ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಳೆ ಶರಣ ಸಂಗಮ

Vishwanath S
Updated On : 12 May 2013, 11:52 am

ಜೇವರ್ಗಿ: ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೇ 13ರಂದು ಸೋಮವಾರ ಬಸವ ಕೇಂದ್ರ ತಾಲೂಕ ಘಟಕದ ವತಿಯಿಂದ ಶರಣ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಗದಗಿನ ಬಸವ ತತ್ವ ಪ್ರಚಾರಕ ಶಂಕ್ರಣ್ಣ ಅಂಗಡಿ ವಿಶೇಷ ಉಪನ್ಯಾಸ ನೀಡಲಿದ್ದು, ನಿವೃತ್ತ ಪೊಲೀಸ್ ಅಧಿಕಾರಿ ತಿಪ್ಪಣ್ಣ ದೊಡ್ಮನಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನಿವೃತ್ತ ಶಿಕ್ಷಕ ವೀರಯ್ಯ ಸ್ವಾಮಿ ಹಿರೇಮಠ ಆಗಮಿಸಲಿದ್ದಾರೆ ಎಂದು ಬಸವ ಕೇಂದ್ರ ತಾಲೂಕು ಅಧ್ಯಕ್ಷ ಶರಣ ಬಸವ ಕಲ್ಲಾ ತಿಳಿಸಿದ್ದಾರೆ.

ಸರ ದರೋಡೆ
ಗುಲ್ಬರ್ಗ: ಬಾಲಕರಿಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಮತ್ತು ಮೊಬೈಲ್ ದೋಚಿಕೊಂಡು ಹೋದ ಘಟನೆ ನಗರದ ಹಿಂದಿ ಪ್ರಚಾರ ಸಭಾ ಹತ್ತಿರದ ಪಾಳುಬಿದ್ದ ಸರ್ಕಾರಿ ವಸತಿ ನಿಲಯದ ಬಳಿ ನಡೆದಿದೆ. ವಿಜಯನಗರ ಕಾಲೋನಿಯ ಸಂಗಮೇಶ್ವರ ತಂದೆ ಸಿದ್ರಾಮಪ್ಪ ಪಾಟೀಲ್(15) ಮತ್ತು ಆತನ ಗೆಳೆಯ ಶಿವ ಸಜ್ಜನ್ ಮೇಲೆ ಹಲ್ಲೆ ನಡೆಸಿ 29 ಸಾವಿರ ಮೌಲ್ಯದ 10 ಗ್ರಾಂ ಲಾಕೇಟ್ ಮತ್ತು 4 ಸಾವಿರ ಮೌಲ್ಯದ ಮೊಬೈಲ್ ದೋಚಿಕೊಂಡು ಹೋಗಲಾಗಿದೆ. ಸಂಗಮೇಶ್ವರ ಮತ್ತು ಶಿವ ಅವರು ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಆಟವಾಡುತ್ತಿದ್ದ ವೇಳೆ ಬೈಕ್ ಮೇಲೆ ಬಂದ ಇಬ್ಬರು ದರೋಡೆಕೋರರು ಇವರನ್ನು ಬೆದರಿಸಿ ಬೈಕ್ ಮೇಲೆ ಕೂಡಿಸಿಕೊಂಡು ಹಿಂದಿ ಪ್ರಚಾರ ಸಭಾ ಹತ್ತಿರದ ಹಾಳು ಬಿದ್ದ ಸರ್ಕಾರಿ ವಸತಿ ನಿಲಯಕ್ಕೆ ಕರೆದೊಯ್ದು ಹಲ್ಲೆ ನಡೆಸಿ ಚಿನ್ನದ ಸರ ಮತ್ತು ಮೊಬೈಲ್ ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನಿಗೆ ಗಾಯ
ಗುಲ್ಬರ್ಗ: ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬ ಗಾಯಗೊಂಡ ಘಟನೆ ರಾಮ ಮಂದಿರದ ವರ್ತುಲ್ ರಸ್ತೆಯಲ್ಲಿ ನಡೆದಿದೆ. ಸಂದೇಶ ತಂದೆ ಜಾನ  ಮೂಲಿಮನಿ ಎಂಬ ಬಾಲಕ ಅಂಗಡಿಗೆ ಹೋಗಿ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ದ್ವಿಚಕ್ರ ಸವಾರ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಈ ಕುರಿತು ಬಾಲಕನ ತಂದೆ ಜಾನ ಮೂಲಿಮನಿ ಹೆಚ್ಚುವರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ಬೆಂಬಲಿಗರ ಹರ್ಷ
ಚಿಂಚೋಳಿ: ರಾಜ್ಯದ ನೂತನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕರೆಂದು ಸಿದ್ರಾಮಯ್ಯನವರ ಹೆಸರು ಪ್ರಕಟಿಸುತ್ತಿದ್ದಂತೆಯೇ ಅನೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ಕುರುಬ ಸಮಾಜದ ಅನೇಕ ಸಂಘಗಳ ಮುಖಂಡರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಗಡಿಕೇಶ್ವರ, ಸುಲೇಪೇಟ್, ಸಾಲೇಬೀರನಳ್ಳಿ, ಐನೋಳಿ, ದೇಗಲಮಡಿ, ಚಂದನಕೇರಾ, ಕೋಡ್ಲಿ, ರಟಕಲ್, ಚೆಂಗಟಾ, ನಾಗಾಇದಲಾಯಿ, ಚಿಮ್ಮನಚೋಡ, ಐನಾಪುರ, ನಿಡಗುಂದಾ, ಮಿರಿಯಾಣ,  ಕುಂಚಾವರಂ, ವೆಂಕಟಪುರ, ಶಿವರಾಮಪುರ, ಗಡಿಲಿಂಗದಳ್ಳಿ, ಮೋಘಾ, ಹಲಚೇರಾ, ಶಿರೋಳಿ, ಕರಚಖೇಡ, ಪೋಲಕಪಳ್ಳಿ, ಶಾದೀಪುರಗಳಲ್ಲಿ  ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಾಲೂಕಿನ ಬೊಮ್ಮಗೊಂಡೇಶ್ವರ, ಕನಕ ಯುವಕ ಸಂಘ, ಬೀರಲಿಂಗೇಶ್ವರ ಸಂಘದಿಂದ ವಿಜಯೋತ್ಸವ ಆಚರಿಸಲಾಯಿತು.

ಪಂಚಾಂಗ ಮಠದಲ್ಲಿ ನಾಳೆ ಬಸವ ಜಯಂತಿ
ಸುರಪುರ: ಇಲ್ಲಿಯ ಪಂಚಾಂಗಮಠದಲ್ಲಿ ಮೇ 13, ಸೋಮವಾರ 90ನೇ ಬಸವ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.   ರುದ್ರಾಭಿಷೇಕ, ರುದ್ರಪಠಣ, ಧ್ವಜಾರೋಹಣ, ತೊಟ್ಟಿಲು ಮಹೋತ್ಸವ, ವಚನ ಗಾಯನ, ಭಜನಾ ಸಮ್ಮಿಲನೆ ಮತ್ತು ಬಸವೇಶ್ವರ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.   ಇದೇ ಸಂದರ್ಭದಲ್ಲಿ ನೂತನ ಶಾಸಕ ರಾಜಾ ವೆಂಕಟಪ್ಪನಾಯಕ, ಪುರಸಭೆ ಸದಸ್ಯರಾದ ದೇವಿಂದ್ರಪ್ಪ ಕಳ್ಳಿಮನಿ ಮತ್ತು ಗುರುಬಾಯಿ ವಾಲಿ ಸನ್ಮಾನಿತಗೊಳ್ಳಲಿದ್ದಾರೆ ಎಂದರು.

ತಹಸೀಲ್ದಾರ್ ಕಚೇರಿ: ಬಸವ ಜಯಂತಿ
ಸುರಪುರ: ಇಲ್ಲಿಯ ತಹಸೀಲ್ ಕಚೇರಿಯಲ್ಲಿ ಮೇ 13, ಸೋಮವಾರ ಬೆಳಗ್ಗೆ 10 ಗಂಟೆಗೆ ಜಗಜ್ಯೋತಿ ಬಸವೇಶ್ವರರ 882ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ಶಾಸಕ ರಾಜಾ ವೆಂಕಟಪ್ಪನಾಯಕ ಕಾರ್ಯಕ್ರಮ ಉದ್ಘಾಟಿಸುವರು.  ಚಿಗರಿಹಳ್ಳ ಕ್ರಾಸ್‌ನ ಮರುಳು ಶಂಕರದೇವರ ಗುರುಪೀಠದ ಸಿದ್ದಬಸವ ಕಬೀರಾನಂದ ಸ್ವಾಮೀಜಿ ಉಪನ್ಯಾಸ ನೀಡವರು. ತಹಸೀಲ್ದಾರ್ ಮೊಹ್ಮದ್ ಗೌಸುದ್ದೀನ್ ಅಧ್ಯಕ್ಷತೆ ವಹಿಸುವರು. ತಾಪಂ ಅಧ್ಯಕ್ಷೆ ಸಾಬವ್ವ ದೇಸಾಯಿ, ಎಪಿಎಂಸಿ ಅಧ್ಯಕ್ಷ ಬಸಣ್ಣ ಬಾಳಪ್ಪ ಬಂಗಿ, ಪಿಐ ರಾಜಕುಮಾರ ವಾಜಂತ್ರಿ, ತಾಪಂ ಇಒ ಪ್ಯಾರೆ ಮಹ್ಮದ ಕುತುಬುದ್ದೀನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕು ಆಡಳಿತ ತಿಳಿಸಿದೆ.

'ಆರ್‌ವಿಎನ್‌ಗೆ ಸಚಿವ ಸ್ಥಾನ ನೀಡಿ'
ಸುರಪುರ: ತಾಲೂಕಿನ ನೂತನ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಸಚಿವ ಸ್ಥಾನ ನೀಡಬೇಕೆಂದು ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘ ಆಗ್ರಹಿಸಿದೆ.
ವೆಂಕಟಪ್ಪ ನಾಯಕರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇವರ ತಂದೆ ರಾಜಾ ಕುಮಾರ ನಾಯಕ ಶಾಸಕರಾಗಿ ಮತ್ತು ಅಜ್ಜ ರಾಜಾ ವೆಂಕಟಪ್ಪನಾಯಕ ಬ್ಯಾರಿಷ್ಟರ್ ಸಂಸದರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಅವರು ಸಚಿವ ಸ್ಥಾನಕ್ಕೆ ಅರ್ಹ ಶಾಸಕರಾಗಿದ್ದಾರೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರಿಗೆ ಫ್ಯಾಕ್ಸ್ ಮೂಲಕ ಸಲ್ಲಿಸಿದ ಮನವಿ ಪತ್ರದಲ್ಲಿ ಸಂಘ ತಿಳಿಸಿದೆ.
ತಾಲೂಕಿನ ಎಲ್ಲ ಜಾತಿ- ಜನಾಂಗಗಳ ಮತ್ತು ಹಿಂದುಳಿದ ವರ್ಗಗಳ ಬೆಂಬಲ ಆರ್‌ವಿಎನ್‌ಗೆ ಇದ್ದು, ಸ್ಥಳೀಯ ಸಂಸ್ಥೆ ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಪಂ, ಗ್ರಾಪಂ ಮತ್ತು ಎಪಿಎಂಸಿ ಚುನಾವಣೆಗಳಲ್ಲಿ ಇವರ ನಾಯಕತ್ವದಲ್ಲಿ ಕಾಂಗ್ರೆಸ್ ಜಯಸಾಧಿಸಿದೆ.  ಕಾರಣ ಆರ್‌ವಿಎನ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಸಂಘದ ಕಾರ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ, ಕಾರ್ಯದರ್ಶಿ ಗಂಗಾಧರ ನಾಯಕ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments