'ಡಾ. ಶರಣ್ಗೆ ಸಚಿವ ಸ್ಥಾನ ನೀಡಿ'
ಚಿಂಚೋಳಿ: ಸೇಡಂ ವಿಧಾನಸಭಾ ಮತಕ್ಷೇತ್ರದಿಂದ ಸತತವಾಗಿ 3ನೇ ಬಾರಿ ಶಾಸಕರಾಗಿ ಗೆಲವು ಸಾಧಿಸಿ ಚುನಾಯಿತಗೊಂಡಿರುವ ಕಾಂಗ್ರೆಸ್ನ ಡಾ. ಶರಣಪ್ರಕಾಶ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು.
ನಿಯೋಜಿತ ಮುಖ್ಯಮಂತ್ರಿ ಸಿದ್ರಾಮಯ್ಯನವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಅಣವಾರ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಹೆಬೂಬಸಾಬ್ ಪರದಾರ ಮೋತಕಪಳ್ಳಿ ಕೆಪಿಸಿಸಿ ಅಧ್ಯಕ್ಷರಿಗೆ ಮತ್ತು ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.
ಸೇಡಂ ಮತಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿದ ಶಾಸಕ ಡಾ. ಶರಣಪ್ರಕಾಶ ಪಾಟೀಲರು ತಮ್ಮ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರ ಮೆಚ್ಚುಗೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಸುಲೇಪೇಟ್ ವಲಯದಲ್ಲಿ ಬರುವ 31 ಗ್ರಾಮಗಳಲ್ಲಿ ಸರ್ಕಾರದ ಅನೇಕ ಯೋಜನೆಗಳಲ್ಲಿ ಹಣ ಮಂಜೂರಿಗೊಳಿಸಿ ಗ್ರಾಮೀಣ ಪ್ರದೇಶದ ಜನರಿಗೆ ಮೂಲಸೌಲಭ್ಯಗಳನ್ನು ನೀಡಿದ್ದಾರೆ.ಹಿಂದುಳಿದ ಪ್ರದೇಶದ ಜನರಿಗೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ.