ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜನತಾ ಸಮಸ್ಯೆ ಕೇಳೋದ್ಯಾವಾಗ?

Vishwanath S
Updated On : 10 May 2013, 12:26 pm

ಕ.ಪ್ರ.ವಾರ್ತೆ ,  ಗುಲ್ಬರ್ಗ ,  ಮೇ 9
ಗುಲ್ಬರ್ಗ ಜಿಲ್ಲೆಯ 9 ಅಸೆಂಬ್ಲಿಗಳಿಂದ ಗೆದ್ದಿರುವ ಕಾಂಗ್ರೆಸ್ಸಿನ 7, ಬಿಜೆಪಿ ಹಾಗೂ ಕೆಜೆಪಿಯ ತಲಾ ಒಬ್ಬೊಬ್ಬರು ಸೇರಿದಂತೆ 9 ಶಾಸಕರು ತಾವು ಗೆದ್ದ ಮಾರನೆ ದಿನ ಏನೆಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.
ಈ ಪ್ರಶ್ನೆ ಮುಂದಿಟ್ಟುಕೊಂಡು 'ಕನ್ನಡಪ್ರಭ' ಶಾಸಕರ ಹಿಂದೆ ಬಿದ್ದಾಗ ಬಹುತೇಕರು ಗೆದ್ದ ತಕ್ಷಣವೇ ಅವರವರ ಕ್ಷೇತ್ರದ ಪ್ರಮುಖ ಗುಡಿ- ಗುಂಡಾರ, ಮಠ- ದರ್ಗಾ, ಮಸೀದಿಗಳಿಗೆ ಭೇಟಿ ಕೊಟ್ಟರು. ಅಲ್ಲೆಲ್ಲಾ ಪೂಜೆ, ಪ್ರಾರ್ಥನೆ ಸಲ್ಲಿಸಿ ದೇವರನ್ನು ನಮಿಸಿದರು. ಬಹುತೇಕರು ಕಾಂಗ್ರೆಸ್ಸಿಗರೇ ಆಗಿರುವುದರಿಂದ ಹೈಕಮಾಂಡ್ ಶುಕ್ರವಾರ ಬೆಂಗಳೂರಲ್ಲಿ ತುರ್ತು ಸಭೆ ಕರೆದಿರುವುದರಿಂದ ಅವರೆಲ್ಲರೂ ಕ್ಷೇತ್ರ ಭೇಟಿ ಮೊಟಕುಗೊಳಿಸಿ ರಾಜಧಾನಿಗೆ ಧಾವಿಸಿದ್ದಾರೆ. ಬಿಜೆಪಿಯ ನಗರ ಶಾಸಕ ದತ್ತಾತ್ರೇಯ, ಕೆಜೆಪಿಯ ಆಳಂದ ಶಾಸಕ ಬಿ.ಆರ್. ಪಾಟೀಲ್ ಮಾತ್ರ ಯಾವ ಧಾವಂತವಿಲ್ಲದಂತೆ ಕ್ಷೇತ್ರ ಸಂಚರಿಸುತ್ತ ಮಂದಿರ- ಮಸೀದಿಗಳಿಗೆ ಭೇಟಿ ಕೊಟ್ಟರಲ್ಲದೆ ಮತದಾರರನ್ನು ಕಂಡು ಅಭಿನಂದಿಸಿದ ನೋಟಗಳು ಕಂಡವು.
ಪಕ್ಷಪಾತ ಧೋರಣೆ: ಗೆದ್ದವರ ಪೈಕಿ ಯಾರೂ ನೇರವಾಗಿ ಮತದಾರರ ಸಭೆಗಳನ್ನು ನಡೆಸಿ, ಅವರ ಸುಖ- ದುಃಖ ಆಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿಲ್ಲ. ತಮಗೆ ಹೆಚ್ಚಿನ ಮತ ಬಂದಂತಹ ಪ್ರದೇಶಗಳಿಗೆ ಭೇಟಿ ನೀಡಿ ಪಕ್ಷಪಾತ ಧೋರಣೆಗೂ ಕಾರಣರಾದರು. ಬೇಸಿಗೆಯಲ್ಲಿ ಅನೇಕ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಸಮಸ್ಯಾತ್ಮಕ ಗ್ರಾಮಗಳಿಗೆ ಶಾಸಕರು ಭೇಟಿ ನೀಡಬಹುದೆಂಬ ನಿರೀಕ್ಷೆಗಳು 2ನೇ ದಿನವೂ ಹುಸಿಯಾಗಿವೆ. ಆದಾಗ್ಯೂ ಮತದಾರರು ನೂತನ ಶಾಸಕರಿಗೆ ಪ್ರೀತಿಯಿಂದಲೇ ಸ್ವಾಗತಿಸಿ ಸತ್ಕರಿಸುತ್ತಿದ್ದಾರೆ. ಸಮಸ್ಯೆಗಳನ್ನು ಮರೆತು ಮತದಾರರು ಮಾಡುವ ಆದರ ಆತಿಥ್ಯಕ್ಕಾದರೂ ಶಾಸಕರು ಸ್ಪಂದಿಸಬೇಕು ಎಂಬುದು ಬಲ್ಲವರ ಅಭಿಮತ.
ದತ್ತು ಕ್ಷೇತ್ರ ಸಂಚಾರ: ಗುಲ್ಬರ್ಗ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಶಾಸಕರಾದ ಮೊದಲ ದಿನ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಕ್ಷೇತ್ರ ಸಂಚಾರ ನಡೆಸಿದರು. ಈ ವೇಳೆ 'ಕನ್ನಡಪ್ರಭ' ದೊಂದಿಗೆ ಮಾತನಾಡಿ, ನಮ್ಮ ಮೇಲಿನ ಮತದಾರರ ನಂಬಿಕೆಗೆ ಚ್ಯುತಿ ಆಗದಂತೆ ಕ್ಷೇತ್ರದ ಅಭಿವೃದ್ಧಿಗೊಳಿಸಿ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿರುವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಈಗಿನಿಂದಲೇ ಕ್ರಿಯಾಯೋಜನೆ ರೂಪಿಸಿ ಪ್ರತಿದಿನ ಬೆ.8ರಿಂದ 10ರವರೆಗೆ ಒಂದು ವಾರ್ಡಿನ ಬಡಾವಣೆಗೆ ಸಂಚರಿಸಿ ಅಲ್ಲಿನ ಜನರ ಸುಖ- ದುಃಖ ಆಲಿಸುವುದಾಗಿ ದತ್ತಾತ್ರೇಯ ಭರವಸೆ ನೀಡಿದ್ದಾರೆ.
ಖಮರುಲ್ ದೆಹಲಿಗೆ ದೌಡು: ಗುಲ್ಬರ್ಗ ಉತ್ತರ ಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ ಅವರ ಮನೆಗೆ 'ಕನ್ನಡಪ್ರಭ' ಭೇಟಿ ನೀಡಿದಾಗ ಮಂತ್ರಿ ಸ್ಥಾನ ನೀಡುವ ನಿಟ್ಟಿನಲ್ಲಿ ಚರ್ಚಿಸಲು ಹೈಕಮಾಂಡ್ ದೆಹಲಿ ಬುಲಾವ್ ಮಾಡಿರುವುದರಿಂದ ಅವರು ಚುನಾವಣೆ ಫಲಿತಾಂಶ ಪ್ರಕಟಗೊಂಡ ರಾತ್ರಿಯೇ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹನುಮಂತನಿಗೆ ನಮಿಸಿದ ಡಾ. ಅಜಯ್: ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಬುಧವಾರ ತಡರಾತ್ರಿ ತಮ್ಮ ತವರೂರು ನೆಲೋಗಿಗೆ ತೆರಳಿ ಬಲಭೀಮಸೇನ ದೇವರ ದರುಶನ ಪಡೆದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ತಮ್ಮ ತಂದೆಗೆ ನೀಡಿದ ಪ್ರೀತಿಯನ್ನು ಜೇವರ್ಗಿ ಜನತೆ ನನಗೂ ನೀಡಿದ್ದೀರಿ. ಬರುವ ದಿನಗಳಲ್ಲಿ ಜನರ ಸೇವೆ ಪ್ರಾಮಾಣಿಕವಾಗಿ ಮಾಡುವುದಾಗಿಯೂ ಭರವಸೆ ನೀಡಿದರು. ಗುರುವಾರ ತಮ್ಮ ನಿವಾಸದಲ್ಲಿ ಕಾರ್ಯಕರ್ತರು, ಮುಖಂಡರ ಹಾಗೂ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
ಎಲ್ಲಮ್ಮನ ದರ್ಶನ ಪಡೆದ ಪ್ರಿಯಾಂಕ್: ಪ್ರಿಯಾಂಕ್ ಖರ್ಗೆ ಗುರುವಾರ ಬೆಳಗ್ಗೆ ಕ್ಷೇತ್ರ ಸಂಚಾರ ಕೈಗೊಂಡರು. ನಂತರ ಚಿತ್ತಾಪುರಕ್ಕೆ ಹೋದವರೇ ನಾಗವೇಲಾಂಬಿಕಾ ಮಂದಿರ, ಚಿತ್ತೇಶಾವಲಿ ದರ್ಗಾ, ಕಂಬಳೇಶ್ವರ ಮಠಗಳಿಗೆ ಭೇಟಿ ನೀಡಿ ಪೂಜೆ- ಪುನಸ್ಕಾರ ಸಲ್ಲಿಸಿದರು. ಇದಾದ ನಂತರ ಪಕ್ಷದ ಕಚೇರಿಗೆ ತೆರಳಿ ಅಲ್ಲಿ ಕಾರ್ಯಕರ್ತರು, ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಹೈಕಮಾಂಡ್ ಬುಲಾವ್ ಇದ್ದ ಕಾರಣ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ವೀರಭದ್ರೇಶ್ವರನಿಗೆ 'ಶರಣು': ಸೇಡಂ ಶಾಸಕರಾಗಿ ಸತತ 3ನೇ ಬಾರಿಗೆ ಆಯ್ಕೆಯಾಗಿ ಹ್ಯಾಟ್ರಿಕ್ ಬಾರಿಸಿದ ಕಾಂಗ್ರೆಸ್ಸಿನ ಡಾ. ಶರಣಪ್ರಕಾಶ ಪಾಟೀಲ್ ಅವರು ಫಲಿತಾಂಶ ತಮ್ಮ ಪರವೆಂದು ಅರಿತ ಮರುಕ್ಷಣವೇ ಬುಧವಾರ ತಡ ರಾತ್ರಿಯೇ ಸೇಡಂಗೆ ಭೇಟಿ ಕೊಟ್ಟರು. ಅಲ್ಲಿ ತಮ್ಮ ಬರುವಿಕೆಗೆ ಕಾಯುತ್ತಿದ್ದ ನೂರಾರು ಕಾರ್ಯಕರ್ತರನ್ನು ಮಾತನಾಡಿಸಿ ಅಭಿನಂದಿಸಿದರು. ಜೊತೆಗೇ ರಾತ್ರಿಯೇ ಚಿಂಚೋಳಿ ತಾಲೂಕಿನ ಸುಲೇಪೇಠ ಗ್ರಾಮಕ್ಕೆ ತೆರಳಿ ವೀರಭದ್ರೇಶ್ವರ ದೇವರ ದರ್ಶನ ಪಡೆದರು. ನಂತರ ಜಾತ್ರೆ ಹಿನ್ನೆಲೆಯಲ್ಲಿನ ಸಾಮಾಜಿಕ ನಾಟಕ ಉದ್ಘಾಟಿಸಿದರು. ಮರುದಿನ ಗುರುವಾರ ಬೆಳಗ್ಗೆ 12ರವರೆಗೆ ಗುಲ್ಬರ್ಗದಲ್ಲಿದ್ದ ಡಾ. ಶರಣ ಹೈಕಮಾಂಡ್ ಬುಲಾವ್ ಬಂದಿದ್ದರಿಂದ ಹೈದ್ರಾಬಾದ್ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಗುಲ್ಬರ್ಗದಲ್ಲೇ ಡಾ. ಜಾಧವ ಠಿಕಾಣಿ: ಇದೇ ಮೊದಲ ಬಾರಿಗೆ ಶಾಸಕರಾಗಿರುವ ಡಾ. ಉಮೇಶ ಜಾಧವ ತಮ್ಮನ್ನು ಆರಿಸಿ ಕಳುಹಿಸಿದ್ದ ಚಿಂಚೋಳಿಗೆ ಶಾಸಕರಾದ ಮಾರನೇ ದಿನ ಭೇಟಿ ಕೊಡಲಿಲ್ಲವಾದರೂ ಅವರು ಇಲ್ಲಿನ ನಗರ ಎನ್‌ಜಿಒ ಕಾಲೋನಿಯಲ್ಲಿನ ತಮ್ಮ ನಿವಾಸದಲ್ಲೇ ಕಾರ್ಯಕರ್ತರ ಸಭೆ ನಡೆಸಿದರು. ಅಭಿಮಾನಿ ಬಳಗವನ್ನು ಕಂಡು ಅಭಿನಂದಿಸಿದರು. ಇವರಿಗೂ ಹೈಕಮಾಂಡ್ ಬುಲಾವ್ ಬಂದ ಕಾರಣ ಇವರೂ ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ತೆರಳಿದ್ದಾರೆ.
ಬಿಆರ್‌ಪಿ ವಿಜಯೋತ್ಸವ: ಶಾಸಕರಾದ 2ನೇ ದಿನ ಗುರುವಾರ ಕೆಜೆಪಿ ನಾಯಕ ಬಿ.ಆರ್. ಪಾಟೀಲ್ ಆಳಂದ ಪಟ್ಟಣದಲ್ಲಿ ವಿಜಯೋತ್ಸವ ನಡೆಸಿದರು. ಜನರನ್ನು ನಮಸ್ಕರಿಸುತ್ತ ತಮಗೆ ಆಶೀರ್ವದಿಸಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು. ಇದಾದ ನಂತರ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಸೋಲಲು ಯಡಿಯೂರಪ್ಪ ಇಲ್ಲದ್ದೇ ಕಾರಣ ಎಂದರಲ್ಲದೆ ಜನತೆ ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಬೆಂಬಲಿಸಿಲ್ಲ. ಅದರ ನೇರ ಲಾಭ ಕಾಂಗ್ರೆಸ್ಸಿಗೆ ಆಗಿದೆ ಎಂದರು. ಜನಪರ ಕಾಳಜಿ ಇರುವವರು ಮುಖ್ಯಮಂತ್ರಿಗಳಾಗಬೇಕೆಂಬುದು ಬಿಆರ್ ನಿಲುವು. ಕೆಜೆಪಿ ಮುಂದಿನ ನಡೆ ಏನು ಎಂಬುದನ್ನು ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಧರಿಸುತ್ತದೆ ಎಂದರು.
ರಾಮಕೃಷ್ಣ ಕ್ಷೇತ್ರ ಸಂಚಾರ: ಮಾಜಿ ಮಂತ್ರಿ ಜಿ.ರಾಮಕೃಷ್ಣ ಶಾಸಕರಾಗಿ ಆಯ್ಕೆಯಾದ ದಿನವೇ ರಾತ್ರಿ ಕಲ್ಮೂಡಕ್ಕೆ ಭೇಟಿ ನೀಡಿ ಜನರೊಂದಿಗೆ ಚರ್ಚಿಸಿದರು. ಗುರುವಾರ ಹಾರಕೂಡ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದಾದ ನಂತರ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ ತಮ್ಮನ್ನು ಹರಸಿದ ಮತದಾರರಿಗೆ ಅಭಿನಂದಿಸಿದರು. ಇವರೂ ಬೆಂಗಳೂರು ಸಭೆಗಾಗಿ ಪ್ರಯಾಣ ಬೆಳೆಸಿದ್ದಾರೆ.
ಮಾಲೀಕಯ್ಯಾ ಬೆಂಗಳೂರಿಗೆ: 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಮಾಲೀಕಯ್ಯಾ ಗುತ್ತೇದಾರ್ ಗಾಣಗಾಪುರ ದತ್ತಾತ್ರೇಯ ದೇವರ ದರುಶನ ಪಡೆದರು. ಇದಲ್ಲದೆ ಕ್ಷೇತ್ರದ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಕ್ಷೇತ್ರ ಸಂಚಾರ ಮೊಟಕುಗೊಳಿಸಿ ಇವರೂ ಗುರುವಾರವೇ ಬೆಂಗಳೂರಿಗೆ ತೆರಳಿದ್ದಾರೆ.
3,495 ಮತಗಳು ತಿರಸ್ಕೃತ
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಒಟ್ಟು 17,57,588 ಮತದಾರರ ಪೈಕಿ 11,24,423 ಕ್ರಮಬದ್ಧ ಮತಗಳು ಹಾಗೂ 14 ಟೆಂಡರ್ ಮತಗಳು ಚಲಾವಣೆಯಾಗಿದ್ದು, ಒಟ್ಟು 3,495 ಮತಗಳು ತಿರಸ್ಕೃತವಾಗಿವೆ ಎಂದು ಜಿಲ್ಲಾ ಚುನವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ.

ಕ್ಷೇತ್ರ    ಒಟ್ಟು ಮತ    ಕ್ರಮಬದ್ಧ     ತಿರಸ್ಕೃತ    ಟೆಂಡರ್
ಅಫಜಲ್ಪುರ     1,90,844     1,29,224     618    -
ಜೇವರ್ಗಿ     1,97,259     1,44,563     2    -
ಚಿತ್ತಾಪುರ     1,90,446     1,23,716     288    6
ಸೇಡಂ     1,85,186     1,35,976     2     -
ಚಿಂಚೋಳಿ     1,69,292     1,12,983     358    1
ಗುಲ್ಬರ್ಗ(ಗ್ರಾ)     2,11,097     1,23,434     283    -
ಗುಲ್ಬರ್ಗ(ದ)     2,11,939     1,17,303     1,285    2
ಗುಲ್ಬರ್ಗ(ಉ)     2,08,654     1,04,839     4     -
ಆಳಂದ     1,92,871     1,32,385     655    5

-ಅವಧಾನಿ/ಶಂಕರಬಾಬು ರೆಡ್ಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement