ಕವಲಗಾ ಬಿ: ನೀರಿಗಾಗಿ ಹಾಹಾಕಾರ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಕವಲಗಾ ಬಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಗ್ರಾಮದ ಜನತೆ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಗ್ರಾಮವು ಕವಲಗಾ ಬಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು, ಕಳೆದ ಒಂದು ತಿಂಗಳ ಹಿಂದೆ ಗ್ರಾಮಕ್ಕೆ ನೀರು ಸರಬರಾಜು ಯೋಜನೆಯ ಟಿಸಿ ಸುಟ್ಟಿದೆ. ಇದರಿಂದ ಜನತೆ ನೀರಿಗಾಗಿ ದೂರದ ಬಾವಿ ಮತ್ತು ಕೊಳವೆ ಬಾವಿಗಳಿಂದ ನೀರು ತರುವಂತಾಗಿದೆ. ಈ ಕುರಿತು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ, ಗುಲ್ಬರ್ಗ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ದೂರು ಸಲ್ಲಿಸಿ ಕೂಡಲೇ ಟಿಸಿ ಅಳವಡಿಸುವಂತೆ ಕೋರಿದರೂ ಸಹ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಟಿಸಿ ಅಳವಡಿಸಿ ನೀರು ಸರಬರಾಜಿಗೆ ಅನುಕೂಲ ಮಾಡಿಕೊಡದಿದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಕವಲಗಾ (ಬಿ) ಗ್ರಾಪಂ ಅಧ್ಯಕ್ಷ ಚಂದ್ರಕಾಂತ ನಡಗಟ್ಟಿ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.