ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅರ್ಥಪೂರ್ಣ ಬಸವ ಜಯಂತಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

Lingaraj Badiger
Updated On : 11 May 2013, 11:45 am

ಯಾದಗಿರಿ: ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಮೇ 13ರಂದು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಸವೇಶ್ವರ ಜಯಂತಿ ಆಚರಣೆ ಕುರಿತ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಮೇ 13ರಂದು ಬೆ.9 ಗಂಟೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವೇಶ್ವರ ಜಯಂತಿ ಮುಖ್ಯ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ಮೆರವಣಿಗೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕಾರ್ಯಕ್ರಮದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಅಂದು ಸಂಜೆ 6ಕ್ಕೆ ಬಸವೇಶ್ವರ ಜಯಂತಿ ಅಂಗವಾಗಿ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮೆರವಣಿಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನೀರಿನ ವ್ಯವಸ್ಥೆ ಮಾಡುವಂತೆ ನಗರಸಭೆಯ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಮೆರವಣಿಗೆಯು ವೀರಶೈವ ಕಲ್ಯಾಣ ಮಂಟಪದ ಮೂಲಕ ಗಾಂಧಿಚೌಕ್, ಬಸವೇಶ್ವರ ಗುಡಿ ಮೂಲಕ ಸಾಗಿ ಮತ್ತೆ ವೀರಶೈವ ಕಲ್ಯಾಣ ಮಂಟಪದಲ್ಲಿ ಮುಕ್ತಾಯಗೊಳ್ಳಲಿದೆ. ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಅರ್ಥಪೂರ್ಣವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್ ಮಾತನಾಡಿ, ಬಸವೇಶ್ವರ ಜಯಂತಿ ಆಚರಣೆ ಕುರಿತು ವಿವರ ನೀಡಿದರು. ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ವರಕ್ಷಿಣೆ ಕಿರುಕುಳ;
ಆತ್ಮಹತ್ಯೆಗೆ ಯತ್ನ
ಗುಲ್ಬರ್ಗ: ಗಂಡ, ಅತ್ತೆ, ಮಾವ ಮತ್ತು ಮೈದುನ ನೀಡುತ್ತಿದ್ದ ದೈಹಿಕ, ಮಾನಸಿಕ ಕಿರುಕಳ ಸಹಿಸದೆ ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಳಂದ ತಾಲೂಕಿನ ಮಾಡಿಯಾಳ ತಾಂಡಾದಲ್ಲಿ ನಡೆದಿದೆ. ಪಾರುಬಾಯಿ ರಾಠೋಡ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಮದೇವನೊಂದಿಗೆ ಮದುವೆಯಾಗಿ 9 ವರ್ಷವಾಗಿದೆ. ಅಡುಗೆ, ಹೊಲದ ಕೆಲಸ ಮಾಡಲು ಬರುವುದಿಲ್ಲ ಎಂದು ಗಂಡ, ಅತ್ತೆ, ಮಾವ ಮತ್ತು ಮೈದುನ ದೈಹಿಕ- ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಕಿರುಕುಳ ತಾಳಲಾರದೆ ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪಾರುಬಾಯಿ ಸಹೋದರ ರಾಮಚಂದ್ರ ಚವ್ಹಾಣ ನಿಂಬರ್ಗಾ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement