ಖರ್ಗೆಗೆ ತಪ್ಪಿದ ಸಿಎಂ ಸ್ಥಾನ; ದುರದೃಷ್ಟಕರ
ಗುಲ್ಬರ್ಗ: ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗದಿರುವುದು ನಮ್ಮ ಭಾಗದ ಜನತೆಗೆ ಒಂದು ದುರದೃಷ್ಟಕರ ಎಂದು ಹೈ- ಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಗೌರವ ಸಹ ಕಾರ್ಯದರ್ಶಿ ಸಂದೀಪ ಜವಳ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಒಬ್ಬ ಸರಳ, ಸಜ್ಜನ, ಪ್ರಾಮಾಣಿಕ, ನಿಷ್ಠಾವಂತ ರಾಜಕಾರಣಿ ಹಾಗೂ ಅಭಿವೃದ್ಧಿಯ ಹರಿಕಾರ. ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ 371ನೇ(ಜೆ) ವಿಧಿ ತಿದ್ದುಪಡಿಯನ್ನು ಅಧಿಕೃತವಾಗಿ ಜಾರಿಗೊಂಡಿದೆ. ಇದರ ಅಡಿಯಲ್ಲಿ ಕಾಯ್ದೆ ಕಾನೂನು ರಚನೆ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಈ ವಿಭಾಗದವರೆ ಮುಖ್ಯಮಂತ್ರಿಯಾದರೆ ಅನುಕೂಲವಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಖರ್ಗೆ ಅವರು ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಐಎಸ್ಐಸಿ ವೈದ್ಯಕೀಯ ಸಂಕೀರ್ಣಗಳನ್ನು ಗುಲ್ಬರ್ಗಕ್ಕೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅದೇ ರೀತಿ ಹೈ.ಕ. ಭಾಗಕ್ಕೆ 371ನೇ ವಿಧಿ ತಿದ್ದುಪಡಿ ತರುವಲ್ಲಿ ಕೂಡ ಅವರ ಪಾತ್ರ ಮಹತ್ವದ್ದು, ಖರ್ಗೆ ಮುಖ್ಯಮಂತ್ರಿ ಸ್ಥಾನದಿಂದ ವಂಚಿತಗೊಂಡಿರುವುದು ಹೈ .ಕ. ಪ್ರದೇಶಕ್ಕೆ ಇದೊಂದು ದೊಡ್ಡ ನಷ್ಟ ಎಂದು ತಿಳಿಸಿದ್ದಾರೆ.