕೃಷ್ಣ), ಅಫಜಲ್ಪುರ (ಮಾಲೀಕಯ್ಯಾ ಗುತ್ತೇದಾರ್), ಸೇಡಂ (ಡಾ. ಶರಣಪ್ರಕಾಶ), ಚಿಂಚೋಳಿ (ಡಾ. ಉಮೇಶ ಜಾಧವ), ಜೇವರ್ಗಿ (ಡಾ. ಅಜಯ್ ಸಿಂಗ್), ಚಿತ್ತಾಪುರ (ಪ್ರಿಯಾಂಕ್ ಖರ್ಗೆ) ಇಲ್ಲೆಲ್ಲಾ ಕೈ ಗೆಲವು ಸಾಧಿಸಿದೆ.
ಗುಲ್ಬರ್ಗ ದಕ್ಷಿಣ (ದತ್ತಾತ್ರೇಯ ಪಾಟೀಲ್ ರೇವೂರ್) ದಲ್ಲಿ ಬಿಜೆಪಿ ಹಾಗೂ ಆಳಂದದಲ್ಲಿ (ಬಿ.ಆರ್. ಪಾಟೀಲ್) ಕೆಜೆಪಿ ಗೆಲವು ಸಾಧಿಸಿವೆ. 2008 ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಸರಿಮಯವಾಗಿತ್ತು. ಆದರೆ ಈ ಮತ ಕದನದಲ್ಲಿ ಜಿಲ್ಲೆಯಿಂದ ಕೈಪಡೆ ಹೆಚ್ಚಿನ ಸ್ಥಾನಗಳನ್ನು ದಕ್ಕಿಸಿಕೊಂಡು ಬಿಜೆಪಿಯನ್ನು ಕೇವಲ 1 ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
6ನೇ ಬಾರಿ ಅದೃಷ್ಟ ಪರೀಕ್ಷೆಯಲ್ಲಿದ್ದ ಮಾಲೀಕಯ್ಯಾ ಗುತ್ತೇದಾರ್ ಅಫಜಲ್ಪುರದಿಂದ ಗೆದ್ದರೆ, ಸಿಎಂ ಪುತ್ರ ಡಾ. ಅಜಯ್ ಜೇವರ್ಗಿಯಿಂದ, ಖರ್ಗೆ ಪುತ್ರ ಪ್ರಿಯಾಂಕ್ ಚಿತ್ತಾಪುರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದ ಚಿಂಚೋಳಿ ಅಭ್ಯರ್ಥಿ, ವೈದ್ಯ ಡಾ. ಉಮೇಶ ಜಾಧವ ಭರ್ಜರಿ ಗೆಲವು ಸಾಧಿಸಿದ್ದರೆ, ಸೇಡಂನಿಂದ ಸತತ 3ನೇ ಬಾರಿಗೆ ಡಾ. ಶರಣಪ್ರಕಾಶ ಪಾಟೀಲ್, ಗುಲ್ಬರ್ಗ ಉತ್ತರದಿಂದ ಖಮರುಲ್ ಇಸ್ಲಾಂ 5ನೇ ಬಾರಿಗೆ ವಿಜೇತರಾಗಿದ್ದಾರೆ.
ಚಿಂಚೋಳಿಯಿಂದ ವೈದ್ಯ ಉಮೇಶ ಜಾಧವ ಹಾಗೂ ಜೇವರ್ಗಿಯಿಂದ ಡಾ. ಅಜಯ್ ಸಿಂಗ್ ಗೆಲ್ಲುವುದರೊಂದಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕ ಪಡೆಯಲ್ಲಿ ಡಾ. ಶರಣಪ್ರಕಾಶರೊಂದಿಗೆ ಇನ್ನಿಬ್ಬರು ವೈದ್ಯರ ಸೇರ್ಪಡೆಯಾಗಿದ್ದು, 7 ಕಾಂಗ್ರೆಸ್ಸಿಗರ ಪೈಕಿ ಮೂವರು ವೈದ್ಯರೇ ಆದಂತಾಗಿದೆ. ಕಾಂಗ್ರೆಸ್ ಕಣಕ್ಕಿಳಿಸಿದ್ದ ಇಬ್ಬರು ಮಾಜಿ ಸಚಿವರಾದ ರಾಮಕೃಷ್ಣ, ಖಮರುಲ್ ಇಸ್ಲಾಂ ವಿಜೇತರಾಗಿದ್ದಾರೆ.
ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಸೇರಿದಂತೆ ಕಾಂಗ್ರೆಸ್ಸಿನ ಅನೇಕ ನಾಯಕರ ಪ್ರಚಾರ ಜಿಲ್ಲೆಯ ಚುನಾವಣಾ ಫಲಿತಾಂಶದ ಮೇಲೆ ತನ್ನದೇ ಆದಂತಹ ಪರಿಣಾಮ ಬೀರಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.
9 ಬಾರಿ ಸುತ್ತಿದವರು ಒಂದೇ ಸ್ಥಾನ ಗೆದ್ದರು: ತೊಗರಿ ಕಣಜ ಗುಲ್ಬರ್ಗದಲ್ಲಿ ತೆಂಗು ಫಸಲು ತೆಗೆಯಲೆಂದು ಪಣತೊಟ್ಟಂತಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಚುನಾವಣೆ ಘೋಷಣೆಯಾದ ನಂತರ ಸತತ 9ಬಾರಿ ಗುಲ್ಬರ್ಗ ಸುತ್ತಿ ಚರ್ಚೆಗೆ ಗ್ರಾಸವಾಗಿದ್ದರು.
ಯಡಿಯೂರಪ್ಪ ಭೇಟಿ, ನಿರಂತರ ಸಮಾವೇಶಗಳು, ಸುದ್ದಿಗೋಷ್ಠಿಗಳು, ಹೇಳಿಕೆಗಳ ಸಮರ, ಹೆಗಡಿ ಪರಿವಾರದ ಹಳೆಯ ನಾಯಕರೇ ಕಣಕ್ಕಿಳಿದು ಯಡಿಯೂರಪ್ಪನವರಿಗೆ ಬೆಂಬಲಿಸಿದ್ದು ಇವನ್ನೆಲ್ಲ ಗಮನಿಸಿದವರು ಜಿಲ್ಲೆಯಲ್ಲಿ ಕೆಜೆಪಿ 4ಸ್ಥಾನ ಪಡೆಯಬಹುದು ಅಂದುಕೊಂಡಿದ್ದರು.
ಕುಮಾರಣ್ಣನಿಂದ ಕಮಾಲ್ ಆಗಲಿಲ್ಲ: ಜಿದ್ದಾಜಿದ್ದಿ ರಾಜಕೀಯ ಕಣವಾಗಿದ್ದ ಗುಲ್ಬರ್ಗ ದಕ್ಷಿಣ ಹಾಗೂ ತನ್ನದೇ ಕ್ಷೇತ್ರವಾಗಿದ್ದ ಆಳಂದ ಉಳಿಸಿಕೊಳ್ಳಲಾದರೂ ಕುಮಾರಸ್ವಾಮಿ ಭೇಟಿ ನೆರವಿಗೆ ಬರುತ್ತದೆ ಎಂದು ತಿಳಿದಿದ್ದವರಿಗೆ ಜೆಡಿಎಸ್ ಜಿಲ್ಲೆಯಲ್ಲಿ ಶೂನ್ಯ ಸಾಧನೆ ಮಾಡಿದ್ದು ಕಂಡು ಭ್ರಮನಿರಸನವಾಗಿದೆ.
2008ರಲ್ಲಿ ಆಳಂದ ಜೆಡಿಎಸ್ ಗೆದ್ದಿತ್ತು. 2010ರ ಉಪ ಚುನಾವಣೆಯಲ್ಲಿ ಗುಲ್ಬರ್ಗ ದಕ್ಷಿಣದಲ್ಲೂ ಜೆಡಿಎಸ್ ಗೆದ್ದಿತ್ತು. ಆದರೆ 2013ರ ಚುನಾವಣೆಯಲ್ಲಿ ಈ ಕ್ಷೇತ್ರಗಳನ್ನು ಜೆಡಿಎಸ್ ಉಳಿಸಿಕೊಳ್ಳಲಾಗಲಿಲ್ಲ. ಜೆಡಿಎಸ್ ಟಿಕೆಟ್ ನಿರಾಕರಿಸಿ ಬಿಜೆಪಿ ಸೇರಿದ್ದ ದತ್ತಾತ್ರೇಯ ಪಾಟೀಲ್ ರೇವೂರ್ ಗುಲ್ಬರ್ಗ ದಕ್ಷಿಣದ ಬಿಜೆಪಿ ಹುರಿಯಾಳಾಗಿ ಗೆದ್ದರೆ, ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಶೀಲ್ ನಮೋಶಿ ಸೋಲುಣ್ಣಬೇಕಾಯ್ತು.
ಇನ್ನು ಜಿದ್ದಾಜಿದ್ದಿ ರಾಜಕೀಯದ ಆಳಂದದಲ್ಲಿ ಸುಭಾಸ ಗುತ್ತೇದಾರ್ ವಿರುದ್ಧ ಕೆಜೆಪಿಯ ಬಿ.ಆರ್. ಪಾಟೀಲ್ ಗೆಲ್ಲುವ ಮೂಲಕ ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ಸ್ಥಾವನನ್ನು ಕಸಿದುಕೊಂಡಿದ್ದಾರೆ.
ಕಮಲ ಮುದುಡಿತು: 2008ರ ಚುನಾವಣೆಯಲ್ಲಿ ಕಮಲ ಅರಳಿದ್ದ ಜಿಲ್ಲೆಯಲ್ಲಿ 2013ರ ಚನಾವಣೆ ಕಮಲವನ್ನು ಮುದುಡಿಸಿದೆ. ಗುಲ್ಬರ್ಗ ದಕ್ಷಿಣ ಹೊರತು ಪಡಿಸಿ ಜಿಲ್ಲೆಯ ಎಲ್ಲಿಯೂ ಬಿಜೆಪಿ ಗೆದ್ದಿಲ್ಲ. ಇದರಿಂದಾಗಿ ಕಮಲ ಜಿಲ್ಲೆಯಲ್ಲಿ ಈ ಮತ ಕದನದಲ್ಲಿ ಮುರುಟಿ ಹೋಯ್ತು ಎಂದೇ ಜನ ಆಡಿಕೊಳ್ಳುವಂತಾಗಿದೆ.