ರತ್ನಾಪುರದ 'ರತ್ನ'ಗಳಿಗಾಗಿ ನಿಧಿಶೋಧ?
ಸುಬ್ರಹ್ಮಣ್ಯ: ಬಾಳುಗೋಡುವಿನ ಮಾನಡ್ಕದ ರತ್ನಾಪುರ ಎಂಬ ಜಾಗದಲ್ಲಿದ್ದ ಪ್ರಾಚೀನ ಕಾಲಕ್ಕೆ ಸೇರಿದ ಭಾರಿ ಬೆಲೆಬಾಳುವ ನಿಧಿಯನ್ನು ನಾಲ್ಕೈದು ದಿನಗಳ ಅನಾಮಧೇಯರು ಅಗೆದು ಕದ್ದೊಯ್ದ ಕುರಿತು ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಸ್ಥಳೀಯರ ಕೈವಾಡವೂ ಇರುವ ಬಗ್ಗೆ ಸ್ಥಳೀಯರಲ್ಲಿ ಅಭಿಪ್ರಾಯ ವ್ಯಕ್ತಗೊಂಡಿದೆ. ನಿಧಿ ಇತ್ತೆನ್ನಲಾದ ಜಾಗದಲ್ಲಿ ನಿಧಿ ತೆಗೆಯಲು ಬಳಸಿದ ಪೂಜಾ ಸಾಮಾಗ್ರಿಗಳು ಕಂಡು ಬಂದಿದ್ದು, ಸುಮಾರು 6-7 ಅಡಿಯಷ್ಟು ಹೊಂಡ ಕೊರೆದು ಮಣ್ಣನ್ನು ಮೇಲಕ್ಕೆ ತೆಗೆಯಲಾಗಿದೆ. ಮಣ್ಣಿನ ದೊಡ್ಡ ರಾಶಿಯೇ ಹೊರಗೆ ಹರಡಿಕೊಂಡು ಬಿದ್ದಿದೆ. ಸ್ಥಳದ ಸುತ್ತ ಕೊಳೆತ ಬಾಳೆಹಣ್ಣು, ತಾಮ್ರದ ತಗಡುಗಳು, ಪೂಜೆಗೆ ಉಪಯೋಗಿಸಿದ ಸಾಮಾಗ್ರಿಗಳು ಕಂಡು ಬಂದಿವೆ. ನಾಲ್ಕೈದು ದಿನಗಳ ಹಿಂದೆ 7-8 ಮಂದಿಯ ತಂಡ ಈ ಕೃತ್ಯ ನಡೆಸಿರುವ ಗುಮಾನಿ ಇದೆ.
ದೇವಸ್ಥಾನವಿದ್ದ ಬಗ್ಗೆ ಕುರುಹು: ರತ್ನಾಪುರ ಎಂಬ ಈ ಸ್ಥಳ ಮಾನಡ್ಕ ಹೊಳೆಯ ಬದಿಯಲ್ಲಿದ್ದು ದಟ್ಟ ಕಾಡುಗಳಿಂದ ತುಂಬಿದ ಜಾಗವಾಗಿದೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಈ ಸ್ಥಳದಲ್ಲಿ ದೇವಿ ದೇವಸ್ಥಾನ ಇತ್ತು. ದೇವಸ್ಥಾನದ ಮುಂಭಾಗ ಬೆಲೆಬಾಳುವ ಹರಳು ಕಲ್ಲುಗಳಿಂದ ತುಳಸಿ ಕಟ್ಟೆ ನಿರ್ಮಾಣಗೊಂಡಿತ್ತು. ಅಲ್ಲದೆ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಕೆರೆಯೂ ಇದ್ದು ಅಂದಿನ ಕಾಲದಲ್ಲಿ ನಿತ್ಯ ಪೂಜೆ ವಿಧಿವಿಧಾನಗಳು ನೆರವೇರುತ್ತಾ ಈ ಜಾಗ ಅತ್ಯಂತ ಕಾರಣಿಕದ ಸ್ಥಳವಾಗಿತ್ತು. ಕಾಲಕ್ರಮೇಣ ನೆಲೆ ಕಳೆದುಕೊಂಡು ಪಾಳು ಬಿದ್ದು ಮಣ್ಣು ತುಂಬಿ ಅವಸಾನವಾಯಿತು ಎಂಬುದು ಇಲ್ಲಿಯ ಹಿರಿಯರೊಬ್ಬರ ಅಂಬೋಣ.