ಅಧಿಕಾರಿಗಳ ಯತ್ನದಿಂದ ಬಾಲ್ಯವಿವಾಹ ಸ್ಥಗಿತ
ಕ.ಪ್ರ. ವಾರ್ತೆ ಗುಲ್ಬರ್ಗ ಮೇ 13-
ನಗರದ ಶಹಾಬಜಾರ್ ಕಬಡಾಗಲ್ಲಿಯ ಚನ್ನಮಲ್ಲೇಶ್ವರ ಕಲ್ಯಾಣ ಮಂಪಟದಲ್ಲಿ ನಡೆಯಬೇಕಾಗಿದ್ದ ಬಾಲ್ಯವಿವಾಹವು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಯತ್ನದಿಂದ ಸ್ಥಗಿತಗೊಂಡಿದೆ.
ನಗರದ ಮಹಾದೇವಿ ಮತ್ತು ರೇವಣಸಿದ್ದಪ್ಪ ಚುಡುವಾ ಅವರ ಕಿರಿಯ ಪುತ್ರ ರಘು ಮತ್ತು ಆಳಂದ ತಾಲೂಕಿನ ದೇಗಾಂವದ ಗುರುಬಾಯಿ ಮತ್ತು ಬಸವರಾಜ ಕಾಳೇಗೌಡ ದಂಪತಿ ಪುತ್ರಿ ಪೂಜಾ ವಿವಾಹವು ಭಾನುವಾರ ನಗರದಲ್ಲಿ ನಡೆಯಬೇಕಿತ್ತು. ಈ ಬಾಲ್ಯವಿವಾಹದ ಮದುವೆ ನಿಶ್ಚಿತಾರ್ಥಗೊಂಡ ಹಿನ್ನೆಲೆಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು 15 ದಿನಗಳ ಹಿಂದೆ ಜಿಲ್ಲಾಧಿಕಾರಿ ಡಾ. ಜಗದೀಶ್‌ಗೆ ಪತ್ರ ಬರೆದಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರತ್ನಾ ಕಲಂದಾನಿ ಅವರು ಮಕ್ಕಳ ರಕ್ಷಣಾ ಘಟಕಕ್ಕೆ ಸೂಚಿಸಿದ್ದರು.
ಮೊಲವೊಲಿಸಲು ಅಧಿಕಾರಿಗಳು ವಿಫಲ: ಆಳಂದದ ದೇಗಾಂವ ಪ್ರಾಥಮಿಕ ಶಾಲೆಯ ದಾಖಲೆಗಳ ಮೂಲಕ ವಧು ಪೂಜಾ ಹುಟ್ಟಿದ ವರ್ಷ 1999 ಎಂದು ಪತ್ತೆ ಹಚ್ಚಿದ್ದರು, ಬಳಿಕ ಎರಡೂ ಕಡೆಯವರನ್ನು ಕರೆಯಿಸಿ ಮಾತುಕತೆ ನಡೆಸಿದರು. ಆಳಂದ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅಶೋಕ ರಾಜನ್ ಹಾಗೂ ಸಿಬ್ಬಂದಿ ದೇವಾಂಗಕ್ಕೆ ತೆರಳಿ ಹುಡಗಿ ಮನೆಯವರ ಜತೆ ಆಪ್ತ ಸಮಾಲೋಚನೆ ನಡೆಸಿ ಬಾಲ್ಯವಿವಾಹದಿಂದಾಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಗುಲ್ಬರ್ಗದಲ್ಲಿರುವ ಹುಡುಗನ ಮನೆಗೆ ತೆರಳಿದ ಅಧಿಕಾರಿಗಳು ಮಾತುಕತೆ ಮೂಲಕ ಮನವೊಲಿಸಲು ಯತ್ನಿಸಿದರು. ಆದರೆ, ಇವರ ಮಾತಿಗೆ ಓಗೊಡದ ಪಾಲಕರು ಮದುವೆ ಕಾರ್ಯ ನೆಡಸಲು ಮುಂದಾದರು. ಕಲ್ಯಾಣ ಮಂಟಪಕ್ಕು ಭೇಟಿ ನೀಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಣ್ಣ ಬೆಣ್ಣಸೂರ, ರಕ್ಷಣಾಧಿಕಾರಿ ಸಂತೋಷ್ ಕುಲಕರ್ಣಿ, ಸಮಾಜ ಕಾರ್ಯಕರ್ತೆ ಸಾವಿತ್ರಿ ಕೊಟಗಿ, ಆಪ್ತ ಸಮಾಲೋಚಕಿ ವಸಂತ ಲಕ್ಷ್ಮಿ ಬಾಲ್ಯವಿವಾಹ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದರು.