ತೋಟಗಾರಿಕೆ ತರಬೇತಿಗೆ ಅರ್ಜಿ
ಗುಲ್ಬರ್ಗ: ಗುಲ್ಬರ್ಗ ಜಿಲ್ಲೆಯ ರೈತರ ಮಕ್ಕಳಿಗಾಗಿ 2013-14ನೇ ಸಾಲಿನ 10 ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮವನ್ನು ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ತರಬೇತಿ ಕೇಂದ್ರದಲ್ಲಿ ನೀಡಲಾಗುವುದು. ತರಬೇತಿಯು ಜೂನ್ 1ರಿಂದ ಪ್ರಾರಂಭವಾಗಲಿದೆ. ಸದರಿ ತರಬೇತಿಗಾಗಿ ಗುಲ್ಬರ್ಗ ಜಿಲ್ಲೆಯ ರೈತರ ಮಕ್ಕಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಯು ಕನಿಷ್ಟ ಎಸ್ಎಸ್ಎಲ್ಸಿ ಪಾಸಾಗಿರಬೇಕು ಹಾಗೂ ದೃಢಕಾಯರಾಗಿರಬೇಕು. ತರಬೇತಿ ಪ್ರವೇಶ ಬಯಸುವ ಅಭ್ಯರ್ಥಿ ತಂದೆ-ತಾಯಿ-ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರುಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ತರಬೇತಿ ಅರ್ಜಿ ನಮೂನೆಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಗುಲ್ಬರ್ಗ ಕಚೇರಿಯಲ್ಲಿ ಶುಲ್ಕ ಪಾವತಿಸಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಮೇ 25 ಕೊನೆ ದಿನ. ಮೇ 28ರಂದು ಬೆಳಗ್ಗೆ 10ಕ್ಕೆ ತಮ್ಮ ಮೂಲ ದಾಖಲಾತಿಗಳೊಂದಿಗೆ ತೋಟಗಾರಿಕೆ ಉಪನಿರ್ದೇಶಕರು(ಜಿಪಂ) ಗುಲ್ಬರ್ಗ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ದೂ.08472- 229479ನ್ನು ಸಂಪರ್ಕಿಸಿ ಪಡೆಯಬಹುದು
ಹೇಮರೆಡ್ಡಿ ಮಲ್ಲಮ್ಮ 591ನೇ ಜಯಂತ್ಯುತ್ಸವ
ಬೀದರ್: ಹೇಮರೆಡ್ಡಿ ಮಲ್ಲಮ್ಮ ಅವರ 591ನೇ ಜಯಂತೋತ್ಸವ ನಿಮಿತ್ತ ನಗರದಲ್ಲಿ ಶುಕ್ರವಾರ ಭವ್ಯ ಮೆರವಣಿಗೆ ನಡೆಯಿತು. ಹೇಮರೆಡ್ಡಿ ಮಲ್ಲಮ್ಮ ವಿಚಾರ ವೇದಿಕೆ ಟ್ರಸ್ಟ್ ವತಿಯಿಂದ ಮೆರವಣಿಗೆ ಆಯೋಜಿಸಲಾಗಿದ್ದು, ಅಲಂಕೃತ ವಾಹನದಲ್ಲಿ ಮಲ್ಲಮ್ಮ ಭಾವಚಿತ್ರದ ಮೆರವಣಿಗೆ ಸಿದ್ಧಾರೂಢ ಮಠದಿಂದ ಆರಂಭವಾಗಿ ಮನ್ನಳ್ಳಿ ರಸ್ತೆಯ ಹೇಮರೆಡ್ಡಿ ಮಲ್ಲಮ್ಮ ಮಂದಿರದವರೆಗೆ ಸಾಗಿತು. ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಮಹಿಳೆಯರು ಕಳಸ ಹೊತ್ತು ಸಾಗಿದರೆ ಡಿಜೆ ಸಂಗೀತಕ್ಕೆ ಯುವಕರು ಹೆಜ್ಜೆ ಹಾಕಿದರು. ಟ್ರಸ್ಟ್ ಅಧ್ಯಕ್ಷ ಶಂಕರ್ರಾವ್ ರೆಡ್ಡಿ ಚಿಟ್ಟಾ, ವಿಜಯರೆಡ್ಡಿ ವಕೀಲರು, ಬಾಬು ರೆಡ್ಡಿ, ಮಾಣಿಕರೆಡ್ಡಿ ಹಾಗೂ ಪೆಂಟಾರೆಡ್ಡಿ ಮತ್ತಿತ್ತರು ಇದ್ದರು.