ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭದ್ರವಾಗಿಯೇ ಉಳಿದ ಕಾಂಗ್ರೆಸ್ ಕೋಟೆ

Lingaraj Badiger
Updated On : 9 May 2013, 11:07 am

ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕಡೆ ಕಾಂಗ್ರೆಸ್ ಬಾವುಟ ಹಾರಿದೆ. ಈ ಮೂಲಕ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
  2008ರ ಚುನಾವಣೆಯಲ್ಲೂ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಆದರೆ ಕಳೆದ ಬಾರಿ ಬಿಜೆಪಿ ಒಂದು ಸ್ಥಾನ ಗೆದ್ದುಕೊಂಡಿದ್ದರೆ, ಈ ಬಾರಿ ಅದನ್ನು ಕೆಜೆಪಿ ಕಸಿದುಕೊಂಡಿದೆ. ಸುರಪುರದಲ್ಲಿ ಎರಡು ಬಾರಿ ಬೇರೆ ಬೇರೆ ಪಕ್ಷಗಳಿಂದ ಆಯ್ಕೆಯಾಗಿ ಈ ಸಲ ಜೆಡಿಎಸ್‌ನಿಂದ ಸ್ಪಧಿಸಿದ್ದ ಮಾಜಿ ಸಚಿವ ರಾಜುಗೌಡ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತಿದ್ದಾರೆ. ಶಹಾಪುರ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರಗೆ ಮತದಾರ ಕೈ ಕೊಟ್ಟಿದ್ದು, ಅಲ್ಲಿ ಕೆಜೆಪಿಯ ಗುರು ಪಾಟೀಲ್ ಶಿರವಾಳ ಗೆದ್ದು ಅಚ್ಚರಿ ಮೂಡಿಸಿದ್ದಾರೆ.
ಇಬ್ಬರು ಹಾಲಿಗಳು ಮನೆಗೆ: ಹಾಲಿ ಶಾಸಕರ ಪೈಕಿ ಇಬ್ಬರು ಆಯ್ಕೆಯಾಗಿದ್ದಾರೆ. ಯಾದಗಿರಿಯಲ್ಲಿ ಕಾಂಗ್ರೆಸ್‌ನ ಡಾ. ಎ.ಬಿ. ಮಾಲಕರೆಡ್ಡಿ ಗೆದ್ದಿದ್ದು, ಗುರುಮಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ ಪುನರಾಯ್ಕೆಯಾಗಿದ್ದಾರೆ. ಶಹಾಪುರದ ದರ್ಶನಾಪುರ ಹಾಗೂ ಸುರಪುರದಲ್ಲಿ ರಾಜುಗೌಡ ಅವರನ್ನು ಸೋಲಿಸುವ ಮೂಲಕ ಮತದಾರ ಬದಲಾವಣೆಗೆ ಕಾರಣನಾಗಿದ್ದಾನೆ. ಮತ್ತೊಂದು ವಿಶೇಷವೆಂದರೆ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ನಾಲ್ಕು ಹಾಗೂ ನಂತರದ ಸ್ಥಾನಕ್ಕೆ ಕುಸಿದಿದೆ. ಕೆಜೆಪಿ ಮತ ಗಳಿಕೆಯಲ್ಲಿ ಮುಂದಿದ್ದರೂ ಒಂದೇ ಸ್ಥಾನ ಗೆಲ್ಲುವಂತಾಗಿದೆ. ಜೆಡಿಎಸ್ ಕೂಡ ಎರಡು ಕಡೆ ತೀವ್ರ ಪೈಪೋಟಿ ನೀಡುವ ಮೂಲಕ ಎರಡೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ರಾಜುಗೌಡರಿಗೆ ರಜೆ!: ಜಿದ್ದಾಜಿದ್ದಿ ಕ್ಷೇತ್ರವೆಂದೇ ಪರಿಗಣಿಸಿದ್ದ ಸುರಪುರ ಎಸ್ಟಿ ಮೀಸಲು ಕ್ಷೇತ್ರದಲ್ಲಿ ಮಾಜಿ ಸಚಿವ ರಾಜುಗೌಡ ಸೋತು ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ಕಾಂಗ್ರೆಸ್ ಸೇರಲು ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ನಂತರ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಈ ಹಿಂದೆ ರಾಜುಗೌಡರಿಂದ ಎರಡು ಬಾರಿ ಸೋತಿದ್ದ ರಾಜಾ ವೆಂಕಟಪ್ಪ ನಾಯಕರನ್ನು ಈ ಬಾರಿ ಮತದಾರ ಕೈ ಹಿಡಿದಿದ್ದಾನೆ. ಯಾದಗಿರಿಯಲ್ಲಿ ಹಾಲಿ ಶಾಸಕ ಡಾ. ಮಾಲಕರೆಡ್ಡಿ ವಿರೋಧಿ ಅಲೆ ಎಂದು ಹೇಳಲಾಗುತ್ತಿದ್ದರೂ ಅವರ ಸಜ್ಜನಿಕೆ ಮತದಾರ ಬೆಲೆ ನೀಡಿದ್ದಾನೆ. ಗುರುಮಠಕಲ್‌ನಲ್ಲಿ ಬಾಬುರಾವ ಚಿಂಚನಸೂರ ಅವರಿಗೆ ಕ್ಷೇತ್ರದಲ್ಲಿ ಜೆಡಿಎಸ್‌ನ ನಾಗನಗೌಡ ಕಂದಕೂರ ಹಾಗೂ ಕೆಜೆಪಿಯ ವೆಂಕಟರೆಡ್ಡಿ ಮುದ್ನಾಳ ತೀವ್ರ ಪೈಪೋಟಿ ನೀಡಿದರೂ ಅಂತಿಮವಾಗಿ ವಿಜಯಲಕ್ಷ್ಮೀ ಕೈ ಬಿಡಲಿಲ್ಲ. 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಂಥ ವಾತಾವರಣ ಕಂಡುಬರುತ್ತಿತ್ತು. ಆದರೆ ಅಂತಿಮವಾಗಿ ಶಹಾಪುರ ಕ್ಷೇತ್ರ ಕಾಂಗ್ರೆಸ್ ಕೈಬಿಟ್ಟಿತು.
  ಆದರೆ ಒಟ್ಟಾರೆ ಫಲಿತಾಂಶ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಆದ್ದರಿಂದ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸ್ಥಾನಕ್ಕೇರಲು ಜಿಲ್ಲೆಯ ಫಲಿತಾಂಶವೂ ನೆರವಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement