'ಸೋಲಿನಿಂದ ಧೃತಿಗೆಡುವುದು ಬೇಡ'
ಶಹಾಪುರ: ಜೆಡಿಎಸ್ ಕಾರ್ಯಕರ್ತರ ಸಾರ್ಥಕ ಶ್ರಮದಿಂದ ಚುನಾವಣೆ ಎದುರಿಸಲಾಗಿದೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಅನ್ಯಾಯ ಆಕ್ರಮಗಳನ್ನು ತಡೆಗಟ್ಟುವಲ್ಲಿ ನಿರಂತರ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಈ ಸೋಲಿನಿಂದ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆಯಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಅಯ್ಯಣ್ಣ ಕನ್ಯಕೋಳೂರು ತಿಳಿಸಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪುರ ಅವರ ಮನೆಯಲ್ಲಿ ಕರೆದಿದ್ದ ಜೆಡಿಎಸ್ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಉತ್ಸಾಹ ಮೆಚ್ಚುವಂತಹದಾಗಿದೆ. ಹಣಬಲವಿಲ್ಲದೆ ಸ್ವಯಂಪ್ರೇರಣೆಯಿಂದ ಕಾರ್ಯಕರ್ತರು ಅಭ್ಯರ್ಥಿಯ ಯಶಸ್ಸಿಗೆ ಶ್ರಮಿಸಿದ್ದನ್ನು ಮರೆಯುವಂತಿಲ್ಲ ಎಂದರು.
ಸಂಘಟನೆ ಅಗತ್ಯ: ಮುಖಂಡ ಮಲ್ಲಣ್ಣಗೌಡ ವಂದಗನೂರು ಮಾತನಾಡಿ, ಮತಕ್ಷೇತ್ರಾದ್ಯಂತ ಜೆಡಿಎಸ್ ಪರ ಮತದಾರರು ಬೆಂಬಲಿಸಿದ್ದು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನಾತ್ಮಕವಾಗಿ ಇನ್ನಷ್ಟು ಬಲಗೊಳ್ಳಲಿದೆ ಎಂದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ, ಕ್ಷೇತ್ರದ ಪರಾಜಿತ ಶರಣಪ್ಪ ಸಲಾದಪುರ ಮಾತನಾಡಿ, ನನ್ನ ಸೋಲು ನ್ಯಾಯಯುತವಾದ ಸೋಲಲ್ಲ. ಕ್ಷೇತ್ರದ ಎರಡು ಮನೆತನಗಳು ಹಣಬಲ ಹಾಗೂ ತೋಳ್ಬಲದಿಂದ ಸುಳ್ಳುವದಂತಿಗಳನ್ನು ಹರಡುವ ಮೂಲಕ ಜಯ ಸಾಧಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರಾಗಲಿದ್ದು, ನಮ್ಮ ಭಾಗದ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ಆದ್ದರಿಂದ ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಿವಕುಮಾರ ಮೋಟಗಿ, ಅಶೋಕ ಕರಿಗೇರ, ಮಲ್ಲಿನಾಥ ಕೆಂಭಾವಿ, ಭೀಮರಾವ ಕುಲ್ಕರ್ಣಿ, ಮಹ್ಮದ್ ಗೌಸ್ ವನದುರ್ಗ, ರಾಯಣ್ಣ ಕನ್ಯಕೋಳೂರು, ಶರಬಣ್ಣ ರಸ್ತಾಪುರ, ಗುರು ಸಗರ, ಸಿದ್ದಣ್ಣ ಕರದಳ್ಳಿ, ವಿರುಪಾಕ್ಷಪ್ಪ ಕಡಕಲ್ ಇತರರು ಇದ್ದರು.