ಬೇಕಿದೆ ಪುರಾತನ ದೇವಸ್ಥಾನಕ್ಕೆ ಕಾಯಕಲ್ಪ
ಯಾದಗಿರಿ: ವಿವಿಧ ರಾಜಮನೆತನಗಳು ಆಳಿದ ಈ ಭಾಗದಲ್ಲಿ ಐತಿಹಾಸಿಕ ಸ್ಮಾರಕಗಳಿಗೆ ಕೊರತೆಯಿಲ್ಲ. ಸಗರನಾಡು ಎಂಬ ಖ್ಯಾತಿ ಪಡೆದಿರುವ ಈ ಪ್ರದೇಶದಲ್ಲಿ ಪುರಾತನವಾದ ದೇವಾಲಯಗಳು ಸಾಕಷ್ಟಿವೆ. ಆದರೆ ಐತಿಹಾಸಿಕ ಪ್ರಜ್ಞೆಯ ಕೊರತೆ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಇಂದು ಅವು ಜೀರ್ಣಾನಸ್ಥೆಗೆ ತಲುಪಿವೆ ಎನ್ನಲು ಶಹಾಪುರ ತಾಲೂಕಿನ ಹಯ್ಯಾಳ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನವೇ ಸಾಕ್ಷಿಯಾಗಿದೆ.
ಶಹಾಪುರ ತಾಲೂಕು ಸಗರನಾಡಿನ ಹೆಗ್ಗುರುತಾಗಿದೆ. ತಾಲೂಕಿನ ಶಿರವಾಳದಲ್ಲಿ ದೇವಾಲಯಗಳ ಸಂಕೀರ್ಣವೇ ಇದ್ದರೂ ಅವು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ. ಅದರಂತೆ ಇದೇ ತಾಲೂಕಿನ ಹಯ್ಯಾಳ ಬಿ. ಗ್ರಾಮದಲ್ಲಿರುವ ದೇವಾಲಯವೂ ಇದೇ ಸ್ಥಿತಿಗೆ ತಲುಪಿದ್ದು, ಈಗ ಅದು ದನದ ಕೊಟ್ಟಿಗೆಯಾಗಿ ಮಾರ್ಪಟ್ಟಿರುವುದು ದುರ್ದೈವದ ಸಂಗತಿ.
ಭಗ್ನ ದೇವತೆಗಳ ಮೂರ್ತಿ: ಹಯ್ಯಾಳದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದು ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಪ್ರವೇಶ ದ್ವಾರದ ಬಾಗಿಲ ಮೇಲೆ ಗಜಲಕ್ಷ್ಮಿಯರ ಬಿಂಬವಿದೆ. ದ್ವಾರ ಬಾಗಿಲು ಪಂಚ ಶಾಖೆಗಳನ್ನು ಹೊಂದಿದೆ. ಸುಂದರ ಕುಸುರಿ ಕಲೆಗಳನ್ನು ಕೆತ್ತಿರುವ ಕಂಬಗಳಿವೆ. ಬಾಗಿಲ ಎಡಭಾಗದಲ್ಲಿ ನಾಗದೇವತೆ, ಬಲ ಭಾಗದಲ್ಲಿ ವೀರಗಲ್ಲು ಇದೆ. ದೇವಾಲಯದಲ್ಲಿ ಭಗ್ನಗೊಂಡ ಅನೇಕ ದೇವತೆಗಳ ಮೂರ್ತಿಗಳನ್ನು ಕಾಣಬಹುದು.
ಈಗ ಕಾಣುವ ರಾಮಲಿಂಗೇಶ್ವರ ದೇವಾಲಯವು ಸಲ ಸುಮಾರು ವರ್ಷಗಳವರೆಗೆ ಭೂಮಿಯಲ್ಲಿ ಹುದುಗಿಹೋಗಿತ್ತು. ಅದರ ಮೇಲೆ ಕಟ್ಟಲಾಗಿದ್ದ ಮನೆಗಳು ಪಾಳು ಬಿದ್ದ ಮೇಲೆ ದೇವಾಲಯ ಇರುವುದು ಕಂಡುಬಂತು ಎಂದು ಸ್ಥಳೀಯರು ಹೇಳುತ್ತಾರೆ. ದೇವಾಲಯದ ಎಡ ಹಾಗೂ ಬಲ ಭಾಗದಲ್ಲಿ ಸುರಂಗ ಮಾರ್ಗವಿದೆ. ಅದರ ಮೂಲಕ ಒಳಕ್ಕೆ ಪ್ರವೇಶಿಸಿದರೆ ದೇವಾಲಯ ಕಂಡುಬರುತ್ತದೆ. ಆದರೆ ಅದನ್ನು ಕಲ್ಲುಗಳಿಂದ ಮುಚ್ಚಲಾಗಿದ್ದು, ಜನರು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ಉತ್ಖನನ ಅಗತ್ಯ: ಹೀಗೆ ದೇವಾಲಯದ ಬಗ್ಗೆ ಅನೇಕ ಐತಿಹಾಸಿಕ ಕುರುಹುಗಳು ಲಭ್ಯವಾಗುತ್ತವೆ. ಇತಿಹಾಸದ ಗತವೈಭವ ಸಾರುವ ಅನೇಕ ಮಾಹಿತಿಗಳು ಇಲ್ಲಿವೆ. ಈ ಬಗ್ಗೆ ಪ್ರಾಚ್ಯವಸ್ತು ಇಲಾಖೆಯವರು ಉತ್ಖನನ ನಡೆಸಿದರೆ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು. ಅಲ್ಲದೇ ಭೂಗರ್ಭದಲ್ಲಿ ಹುದುಗಿಹೋಗಿರುವ ದೇವಾಲಯದ ಬಗ್ಗೆಯೂ ಹೆಚ್ಚಿನ ಮಾಹಿತಿ ಸಿಗಬಹುದು. ಆದರೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಇದುವರೆಗೂ ಲಕ್ಷ್ಯವಹಿಸದಿರುವುದು ಈ ಭಾಗದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಜೀರ್ಣೋದ್ಧಾರ ಅಗತ್ಯ: ಈ ದೇವಾಲಯ ಈಗ ಕಂಡವರ ಆಸ್ತಿಯಾಗಿದೆ. ದೇವಾಲಯದ ಆವರಣದಲ್ಲಿ ದನಕರುಗಳನ್ನು ಕಟ್ಟಿ ಹಾಕಲಾಗುತ್ತಿದೆ. ಬಟ್ಟೆಗಳನ್ನು ತೊಳೆದು ಅಲ್ಲೇ ಒಣಹಾಕಲಾಗುತ್ತಿದೆ. ಮೇವನ್ನು ಸಂಗ್ರಹಿಸಿ ಇಡಲಾಗಿದೆ. ದೇವಾಲಯದ ಸುತ್ತ ಮನೆಗಳನ್ನು ನಿರ್ಮಿಸಲಾಗಿದ್ದು, ಅಲ್ಲಲ್ಲಿ ಜಾಲಿ ಗಂಟಿಗಳು ಬೆಳೆದುನಿಂತಿವೆ. ಸಂಬಂಧಪಟ್ಟ ಇಲಾಖೆಯ ಜತೆಗೆ ಸ್ಥಳೀಯರಿಂದರೂ ದೇವಾಲಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪುರಾತನ ಇತಿಹಾಸ ಹೊಂದಿರುವ ದೇವಾಲಯದ ಸಂರಕಷಣೆ, ಜೀರ್ಣೋದ್ಧಾರದ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಗತಿಸಿ ಹೋದ ಕಾಲದ ಬಗ್ಗೆ ಅಧ್ಯಯನ ನಡೆಸುವುದು ಅಗತ್ಯವಾಗಿದೆ.
ಮುಂದಿನ ಜನಾಂಗಕ್ಕೆ ಇತಿಹಾಸದ ಬಗ್ಗೆ ಮಾಹಿತಿ ಬೇಕಾದರೆ ಪ್ರಾಚ್ಯವಸ್ತು ಇಲಾಖೆಯವರು ದೇವಾಲಯದ ಸುತ್ತ ಉತ್ಖನನ ನಡೆಸಿ ಸಮಗ್ರ ಮಾಹಿತಿ ಕಲೆ ಹಾಕಿ, ನಶಿಸಿ ಹೋಗುತ್ತಿರುವ ದೇವಾಲಯದ ಸಂರಕ್ಷಣೆ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.