ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಂತ್ರಿ ಪದವಿ ಪಡೆದೇ ವಾಪಸಾಗುತ್ತೇನೆ

Lingaraj Badiger
Updated On : 9 May 2013, 11:07 am

ಯಾದಗಿರಿ: ಹಿಂದುಳಿದ ಕೋಲಿ ಸಮಾಜದಿಂದ ಆಯ್ಕೆಯಾದ ಏಕೈಕ ಶಾಸಕ ನಾನು. ಕಾಂಗ್ರೆಸ್ ಜನಾದೇಶವೂ ಸಿಕ್ಕಿದೆ. ಆದ್ದರಿಂದ ಸಹಜವಾಗಿಯೇ ಮಂತ್ರಿ ಪದವಿ ಆಕಾಂಕ್ಷಿಯಾಗಿದ್ದು, ಅದನ್ನು ಪಡೆದೇ ಬರುತ್ತೇನೆ.
  ಇದು ಗುರುಮಠಕಲ್ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಅವರ ನುಡಿ. ಮತಎಣಿಕೆ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಟ್ಟಿದ್ದರಿಂದ ತೀವ್ರ ಆತಂಕದಲ್ಲಿದ್ದ ಅವರು ಅಂತಿಮವಾಗಿ ವಿಜಯದ ನಗೆ ಬೀರಿದರು. ಎಣಿಕೆ ಕೇಂದ್ರದಿಂದ ಹೊರಬಂದ ಅವರು ಮಾತನಾಡಿ, ಕ್ಷೇತ್ರದ ಮತದಾರ ನನ್ನ ಕೈ ಬಿಡಲಿಲ್ಲ. ವಿರೋಧಿ ಅಭ್ಯರ್ಥಿಗಳು ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದರೂ ಜನ ಅದನ್ನು ನಂಬದೇ ನನ್ನನ್ನು ಆಶೀರ್ವದಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೇ ಮಂತ್ರಿಯಾಗಿ ಬಂದು ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಹೈಕಮಾಂಡ್‌ಗೆ ಬಿಟ್ಟಿದ್ದು: ಯಾದಗಿರಿ ಕ್ಷೇತ್ರದಿಂದ ಗೆದ್ದ ಡಾ.ಎ.ಬಿ. ಮಾಲಕರೆಡ್ಡಿ ಅವರು ಸುದ್ದಿಗಾರರ ಜತೆ ಮಾತನಾಡಿ, ಇದು ಮತದಾರರ ಜಯ. ಪಕ್ಷದ ಕಾರ್ಯಕರ್ತರು ಹಗಲಿರುಳೂ ಶ್ರಮಿಸಿ ನನ್ನ ಗೆಲವಿಗೆ ಸಹಕರಿಸಿದ್ದಾರೆ. ನನ್ನ ಎದುರಾಳಿಗಳು ಏನೇ ಆರೋಪ ಮಾಡಿದರೂ ಮತದಾರ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನನ್ನನ್ನು ಪುನರಾಯ್ಕೆ ಮಾಡಿದ್ದಕ್ಕೆ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರೆತಿದೆ. ಶಾಸಕಾಂಗ ಪಕ್ಷದ ಸಭೆ ನಡೆದು ನಂತರ ಹೈಕಮಾಂಡ್ ನಿರ್ಧಾರದಂತೆ ಸಿಎಂ ಹಾಗೂ ಸಚಿವ ಸ್ಥಾನದ ಹಂಚಿಕೆಯಾಗುತ್ತದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದರು.
ಅಭಿವೃದ್ಧಿಗೆ ಆದ್ಯತೆ: ಸುರಪುರ ಕ್ಷೇತ್ರದಿಂದ ಆಯ್ಕೆಯಾದ ರಾಜಾವೆಂಕಟಪ್ಪ ನಾಯಕ ಮಾತನಾಡಿ, ನಾನು ನಂಬಿದ ಮತದಾರ ನನ್ನ ಕೈಬಿಡಲಿಲ್ಲ. ಆದ್ದರಿಂದ ನಾನೂ ಅವರ ಕೈಬಿಡುವುದಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಆಗಬೇಕಾದದ್ದು ಸಾಕಷ್ಟಿದೆ. ಈ ಹಿಂದಿನ ಶಾಸಕರು ಸುಳ್ಳು ಹೇಳಿ ಜನರನ್ನು ಮೋಸ ಮಾಡಿದ್ದರು. ನೀರಾವರಿ ಯೋಜನೆಗೆ ಆದ್ಯತೆ ನೀಡಿ, 2 ಬೆಳೆ ತೆಗೆಯಲು ಅನುಕೂಲ ಕಲ್ಪಿಸುವ ಗುರಿ ಹೊಂದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರೇ ಟಿಕೆಟ್ ಕೊಡಿಸಿದ್ದು, ಅವರ ಮಾರ್ಗದರ್ಶನದಲ್ಲೇ ಮುಂದುವರಿಯುತ್ತೇನೆ ಎಂದು ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement