ಕೆಜೆಪಿ: ಪರಾಭವಗೊಂಡ ಮುದ್ನಾಳ ಸಹೋದರರು
ಯಾದಗಿರಿ: ಬಿಜೆಪಿಯಿಂದ ಹೊರಬಂದು ಕೆಜೆಪಿಯಿಂದ ಸ್ಪರ್ಧಿಸಿದ್ದ ಡಾ.ವೀರಬಸವಂತರೆಡ್ಡಿ ಮುದ್ನಾಳ ಹಾಗೂ ವೆಂಕಟರೆಡ್ಡಿ ಮುದ್ನಾಳ ಇಬ್ಬರೂ ಪರಾಭವಗೊಂಡಿದ್ದಾರೆ.
ಯಾದಗಿರಿ ಕ್ಷೇತ್ರದಲ್ಲಿ ಡಾ.ಮುದ್ನಾಳ ಹಾಗೂ ಗುರುಮಠಕಲ್‌ನಿಂದ ವೆಂಕಟರೆಡ್ಡಿ ಮುದ್ನಾಳ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನೀಡಿ ಅಂತಿಮವಾಗಿ ಮತದಾರರ ಆದೇಶಕ್ಕೆ ತಲೆಬಾಗಿದ್ದಾರೆ. ಯಾದಗಿರಿಯಲ್ಲಿ ಹಾಲಿ ಶಾಸಕ ಡಾ.ಮಾಲಕರೆಡ್ಡಿ ಅವರಿಗೆ ಸೆಡ್ಡು ಹೊಡೆದು ಗೆಲ್ಲುವ ಕುದುರೆ ಎಂದೇ ಡಾ.ಮುದ್ನಾಳ ಬಿಂಬಿತರಾಗಿದ್ದರು.
ಹಾಲಿ ಶಾಸಕರ ವಿರೋಧಿ ಅಲೆಯನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳಲು ಕಸರತ್ತು ನಡೆಸಿದ್ದರು. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಲಕರೆಡ್ಡಿ ವಿರುದ್ಧ ಡಾ.ಮುದ್ನಾಳ ಗೆದ್ದಿದ್ದರು. ಆದರೆ 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮಾಲಕರೆಡ್ಡಿ ವಿರುದ್ಧ ಸೋತಿದ್ದರು. ಈಗ ಮತ್ತೆ ಅವರಿಂದಲೇ ಸೋಲು ಕಂಡಿದ್ದಾರೆ. ಆದರೂ ಗಮನೀಯ ವೋಟು ಪಡೆದಿದ್ದಾರೆ.
ಗುರುಮಠಕಲ್‌ನಲ್ಲಿ ವೆಂಕಟರೆಡ್ಡಿ ಮುದ್ನಾಳ ಕೆಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರಗೆ ಸ್ಪರ್ಧೆ ಒಡ್ಡಿದ್ದರು. ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚಿಂಚನಸೂರ ವಿರುದ್ಧ ಸೋತಿದ್ದರು.
ಈ ಬಾರಿ ಮತ ಎಣಿಕೆ ಆರಂಭದ ಹಂತದಲ್ಲಿ ಮುನ್ನಡೆ ಗಳಿಸಿಕೊಂಡಿದ್ದರೂ ಅದನ್ನು ಕೊನೆತನಕ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೇ ಕೊನೆ ಹಂತದಲ್ಲಿ ಕಾಂಗ್ರೆಸ್‌ನ ಚಿಂಚನಸೂರ ಗೆದ್ದರೆ, ಜೆಡಿಎಸ್‌ನ ನಾಗನಗೌಡ ಕಂದಕೂರ ಎರಡನೇ ಸ್ಥಾನಕ್ಕೇರಿದರು. ಮುದ್ನಾಳ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಸತತ ಎರಡು ಚುನಾವಣೆ ಎದುರಿಸಿ, ಕಣದಲ್ಲಿದ್ದ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದರೂ ಗೆಲ್ಲಲು ಸಾಧ್ಯವಾಗದಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇನ್ನಷ್ಟು ಸಂಘಟನಾತ್ಮಕ ಹೋರಾಟ ನಡೆಸಿದ್ದರೆ ಒಬ್ಬರಾದರೂ ಗೆಲ್ಲಬಹುದಿತ್ತು ಎಂಬ ಮಾತು ಕೇಳಿಬರುತ್ತಿದೆ.