ಮತದಾರರ ತೀರ್ಪಿಗೆ ತಲೆಬಾಗುವೆ: ಪವಾಡಶೆಟ್ಟಿ
ಆಳಂದ: ಸ್ಥಳೀಯ ವಿಧಾನಸಭಾ ಮತಕ್ಷೇತ್ರದಲ್ಲಿ ಮತ ಬಾಂಧವರ ನೀಡಿದ ತೀರ್ಪಿಗೆ ತಲೆಬಾಗುವೆ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಪವಾಡಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಇತ್ತೀಚೆಗೆ ಪ್ರಕಟಣೆ ನೀಡಿರುವ ಅವರು, ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದೇನೆ.
ನಾನು ಕಳೆದ 25 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿ 1995ರಲ್ಲಿ ತಾಪಂ ಸದಸ್ಯ, ಅಧ್ಯಕ್ಷನಾಗಿ ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿ ಜನರ ಪ್ರೀತಿಗೆ ಪಾತ್ರನಾಗಿ 2000ರಲ್ಲಿ ತಾಲೂಕು ಸಾವಯವ ಕೃಷಿಕ ಸಂಘ ಸ್ಥಾಪಿಸಿರುತ್ತೇನೆ.
ಪ್ರತಿ ತಿಂಗಳ 29ರಂದು ರೈತರ ಹೊಲಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮತ್ತು ವಿಜ್ಞಾನಿಗಳನ್ನು ಕರೆಯಿಸಿ ಪ್ರಗತಿಪರ ರೈತರೊಂದಿಗೆ ಚರ್ಚಿಸಿ ರೈತರಿಗೆ ಜಾಗೃತಿ ಮೂಡಿಸುವಲ್ಲಿ ಅನೇಕ ಹೋರಾಟ ಮೂಲಕ ಕೆಲಸ ಮಾಡಿದ್ದೇನೆ ಎಂದರು.
ತೀವ್ರ ಬೇಸರ: ಆದರೆ, ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ನಾಯಕರು ಮಾಡಿದ್ದಾರೆಂದು ಭಾವಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದೆ.
ಮತಬಾಂಧವರು ನನ್ನ ಪ್ರಾಮಾಣಿಕತೆಗೆ ಮತ ನೀಡದೆ, ನನಗೇ ಸೋಲಿಸಿದ್ದಕ್ಕೆ ತುಂಬಾ ಬೇಸರ ಉಂಟಾಗಿದೆ ಎಂದು ವಿಷಾದಿಸಿರುವ ಅವರು, ಕ್ಷೇತ್ರದ ಮತಬಾಂಧವರ ಚುನಾವಣೆ ತೀರ್ಪು ಒಪ್ಪಿಕೊಂಡು ಸ್ವಾಗತಿಸುವುದಾಗಿ ಹೇಳಿದರು.
ಸೋಲಿಗೆ ಧೃತಿಗೆಡದೆ ಸಾರ್ವಜನಿಕರ, ರೈತ, ರೈತ ಕಾರ್ಮಿಕರ ಕಷ್ಟ ಸುಖಗಳಿಗೆ ಎಂದಿನಂತೆ ಸ್ಪಂದಿಸಿ ಸದಾ ಜನರ ಮಧ್ಯದಲ್ಲೇ ಇರುತ್ತೇನೆ.
ತಾಲೂಕಿನಲ್ಲಿನ ಸರ್ವಾಧಿಕಾರಿ ಆಡಳಿತವು ಹೋರಾಟದ ಮೂಲಕ ಹೋಗಲಾಡಿಸಲು ಯತ್ನಿಸುತ್ತೇನೆ. ಪ್ರಜಾಪ್ರಭುತ್ವದ ಆಡಳಿತ ತರಲು ಸದಾಕಾಲ ಜನಸಾಮಾನ್ಯರೊಂದಿಗೆ ಬೆರೆತು ಪ್ರೀತಿ ವಿಶ್ವಾಸದಿಂದ ಪ್ರಾಮಾಣಿಕ ಸೇವೆ ಮಾಡುವಲ್ಲಿ ನಿರಂತರ ಪ್ರಯತ್ನ ಮುಂದುವರೆಸುತ್ತೇನೆ ಎಂದು ಪವಾಡಶೆಟ್ಟಿ ಹೇಳಿದ್ದಾರೆ.