ಹೋತ ಹಾಲು ಕೊಡತೈತಿ!
ಕ.ಪ್ರ. ವಾರ್ತೆ , ಯಾದಗಿರಿ , ಮೇ 14
ಪ್ರಕೃತಿಯಲ್ಲಿನ ಅನೇಕ ವಿಚಿತ್ರಗಳನ್ನು ಕಂಡು, ಕೇಳಿದ್ದೇವೆ. ಗಣೇಶ ಹಾಲು ಕುಡಿದದ್ದು, ದೇವರ ಫೋಟೋದಿಂದ ವಿಭೂತಿ ಉದುರುವುದು. ಕಪ್ಪೆ ಹಾವನ್ನು ನುಂಗಿದ್ದು.. ಹೀಗೆ ವಿಸ್ಮಯಗಳಿಗೆ ಲೆಕ್ಕವಿಲ್ಲ. ಇಂಥ ವೈಚಿತ್ರ್ಯಗಳ ಸಾಲಿಗೆ ಇಲ್ಲಿ ಮತ್ತೊಂದು ಸೇರ್ಪಡೆಯಾಗಿದೆ. ಅದೆನೆಂದರೆ, ಗಂಡು ಆಡು(ಹೋತ) ನಿತ್ಯ ಹಾಲು ನೀಡುತ್ತಿದೆ!
ಹೌದು. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ಅಲೆಮಾರಿ ಕುಟಂಬದ ಅಯ್ಯಪ್ಪ ಎಂಬವರು ಮೇಯಿಸುತ್ತಿರುವ ನೂರಾರು ಆಡುಗಳ ಪೈಕಿ ಒಂದು ಹೋತ ಹಾಲು ನೀಡುತ್ತಿದೆ. ಕಳೆದ 40 ವರ್ಷಗಳಿಂದಲೂ ಕುರಿ ಕಾಯುವುದನ್ನೇ ಕಾಯಕ ಮಾಡಿಕೊಂಡಿರುವ ಅಯ್ಯಪ್ಪ ಅವರು ಇಂಥ ವಿಸ್ಮಯ ಕಂಡದ್ದು ಇದೇ ಮೊದಲಂತೆ. ಸುಮಾರು 300ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸುತ್ತ ಊರೂರು ಅಲೆಯುತ್ತ ಅಲೆಮಾರಿ ಜೀವನ ಸಾಗಿಸುತ್ತಿರುವ ಅಯ್ಯಪ್ಪ ಕುಟುಂಬಕ್ಕೆ ಈ ಹೋತ ಹಾಲು ನೀಡುತ್ತಿರುವುದನ್ನು ಕಂಡು ನಂಬದಾಗಿದ್ದಾರೆ.
ಕುಂಟುತ್ತಿದ್ದ ಆಡು: ಸುಮಾರು 2 ವರ್ಷ ಪ್ರಾಯದ ಹೋತಕ್ಕೆ ಇರಬೇಕಾದ ಎಲ್ಲ ಅಂಗಾಂಗಗಳೂ ಇವೆ. ಆಡಿಗೆ ಇರುವ ಜನನೇಂದ್ರಿಯ ಇಲ್ಲ. ಆದರೆ ಕೆಚ್ಚಲು ಇದ್ದು, ಎರಡು ಮೊಲೆಗಳಿಂದ ನಿತ್ಯವೂ ಹಾಲು ಬರುತ್ತಿದೆ. ಆರಂಭದಲ್ಲಿ ಸಾಮಾನ್ಯ ಹೋತದಂತೆಯೇ ಇದ್ದರೂ ಮೇಯುತ್ತಿರುವಾಗ ಕುಟುಂತಿತ್ತು. ಆಗ ಕಾಲನ್ನು ಹಿಡಿದು ನೋಡಿದಾಗ ಕೆಚ್ಚಲು ಇರುವುದು ಗಮನಕ್ಕೆ ಬಂತು. ಅಚ್ಚರಿಗಾಗಿ ಅದನ್ನು ಹಿಂಡಿದಾಗ ಹಾಲು ಬಂತು ಎನ್ನುತ್ತಾರೆ ಅಯ್ಯಪ್ಪ.
ಈ ಕುರಿತು ಅಯ್ಯಪ್ಪ ಅವರು ಅಚ್ಚರಿಯ ಜತೆಗೆ ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಜೀವನದಾಗ ಇಂಥ ಹೋತ ನೋಡಿಲ್ರಿ, ಮೊದ್ಲು ಹಾಲು ಬರ್ತಿದ್ದನ್ನು ಕಂಡು ನಂಬ್ಲಿಕ್ಕೇ ಆಗ್ಲಿಲ್ಲ. ಆದರೆ ಬರೋದು ಸತ್ಯ ಆಗಿತ್ತು. ಆ ಮೇಕೆಯನ್ನು ನೀಡಿದ್ದ ಮಾಲೀಕರಿಗೆ ಈ ವಿಷಯ ತಿಳಿಸಿದಾಗ ಅವರೂ ನಂಬ್ಲಿಲ್ಲ. ಏನು ಮಜಾಕ್ ಮಾಡಾಕತ್ತೀಯೇನೋ, ನನ್ನ ಕುರಿ ಮಾಡಾಕತ್ತೀಯಲ್ಲ ಎಂದು ಮಾಲೀಕರು ಹೇಳಿದ್ದರು. ನಂತರ ಅವ್ರಿಗೆ ಹೋತ ಹಾಲು ಕೊಡೋದನ್ನು ತೋರ್ಸಿದಾಗ ಅವ್ರಿಗೂ ಆಶ್ಚರ್ಯ ಆತು. ದಿನಾ ಸುಮಾರು ಅರ್ಧ ಲೀಟರ್ ಹಾಲು ಹಿಂಡಿ ಅದನ್ನು ನಾಯಿಗಳಿಗೆ ಹಾಕ್ತಿದ್ದೀವಿ. ಆದ್ರ ಇಂಥ ಕುರಿ ಶಾಪ ಅಂಥ ಜನಾ ಹೇಳ್ತಾರ. ಅದ್ಕ ಅದನ್ನು ದೇವ್ರೀಗೆ ಬಿಡ್ಬೇಕು ಅಂತಿದೀನಿ ಎಂದು ಹೇಳಿದರು.
-ನಾರಾಯಣ ಹೆಗಡೆ