ಈಗ ನೀರಿಗಾಗಿ ಅಜಯ್ ದಾರಿ ನೋಡಾಕತ್ತಾರ್ರಿ..
ಕನ್ನಡಪ್ರಭ ವಾರ್ತೆ ಜೇವರ್ಗಿ ಮೇ 14
ಸಂಪೂರ್ಣ ಬತ್ತಿದ ಭೀಮಾ ನದಿಯಿಂದಾಗಿ ಇದೇ ನೀರು ಅವಲಂಬಿಸಿದ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಗೋಳು ಮುಗಿಲು ಮುಟ್ಟಿದ್ದರೂ ಕೇಳೋರಿಲ್ಲ. ಇನ್ನು ನದಿ ಇಲ್ಲದ ಊರುಗಳಲ್ಲಿ ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬರಿದಾಗಿವೆ. ಇವೆಲ್ಲದರ ಜೊತೆಗೇ ಹಲವೆಡೆ ಬಾಂದಾರು ಇದ್ದು, ನೀರಿದ್ದರೂ ಅದರ ಸದ್ಬಳಕೆಯಾಗದೆ ಅಂತಹ ಹತ್ತಾರು ಹಳ್ಳಿಗಳಲ್ಲಿಯೂ ನೀರಿಗಾಗಿ ಹಾಹಾಕಾರ.
ಇಂತಹ ದುರ್ಭರ ಪರಿಸ್ಥಿತಿಯ ಜೊತೆಗೇ ನಾಲ್ಕಾರು ವರ್ಷಗಳ ಹಿಂದೆಯೇ ಹತ್ತಾರು ಹಳ್ಳಿಗಳಿಗೆ ನದಿ ನೀರನ್ನು ಒದಗಿಸುವ ಉದ್ದೇಶದಿಂದ ರಾಜೀವಗಾಂಧಿ ಗೊಂಚಲು ಹಳ್ಳ ನೀರು ಪೂರೈಕೆ ಯೋಜನೆಯಲ್ಲಿ ಕೋಟ್ಯಾವಧಿ ರುಪಾಯಿ ವೆಚ್ಚ ಮಾಡಲ್ಪಟ್ಟರೂ ಆಂದೋಲಾ, ಮಲ್ಲಾ(ಕೆ) ಹಾಗೂ ಅಂಕಲಗಾ ಯೋಜನೆಗಳು ನೆಲ ಬಿಟ್ಟಿಲ್ಲ. ಕಳಪೆ ಕಾಮಗಾರಿಯಿಂದಾಗಿ ಪಾತಾಳ ಸೇರಿರುವ ಈ ಯೋಜನೆಗಳಿಂದ ಯಾವ ಹಳ್ಳಿಗಳ ಬಾಯಾರಿಕೆಯೂ ಇಂಗಿಲ್ಲ, ಅಲ್ಲಿನ ಕೊಡ ಹಿಡಿದು ಅಂಡಲೆಯುವ ನೀರೆಯರಿಗೆ ನೀರು ದೊರಕಿಲ್ಲ.
'ಕನ್ನಡಪ್ರಭ' ಬಿಸಿಲಿನ ತಾಪದಿಂದ ಕುದ್ದು ಹೋಗಿರುವ ಜೇವರ್ಗಿಯ ನೆಲದಲ್ಲಿ ಹೆಜ್ಜೆ ಹಾಕಿದಾಗ ಅಲ್ಲಿನ ಹಳ್ಳಿಗಾಡಲ್ಲಿ ಕಂಡ ನೋಟಗಳೆಂದರೆ- ಗೃಹಿಣಿಯರು ಇಡೀ ದಿನವ ಖಾಲಿ ಕೊಡಗಳೊಂದಿಗೆ ನೀರಿಗಾಗಿ ತೋಟ- ನೀರಾವರಿ ಪ್ರದೇಶ ಅಲೆಯುವುದೇ ಆಗಿತ್ತು.
ನರಿಬೋಳದಲ್ಲಿ ನೀರಿನ ಗೋಳು: ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲರ ತವರೂರು ನರಿಬೋಳ ಗ್ರಾಮದಲ್ಲಂತೂ ನೀರಿನ ಸಮಸ್ಯೆ ಉಲ್ಬಣಿಸಿದೆ. ಏಕೆಂದರೆ- ಇಲ್ಲಿ ಕೊಳವೆಬಾವಿಗಳೇ ನೀರಿಗೆ ಮೂಲ. ಅಂತರ್ಜಲ ಬತ್ತಿಹೋಗಿದ್ದರಿಂದ ಕೊಳವೆಬಾವಿಗಳು ಸ್ಮಾರಕಗಳಾಗಿವೆ. ಹೀಗಾಗಿ ರಾತ್ರಿಪೂರಾ ನಿದ್ದೆಗೆಟ್ಟರೂ ನೀರು ಸಿಗುತ್ತಿಲ್ಲ. ಕೊಳವೆ ಬಾವಿಗಳೂ ಜನಸಂಖ್ಯೆಗೆ ಅನುಗುಣವಾಗಿಲ್ಲ. ಕೊರೆದ ಕೊಳವೆಗಳಲ್ಲಿ ಬಹುತೇಕ ನೀರಿಲ್ಲದೆ ಕೈಕೊಟ್ಟಿವೆ. ನೀರಿದ್ದ ಒಂದೆಂಡರು ಕೊಳವೆಗಳಿಗೆ ಹಗಲು- ರಾತ್ರಿ ಜನ ಮುಗಿಬಿದ್ದಿರುತ್ತಾರೆ.
ನೆಲೋಗಿಯಲ್ಲೂ ಶುದ್ಧ ನೀರಿಗೆ ತತ್ವಾರ: ನಾಡಿಗೆ ಮುಖ್ಯಮಂತ್ರಿ ನೀಡಿದ ಜೇವರ್ಗಿಯಲ್ಲಿ ಇಂದು ನೀರಿಲ್ಲದೆ ಜನತೆ ಬವಣೆ ಪಡುತ್ತಿದ್ದಾರೆಂದರೆ ಯಾರೂ ನಂಬೋದಿಲ್ಲ. ಆದರೆ ಜೇವರ್ಗಿಗೆ ಒಮ್ಮೆ ಬಂದು ನೋಡಿದರೆ ಇಲ್ಲಿನ ನೀರಿನ ದುರವಸ್ಥೆ ನೋಟಗಳು ಉರಿ ಬಿಸಿಲಲ್ಲಿ ಕಣ್ಣಿಗೆ ರಾಚುತ್ತವೆ. ಅದರಲ್ಲೂ ಮಾಜಿ ಸಿಎಂ ಧರಂಸಿಂಗ್, ಹಾಲಿ ಶಾಸಕ ಡಾ. ಅಜಯ್ ಸಿಂಗ್, ಹಾಲಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಇವರ ತವರೂರು ನೆಲೋಗಿಯಲ್ಲೇ ಇಂದು ಶುದ್ಧ ನೀರಿಗೆ ಜನ ಶೋಧ ಕಾರ್ಯ ಮುಂದುವರಿಸುವಂತಾಗಿದೆ.
ಏಕೆಂದರೆ- ಇಂದಿಗೂ ಈ ಊರಲ್ಲಿ ಭೀಮಾನದಿಯ ನೀರು ಶುದ್ಧೀಕರಿಸಿ ಪೂರೈಸುವ ಕೆಲಸವಾಗಿಲ್ಲ. ಇಲ್ಲಿ ಎಂಎಲ್ಸಿ ಅನುದಾನದಲ್ಲಿ(10 ಲಕ್ಷ) ನಿರ್ಮಿಸಲಾಗಿರುವ ಶುದ್ಧೀಕರಣ ಘಟಕ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ನೀರು ಪೂರೈಕೆಯಲ್ಲಿಯೂ ಇಲ್ಲಿ ರಾಜಕೀಯ ಪ್ರವಹಿಸುತ್ತಿರುವುದು ದುರಂತ. ಇಲ್ಲಿನ ಜನರೂ ತಮಗೆ ಒದಗಿರುವ ಈ ದುರ್ಗತಿಗೆ ಬೆಚ್ಚಿದ್ದಾರೆ. ಪಕ್ಕದಲ್ಲೇ ಭೀಮಾನದಿ ಹರಿಯುತ್ತಿದ್ದರೂ ಶುದ್ಧ ನೀರಿಗೆ ತಾವು ಪರದಾಡುವಂತಾಗುತ್ತಿರುವುದು ಜನರಿಗೂ ಹೇಸಿಗೆ ತರಿಸಿದೆ.
ತಿಂಗಳ ಹಿಂದೆ ಅಶುದ್ಧ ನೀರು ಕುಡಿದು ನೆಲೋಗಿಯಲ್ಲಿ ವಾಂತಿ- ಭೇದಿ- ಕರುಳಬೇನೆಯಂತಹ ತೊಂದರೆಗಳನ್ನು ಜನತೆ, ಊರಿನ ಜಾನುವಾರು ಅನುಭವಿಸಿದ್ದು ಯಾರೂ ಮರೆತಿಲ್ಲ. ಹೀಗಿದ್ದರೂ ಇಂದಿಗೂ ನೆಲೋಗಿಗೆ ಶುದ್ಧ ನೀರು ಪೂರೈಸುವ ಕೆಲಸಕ್ಕೆ ಜನ ನಾಯಕರು, ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ.
ಸಮಸ್ಯಾತ್ಮಕ ಹಳ್ಳಿಗಳ ಸಾಲು..: ನರಿಬೋಳ, ನೆಲೋಗಿಯೊಂದಿಗೆ ಇಲ್ಲಿ ಸಮಸ್ಯಾತ್ಮಕ ಹಳ್ಳಿಗಳ ಸಾಲೇ ಕುಳಿತಿದೆ. ಮಂದೇವಾಲ, ಗಂವ್ಹಾರ್, ಕೂಡಿದರ್ಗಾ, ರಂಜಣಗಿ, ದೇಸಣಗಿ, ಜೇರಟಗಿ, ಆಂದೋಲಾ, ನರಿಬೋಳ, ನೆಲೋಗಿ, ಯಡ್ರಾಮಿ, ಕೂಳಕೂರ, ಅರಳಗುಂಡಗಿ, ಕೂಡಿ, ಜೇರಟಗಿ, ಮಾಗಣಗೇರಾ, ಮಳ್ಳಿ, ವಡಗೇರಾ, ಸುಂಬಡ, ಬಳಬಟ್ಟಿ, ಕೋಬಾಳಗಳಲ್ಲೆಲ್ಲ ನೀರಿನ ಗೋಳು ಬೇಸಿಗೆಯ ಈ ದಿನಗಳಲ್ಲಿ ಜನ- ಜಾನುವಾರಗಳನ್ನು ತಿಕ್ಕಿಮುಕ್ಕುತ್ತಿದೆ.
ಧರಂ ಬಂದಾಗ ನೀರ ಕಂಡವ್ರು..: ಜೇವರ್ಗಿ ಗಡಿ ಗ್ರಾಮಗಳಾದ ರಂಜಣಗಿ, ದೇಸಣಗಿ, ಮುರಗಾನೂರಲ್ಲಂತೂ ನೀರಿನ ಗೋಳು ದೇವರೇ ಬಲ್ಲ. ತಾಲೂಕಾಡಳಿತದಿಂದ ಬಹುದೂರವಿರುವ ಈ ಹಳ್ಳಿಗಳತ್ತ ಯಾರೂ ನೋಡೋದೇ ಇಲ್ಲ. ಇಲ್ಲಿನ ಸಮಸ್ಯೆಯ ಕೂಗು ತಾಲೂಕಾಧಿಕಾರಿಗಳ ಕಿವಿಗೆ ತಲುಪೋವಷ್ಟರಲ್ಲಿ ಬೇಸಿಗೆ ಕಳೆದು ಮಳೆಗಾಲವೇ ಬಂದಿರುತ್ತದೆ.
ಇದು ಪ್ರತಿ ವರ್ಷದ ಗೋಳು, ನಾವು ಯಾರಿಗೂ ಹೇಳೋದಿಲ್ಲ, ಹೇಳಿದ್ರ ನಮ್ಮ ಕೆಲಸ ಆಗಬೇಕು, ಕೆಲಸ ಆಗದೆ ಹೋದ್ರ ಯಾರಿಗೆ ಹೇಳಿ ಯಾನ್ ಪ್ರಯೋಜನ ಎಂದು ದೇಶಮಗಿ, ರಂಜಣಗಿ ಮಂದಿ ತಮ್ಮಷ್ಟಕ್ಕೆ ತಾವೇ ಉಪಾಯ ಹುಡುಕಿ ಬೇಸಿಗೆ ಕಳೆಯುತ್ತಾರೆ.
ದೇಸಣಗಿ ಸಾವಿರ ಜನವಸತಿಯ ಊರು. 5 ವರ್ಷಗಳ ಹಿಂದೆ ಇಲ್ಲಿ ಮಾಜಿ ಸಿಎಂ ಧರಂಸಿಂಗ್ ಭೂ ಸೇನೆಯವರು ನಿರ್ಮಿಸಿದ್ದ ಟ್ಯಾಂಕ್ ಊರವರಿಗೆ ಅರ್ಪಿಸಿದರು. ಆ ದಿನ 2 ಕೊಡ ತುಂಬಿದ್ದಷ್ಟೆ, ನಂತರದ ದಿನಗಳಲ್ಲಿ ಈ ಟ್ಯಾಂಕ್, ಇಡೀ ಯೋಜನೆ ಕೆಲಸಕ್ಕೆ ಬಾರದೆ ನಿಷ್ಪ್ರಯೋಜಕವಾಯ್ತು. ಇಂದಿಗೂ ದೇಸಣಗಿಯಲ್ಲಿ ಜನತೆ ಧರಂಸಿಂಗ್ ಬಂದ್ರಷ್ಟೇ ಊರಿಗೆ ಕೊಡ ನೀರು ಬರ್ತದೆ, ಅದಾದ ನಂತ್ರ ನೀರೆ ಬಂದ್ ಆಗ್ತದೆ ಎಂದು ನಗೆ ಚಟಾಕಿ ಹಾರಿಸುತ್ತ ನೀರಿಲ್ಲದ ನೋವು ಮರೆಯಲು ಯತ್ನಿಸುತ್ತಿದ್ದಾರೆ.
ಗೆದ್ದು ರಾಜಧಾನಿ ಸೇರದವರು ಮರಳಿ ನೋಡಿಲ್ಲ...
ಜೇವರ್ಗಿ ತಾಲೂಕಿನ 33 ಗ್ರಾಪಂ ವ್ಯಾಪ್ತಿ ಹೊಂದಿರುವ ಜೇವರ್ಗಿಗೆ ಡಾ. ಅಜಯ್ ಸಿಂಗ್ ನೂತನ ಶಾಸಕರಾಗಿದ್ದಾರೆ. ಶಾಸಕರಾದ ಮೊದಲ ದಿನ ಕ್ಷೇತ್ರಕ್ಕೆ ಬಂದು ಬೆಂಗಳೂರು ಸೇರಿದವರು ಇಂದಿಗೂ ಮರಳಿ ಇತ್ತ ನೋಡಿಲ್ಲ. ಸಂಪುಟ ರಚನೆ ಕಸರತ್ತಿನಲ್ಲಿ ಮುಳುಗಿರುವ ಅವರು ಸಚಿವರಾಗುವ ಲಾಬಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಾಸಕರಾದ ನಂತರ ಪ್ರಥಮವಾಗಿ ನೀರಿನ ಸಮಸ್ಯೆಗಳತ್ತ ಗಮನ ಹರಿಸುವ ಮೂಲಕ ತೋರಬೇಕಿದ್ದ ಜನಪರ ಕಾಳಜಿ ಇನ್ನೂ ವ್ಯಕ್ತವಾಗಿಲ್ಲ.
ತಾಲೂಕಿನ ಜನತೆ ಮಾತ್ರ ಅದೇ ಪ್ರೀತಿ- ಸ್ನೇಹದೊಂದಿಗೆ ನೂತನ ಶಾಸಕ ಡಾ. ಅಜಯ್‌ಸಿಂಗ್ ಬರುವಿಗೆ ಕಾಯುತ್ತಿದ್ದಾರೆ. ಶಾಸಕರು ಬಂದು ತಮ್ಮ ನೀರಿನ ಗೋಳು ಆಲಿಸಿ ತಕ್ಕ ಪರಿಹಾರ ಹುಡುಕಲಿ ಎಂಬುದು ಜನರ ನಿರೀಕ್ಷೆ, ಆದರೆ ಡಾ. ಅಜಯ್ ಅದೆಷ್ಟರ ಮಟ್ಟಿಗೆ ಜನರ ಭಾವನೆಗಳಿಗೆ ಸ್ಪಂದಿಸುವರೋ ಕಾದು ನೋಡಬೇಕಷ್ಟೆ.
ನೀರಿಗಾಗಿ ಬಿಜಾಪುರ ಜಿಲ್ಲೆಯತ್ತ ಪಯಣ..
ಜೇವರ್ಗಿ ಗಡಿ ಅಂದ್ರೆ ಬಿಜಾಪುರ ಜಿಲ್ಲೆ, ಅಲ್ಲಿನ ಸಿಂದಗಿ ತಾಲೂಕು ಜೇವರ್ಗಿಗೆ ಅಂಟಿಕೊಂಡಿದೆ. ದೇಸಣಗಿ ಹಾಗೂ ರಂಜಣಗಿ ಗ್ರಾಮಸ್ಥರು ಕೊಡ ಹಿಡಿದು ನೀರಿಗಾಗಿ ಸಿಂದಗಿ ತಾಲೂಕಿನ ಮೋಟರಗಿಗೆ ಹೋಗಬೇಕು. ಬರೋಬ್ಬರಿ 5 ಕಿಮೀ ದೂರದ ಮೋರಟಗಿಗೆ ಹೋದ್ರಷ್ಟೆ ದೇಸಣಗಿ ಮಂದಿ ನೀರು ಕುಡಿಲಿಕ್ಕಿ ಸಾಧ್ಯ.
ಕಲ್ಲಹಂಗರ್ಗಾ, ರಾಜವಾಳ, ಬಿರಾಳ, ಮಲ್ಲಾ(ಕೆ), (ಬಿ), ಅಂಕಲಗಾ ಹೀಗೇ ಸಮಸ್ಯಾತ್ಮಕ ಹಾಗೂ ಬಾಯಾರಿರುವ ಗ್ರಾಮಗಳ ಪಟ್ಟಿ ಬೆಳೆಯುತ್ತದೆ. ಆದರೆ ಪರಿಹಾರ ಮಾತ್ರ ಇಲ್ಲೆಲ್ಲಾ ಮರೀಚಿಕೆಯಾಗಿದ್ದು ದುರಂತ.
ಜೇವರ್ಗಿಯ 148 ಹಳ್ಳಿಗಳ ಪೈಕಿ ಕನಿಷ್ಠ 100ರಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಕಳೆದ 2 ತಿಂಗಳು ಚುನಾವಣೆ, ಇದರಲ್ಲೇ ಕಾಲಕಳೆದ ತಾಲೂಕಾಡಳಿತ, ಅಧಿಕಾರಿಗಳು, ಎಂಜಿನಿಯರ್‌ಗಳು ಹಳ್ಳಿಗಳತ್ತ ನೋಡಿಯೇ ಇಲ್ಲ. ಇದರಿಂದಾಗಿ ಸಮಸ್ಯೆ ಹೆಚ್ಚಿದೆ.