ಮ್ಯಾಜಿಕ್‌ಗೆ ಅವಕಾಶ ನೀಡದ ಮತದಾರ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 8
ಮತ ಸಮರದಲ್ಲಿ ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 9 ಮಾಜಿ ಮಂತ್ರಿಗಳು, ಓರ್ವ ವಿಧಾನಸಭೆ ಮಾಜಿ ಉಪ ಸಬಾಪತಿ, ಇಬ್ಬರು ಮಾಜಿ ಸಿಎಂ ಮಕ್ಕಳು, ಓರ್ವ ಕೇಂದ್ರ ಸಚಿವರ ಪುತ್ರ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾಗಿದ್ದವರು ವಿವಿಧ ಪಕ್ಷಗಳಿಂದ ಕಣಕ್ಕಿಳಿದಿದ್ದರು.
ಕಣಕ್ಕಿಳಿದ ಹತ್ತಾರು ಮಾಜಿಗಳ ಪೈಕಿ ಬಿಆರ್ ಪಾಟೀಲ್, ಜಿ. ರಾಮಕೃಷ್ಣ, ಖಮರುಲ್ ಇಸ್ಲಾಂ, ಮಾಲೀಕಯ್ಯ ಗುತ್ತೇದಾರ್ ಮಾತ್ರ ಮತದಾರರ ಒಲವು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದವರೆಲ್ಲರಿಗೂ ಮತದಾರ ತಿರಸ್ಕರಿಸಿದ್ದು ಈ ಚುನಾವಣೆಯ ವಿಶೇಷ ಬೆಳವಣಿಗೆಯಾಗಿದೆ.
ಗೆಲವಿನ ದಾರಿ ದೂರ: ಗುಲ್ಬರ್ಗ ಗ್ರಾಮೀಣ ಮೀಸಲು ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಮಂತ್ರಿಗಳು ಸ್ಪರ್ಧೆಯಲ್ಲಿದ್ದರು. ಬಿಜೆಪಿ ಸರ್ಕಾರದಲ್ಲಿ 2 ಬಾರಿ ಮಂತ್ರಿಯಾಗಿದ್ದ (ಪಶು ಸಂಗೋಪನೆ) ರೇವು ನಾಯಕ ಬೆಳಮಗಿ ಬಿಜೆಪಿ ಹುರಿಯಾಳು. ಕಾಂಗ್ರೆಸ್ ಚಿಂಚೋಳಿ ಟಿಕೆಟ್ ದಕ್ಕಲಿಲ್ಲವೆಂದು ಕೈಬಿಟ್ಟು ಕಜಪ ಮಾಡುವ ಮೂಲಕ ಗ್ರಂಥಾಲಯ, ವಯಸ್ಕರ ಶಿಕ್ಷಣ ಖಾತೆಯ ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಗ್ರಾಮೀಣಕ್ಕೆ ವಲಸೆ ಬಂದು ಅಖಾಡದಲ್ಲಿದ್ದರು. ಪುನರ್ವಿಂಗಡಣೆಗೂ ಮುಂಚೆ ಕಮಲಾಪುರ (ಮೀ) ಕ್ಷೇತ್ರದಿಂದ ಗೆದ್ದಿದ್ದ ಮಾಜಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಜಿ. ರಾಮಕೃಷ್ಣ ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಮತದಾರ ಇಲ್ಲಿ ರಾಮಕೃಷ್ಣರ ಕೈ ಹಿಡಿದು ಎಲ್ಲರಿಗೂ ಸೋಲುಣುಸಿದ್ದಾನೆ.
ಸೋಲುಂಡವರು: ಗುಲ್ಬರ್ಗ ದಕ್ಷಿಣದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ, ಸೇಡಂನಿಂದ ಕೆಜೆಪಿ ಹುರಿಯಾಳಾಗಿ ಕಣದಲ್ಲಿದ್ದ ವೈಜನಾಥ ಪಾಟೀಲ್, ಚಿತ್ತಾಪುರದಿಂದ ಅಖಾಡದಲ್ಲಿದ್ದ ಸಿ. ಗುರುನಾಥ, ಚಿಂಚೋಳಿಯಿಂದ ಕಣದಲ್ಲಿದ್ದ ಸುನೀಲ ವಲ್ಯಾಪೂರೆ ಸೋಲುಂಡಿದ್ದಾರೆ. ಅಫಜಲ್ಪುರದಿಂದ ಮಾಲೀಕಯ್ಯ ಗುತ್ತೇದಾರ್ (ಕಾಂಗ್ರೆಸ್), ಗುಲ್ಬರ್ಗ ಉತ್ತರದಿಂದ ಖಮರುಲ್ ಇಸ್ಲಾಂ (ಕಾಂಗ್ರೆಸ್), ಗುಲ್ಬರ್ಗ ಗ್ರಾಮೀಣದಿಂದ ಜಿ. ರಾಮಕೃಷ್ಣ (ಕಾಂಗ್ರೆಸ್) ಗೆಲವು ಕಂಡಿರುವ ಪ್ರಮುಖರು.
ಅಖಾಡದಲ್ಲಿದ್ದ ಮಾಜಿ ಸಿಎಂ ಪುತ್ರರ ಪೈಕಿ ಕೈಲಾಸ ಪಾಟೀಲ್ ಸೋಲುಂಡಿದ್ದಾರೆ. ಡಾ. ಅಜಯ್‌ಸಿಂಗ್, ಕೇಂದ್ರ ಸಚಿವ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಗೆಲವು ಸಾಧಿಸಿದ್ದಾರೆ. ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿಆರ್ ಪಾಟೀಲ್ ಆಳಂದದಿಂದ ಕೆಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.