ಹತಾಶರಾಗಬೇಡಿ: ಕಂದಕೂರ ಸಲಹೆ
ಯಾದಗಿರಿ: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗುರುಮಠಕಲ್ ಮತಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವಿನಂಚಿಗೆ ಬಂದು ಸೋತಿರುವುದು ಬೇಸರ ತಂದಿದೆ. ಆದರೆ ಇದಕ್ಕೆ ಮತದಾರರು, ಹಗಲಿರುಳೂ ಶ್ರಮಿಸಿದ ಕಾರ್ಯಕರ್ತರು ಹತಾಶರಾಗಬಾರದು ಎಂದು ಜೆಡಿಎಸ್ ಪರಾಚಿತ ಅಭ್ಯರ್ಥಿ ನಾಗನಗೌಡ ಕಂದಕೂರ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣೆಯಲ್ಲಿ ತಮಗೆ ಅಭೂತಪೂರ್ವ ಬೆಂಬಲ ನೀಡಿರುವ ಮತಕ್ಷೇತ್ರದ ಮತದಾರರು, ಪಕ್ಷದ ಪದಾಧಿಕಾರಿಗಳು, ಮುಖಂಡರು, ಯುವಕರು ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂಬರುವ ದಿನಗಳಲ್ಲಿ ಯಾವತ್ತೂ ಮತಕ್ಷೇತ್ರದ ಜನತೆಯ ಕಷ್ಟ ನೋವುಗಳಿಗೆ ಸದಾ ಸ್ಪಂದಿಸುವದಾಗಿ ಅವರು ತಿಳಿಸಿದ್ದಾರೆ.
ಹೊರಗಿನವರಿಗೇ ಮಣೆ- ಬೇಸರ: 41 ವರ್ಷಗಳ ನಂತರವೂ ಕ್ಷೇತ್ರದ ಜನತೆ ಬದಲಾವಣೆ ಬಯಸದಿರುವುದು ನೋವಿನ ಸಂಗತಿ. ಈ ಬಾರಿಯಾದರೂ ಜನ ಬದಲಾವಣೆ ಬಯಸುತ್ತಾರೆಂಬ ತಮ್ಮ ನಿರೀಕ್ಷೆ ಹುಸಿಯಾಗಿದೆ. ಈ ಬಾರಿಯೂ ಜನ ಹೊರಗಿನವರನ್ನೇ ಆರಿಸಿ ತಂದಿರುವುದು ತಮಗೆ ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ಐದು ವರ್ಷಗಳ ಕಾಲ ಕ್ಷೇತ್ರದ ಜನತೆ ಕರಾಳ ದಿನಗಳನ್ನು ಅನುಭವಿಸಿದ್ದರು. ಹೋದ ಕಡೆಯಲ್ಲೆಲ್ಲ ಈ ಸ್ಥಿತಿಗೆ ಕಾರಣವಾದ ಅಭ್ಯರ್ಥಿಯ ಮುಖಕ್ಕೆ ಮಂಗಳಾರತಿ ಮಾಡಿಯೂ ಸುಮಾರು ಒಂದೂವರೆ ಸಾವಿರ ಮತಗಳ ಅಂತರದಿಂದ ಅವರನ್ನೇ ಆರಿಸಿ ತಂದಿರುವುದು ದುರಂತವೇ ಸರಿ. ಮುಂದಿನ ದಿನಗಳಲ್ಲಿ ಜನತೆ ಪಶ್ಚಾತಾಪ ಪಡುವುದು ನಿಶ್ಚಿತ ಎಂದಿದ್ದಾರೆ.
ಕೆಜೆಪಿಗೆ ಭವಿಷ್ಯವಿಲ್ಲ: ಕರ್ನಾಟಕದಲ್ಲಿ ಮುಂಬರುವ ದಿನಗಳಲ್ಲಿ ಕೆಜೆಪಿ ನಾಮಾವಶೇಷಗೊಳ್ಳಲಿದೆ. ಮೈತುಂಬಾ ಹಗರಣಗಳನ್ನು ಹೊತ್ತಿರುವ ಯಡಿಯೂರಪ್ಪನವರು ಮುಂದೊಂದು ದಿನ ಜೈಲು ಸೇರುವುದು ನಿಶ್ಚಿತ.
ಆದರೂ ಕೆಜೆಪಿಯವರು ಸೋತು 3ನೇ ಸ್ಥಾನದಲ್ಲಿದ್ದರೂ ಗುರುಮಠಕಲ್ ಮತಕ್ಷೇತ್ರದಲ್ಲಿ ಪಕ್ಷಕ್ಕೆ ಭವಿಷ್ಯವಿದೆ ಎಂದು ಬೀಗುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಅವರು ಲೇವಡಿ ಮಾಡಿದ್ದಾರೆ. ಜನತೆ ಕೆಜೆಪಿಗೆ ಮತ ಹಾಕಿರುವುದು ವ್ಯಕ್ತಿ ಮತ್ತು ಪಕ್ಷಕ್ಕಾಗಿ ಅಲ್ಲ. ಹಣ ಬಲ ನೋಡಿ ಮತ ಹಾಕಿದ್ದಾರೆಂಬ ಸಂಗತಿ ಜಗಜ್ಜಾಹೀರಾಗಿದೆ ಎಂದು ತಿಳಿಸಿದ್ದಾರೆ.