ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಜಕೀಯದಲ್ಲಿ ಮುಳುಗಿವೆ ಬ್ಯಾರಿ, ತುಳು ಅಕಾಡೆಮಿ

Vishwanath S
Updated On : 12 May 2013, 11:55 am

ಕೋಟ: ಬ್ಯಾರಿ, ತುಳು ಸಾಹಿತ್ಯ ಅಕಾಡೆಮಿಗಳು ಇಂದು ರಾಜಕೀಯದಲ್ಲಿ ಮುಳುಗಿದ್ದು, ಬಂದ ಅನುದಾನಗಳನ್ನು ಖರ್ಚು ಮಾಡುವುದಕ್ಕಷ್ಟೇ ಕಾರ್ಯಕ್ರಮಗಳು ಜರಗುತ್ತಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕಲ್ಕೂರ ಹೇಳಿದರು.  ಅವರು ಇಲ್ಲಿನ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ಕಸಾಪದ ಉಡುಪಿ ತಾಲೂಕು ಘಟಕ, ಕೋಟ ಮಿತ್ರ ಮಂಡಳಿ ಹಾಗೂ ವಿದ್ಯಾ ಸಂಘದ ಸಹಯೋಗದಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಕಸಾಪ ಒಂದಷ್ಟು ಸಾಹಿತ್ಯದ ಪರ ಕೆಲಸ ಮಾಡುವುದರೊಂದಿಗೆ ಕನ್ನಡದ ನೆಲ, ಜಲ, ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ ಎಂದರು.  ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು.

ಪ್ರಭುಗೆ ಜೆಮ್ ಕಂಪನಿಯಿಂದ 1 ಲಕ್ಷ ಪ್ರೋತ್ಸಾಹ ಧನ
ಇಳಕಲ್ಲ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಲ್ಲು ಗಣಿ ಕಾರ್ಮಿಕನ ಮಗ ಪ್ರಭು ಬೋಮ್ಮಲಿಂಗಪ್ಪ ಗೊರಬಾಳನಿಗೆ ಇಲ್ಲಿಯ ಜೇಮ್ ಕಂಪನಿ 1 ಲಕ್ಷ ಪ್ರೋತ್ಸಾಹ ಧನ ಕೊಡುವುದಾಗಿ ತಿಳಿಸಿದೆ. ಜೆಮ್ ಕಂಪನಿಯ ಹಿರಿಯ ಮುಖ್ಯಸ್ಥ ಮಧು ಅವರು ಪ್ರಭು ಗೊರಬಾಳನನ್ನು ಶುಕ್ರವಾರ ಸತ್ಕರಿಸಿ ಈ ವಿಷಯ ತಿಳಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಕಂಪನಿಯಲ್ಲಿ ದುಡಿಯುವ ಕಾರ್ಮಿಕನ ಮಗ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಕಂಪನಿಗೆ ಹೆಮ್ಮೆಯ ವಿಷಯ. ಕಂಪನಿಯಲ್ಲಿ ದುಡಿಯುವ ಎಲ್ಲ ಕಾರ್ಮಿಕರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಕಂಪನಿಯಲ್ಲಿ ದುಡಿಯುವ ಕಾರ್ಮಿಕರ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಅಂಥವರಿಗೆ ಕಂಪನಿಯಿಂದ ಮುಂದಿನ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಮಾಡಲಾಗುವುದು ಎಂದರು.  ಜೆಮ್ ಕಂಪನಿಯ ಮಾಲೀಕರಾದ ಆರ್. ವೀರಮಣಿ ಇಳಕಲ್ಲ ನಗರಕ್ಕೆ ಆಗಮಿಸಿ ಪ್ರಭು ಬೋಮ್ಮಲಿಂಗಪ್ಪ ಗೊರಬಾಳ ಇವರಿಗೆ 1 ಲಕ್ಷ ಹಣವನ್ನು ಸ್ವತಃ ತಾವೇ ಕೊಡುವುದಾಗಿ ತಿಳಿಸಿದ್ದಾರೆ.

ಕಿಡಿಗೇಡಿಗಳಿಂದ ಬಾವಿಗೆ ಸೀಮೆಎಣ್ಣೆ
ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕ ಗ್ರಾಪಂ ವತಿಯಿಂದ ಪಲ್ಲತ್ತಡ್ಕ ಎಂಬಲ್ಲಿ ಬಳಸುತ್ತಿದ್ದ ಬಾವಿಯೊಂದಕ್ಕೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಸೀಮೆಎಣ್ಣೆ ಸುರಿದ ಘಟನೆ ನಡೆದಿದೆ.  ಈ ಬಾವಿಯಿಂದ ಸುಮಾರು 5-6 ಕುಟುಂಬಗಳು ನೀರು ಬಳಸುತ್ತಿದ್ದು, ಶನಿವಾರ ಬೆಳಗ್ಗೆ ಬಾವಿಯಿಂದ ನೀರು ಸೇದುವಾಗ ಈ ವಿಚಾರ ಗಮನಕ್ಕೆ ಬಂದಿದೆ. ನಂತರ ಗ್ರಾಪಂ ಸದಸ್ಯ ಹಿಮ್ಮತ್ ಕೆ.ಸಿ. ಸ್ಥಳಕ್ಕಾಗಮಿಸಿ ಬಾವಿಯಿಂದ ಸೀಮೆಎಣ್ಣೆ ಮಿಶ್ರಿತ ನೀರನ್ನು ಪಂಪ್ ಮೂಲಕ ಮೇಲೆತ್ತಲು ಕ್ರಮ ಕೈಗೊಂಡರು.

ಆರ್ಟಿಪಿಎಸ್ 3ನೇ ಘಟಕ ಸ್ಥಗಿತ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೂರನೇ ಘಟಕ ಶನಿವಾರ ತಾಂತ್ರಿಕ ದೋಷದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. 3ನೇ ಘಟಕದಲ್ಲಿ ಶನಿವಾರ ಕಂಡು ಬಂದ ತಾಂತ್ರಿಕ ದೋಷದಿಂದಾಗಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲು ಕೆಪಿಸಿ ಅಧಿಕಾರಿಗಳು ನಿರ್ಧರಿಸಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ವರೆಗೆ ಇನ್ನುಳಿದ 7 ವಿದ್ಯುತ್ ಘಟಕಗಳಿಂದ ಒಟ್ಟು 24.87 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದು ಆರ್‌ಟಿಪಿಎಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement