ಕರೆಂಟ್ ಇದ್ರಷ್ಟೆ ನೀರು, ಇಲ್ದಿದ್ರೆ ಕಣ್ಣೀರೇ ಗತಿ...
ಕನ್ನಡಪ್ರಭ ವಾರ್ತೆ, ಚಿತ್ತಾಪುರ. ಮೇ 15
ಕರೆಂಟ್ ಇದ್ದರಷ್ಟೇ ಕುಡಿಯಲು ನೀರು ಸಿಕ್ತದ, ಇಲ್ದೆ ಹೋದ್ರೆ ಕಣ್ಣೀರೇ ಗತಿ. ಯಾಕಂದ್ರ ಕರೆಂಟ್ ಮ್ಯಾಗ ಮೋಟರ್ ನಡಿಯೋವ್ಹಂಗ ಬೋರವೆಲ್ಗೆ ವ್ಯವಸ್ಥಾ ಮಾಡ್ಯಾರ್ರಿ. ಕರೆಂಟ್ ಕಣ್ಣಾಮುಚ್ಚಾಲೆ ಆಟ ಇದ್ದದ್ದೇ. ಹೀಗಾಗಿ ಕುಡಿಯುವ ನೀರಿನ ಗೋಳು ಬ್ಯಾಸ್ಗಿ ಪೂರಾ ನಮ್ಮನ್ನ ತಿಕ್ಕಿ ಮುಕ್ಲಿಕತ್ತದ ಯಪ್ಪಾ....
ಜಿಲ್ಲೆಯ ಕಲ್ಲುಖಣಿ ನಾಡು ಚಿತ್ತಾಪುರದ ಜನತೆ ಕುಡಿಯುವ ನೀರಿಗಾಗಿ ಕಣ್ಣೀರ ಕೋಡಿಯನ್ನೇ ಹರಿಸುತ್ತಿದ್ದಾರೆ. ಯಾರಾದರೂ ಅಲ್ಲಿಗೆ ಹೋಗಿ ಕೇಳಿದರೆ ಸಾಕು, ನಮ್ಮಗೋಳು ಬಕ್ಕಳ ಅದರೀ ಯಪ್ಪಾ, ಅದನ್ನ ಕೇಳಿ ಯಾನ್ ಮಾಡ್ತೀರಿ ನೀವೇನ್ ಬಗೆಹರಿಸ್ತೀರೇನ್ ಎಂದು ಖಾರವಾಗಿ ಪ್ರಶ್ನಿಸಿ ಕೊಡಗಳೊಂದಿಗೆ ಕೊಳವೆ ಬಾವಿಗಳತ್ತ ಓಡುತ್ತಾರೆ.
ಪ್ರಖರ ಬಿಸಿಲು ಇಲ್ಲಿ ತನ್ನ ಆಟ ಶುರು ಮಾಡಿದೆ. ಕೆಳಗೆ ಕಲ್ಲು ಖಣಿ. ಹೀಗಾಗಿ ಬಿಸಿಲ ಝಳ ದುಪ್ಪಟ್ಟು ತನ್ನ ಪರಿಣಾಮ ಇಲ್ಲಿ ಉಂಟು ಮಾಡುತ್ತಿದೆ. ಚಿತ್ತಾಪುರ ತಾಲೂಕು ಕಲ್ಲುಗಣಿಗಳ ಪ್ರದೇಶವಾಗಿರುವದರಿಂದ ಬೇಸಿಗೆ ಬಿಸಿಲಿನ ತಾಪ ಪ್ರತಿ ವರ್ಷಕ್ಕಿಂತಲೂ ಹೆಚ್ಚು. ಜನ- ಜಾನುವಾರುಗಳು ನೀರಿಲ್ಲದೆ ನರಳುವಂತೆ ಮಾಡಿದೆ.
ನೀರಿನದ್ದೇ ದೊಡ್ಡ ಸಮಸ್ಯೆ: ಚಿತ್ತಾಪುರ ತಾಲೂಕು ಭೌಗೋಳಿಕವಾಗಿ ರಾಜ್ಯದಲ್ಲಿಯೇ ಎರಡನೆ ದೊಡ್ಡ ತಾಲೂಕು. ವಿಸ್ತ್ರೀರ್ಣದಲ್ಲಿ ಇದೇ ದೊಡ್ಡದು. 35 ಗ್ರಾಪಂ, 5 ಕಂದಾಯ ಹೋಬಳಿಗಳನ್ನು, 7 ಜಿಪಂ, 25 ತಾಪಂ ಕ್ಷೇತ್ರಗಳನ್ನು ಹೊಂದಿದೆ.
ಈ ತಾಲೂಕಿನಲ್ಲಿ ಜಲ ಹಾಗೂ ನೈಸರ್ಗಿಕ ಸಂಪನ್ಮೂಲಕ್ಕೇನೂ ಕೊರತೆಯಿಲ್ಲ. ಅದರೆ ಅದನ್ನು ಸದುಪಯೋಗ ಪಡಿಸಿಕೊಳ್ಳುವ ಮನಸ್ಸುಗಳ ಕೊರತೆ ಅಪಾರ. ಯಾರು ಈ ನಿಸರ್ಗ ಕೊಡುಗೆಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ತಾಲೂಕಿನ ಪ್ರಗತಿಗೆ ಬೆಂಬಲಿಸುತ್ತಿಲ್ಲ ಎಂಬುದೇ ಇಲ್ಲಿನವರ ಹಳಹಳಿಕೆ.
ಕಳೆದ ಎರಡು ತಿಂಗಳಿಂದ ಹಲವಾರು ಗ್ರಾಮಗಳು ಹನಿ ನೀರಿಗಾಗಿ ಸಾವಿರಾರು ಜನ- ಜಾನುವಾರುಗಳು ಪರಿತಪಿಸುತ್ತಿದ್ದರೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಮುಖಂಡರು ರಾಜ್ಯ ವಿಧಾನಸಭೆ ಚುನಾವಣಿಯ ಗುಂಗಿನಲ್ಲಿದ್ದರು.
ಜನರ ಸಮಸ್ಯೆಗೆ ಸ್ಪಂದಿಸೋರಿಲ್ಲ: ಗ್ರಾಮಗಳಲ್ಲಿ ಜನರು ಅನುಭವಿಸುತ್ತಿರುವ ತೊಂದರೆಗಳನ್ನೇ ಮರೆತಂತೆ ಇವರಿದ್ದದ್ದು ನೋಡಿದರೆ ಚಿತ್ತಾಪುರ ಸುಖವಾಗಿದೆ ಎಂಬ ನೋಟ ಹೊರಹೊಮ್ಮಿತ್ತು.
ಆದರೆ ತಾಲೂಕಿನ ಒಳ ಹೊಕ್ಕವರಿಗೆ ಮಾತ್ರ ಗೊತ್ತು, ಇಲ್ಲಿನ ಬೇಗುದಿಗೆ ಏನು ಎಂಬುದು.
ಹಲವು ಗ್ರಾಮಗಳಲ್ಲಿ ಬಾವಿಗಳು ಬತ್ತಿವೆ. ನಲ್ಲಿಗಳಲ್ಲಿ ನೀರಿಲ್ಲದೆ ಬರೀ ಗಾಳಿ ಬರುತ್ತಿವೆ. ಜನರು ಹಗಲು ರಾತ್ರಿ ಎನ್ನದೆ ಖಾಲಿ ಕೊಡಗಳೊಂದಿಗೆ ನೀರು ಹುಡುಕುತ್ತಾ ನಾಲ್ಕಾರು ಕಿಮೀ ಹೋಗಿ ನೀರು ತರುವುದೇ ನಿತ್ಯದ ಕಾಯಕವಾಗಿದೆ.
ತಾಲೂಕಲ್ಲಿ ಭೀಮಾ, ಕಾಗಿಣಾ ನದಿ ಹರಿದು, ಹಲವು ಕಡೆ ಬ್ಯಾರೇಜ್ಗಳಿದ್ದರೂ ತಾಲೂಕಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವು ಗ್ರಾಮಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳನ್ನು ಸಂಪರ್ಕಿಸಲಾಗಿ ಅಧಿಕಾರಿಗಳಿಂದ ಸರಿಯಾದ ಮಾಹಿತಿ ನೀಡಲು ಇಂದು, ನಾಳೆ ಎಂದು ನೆಪ ಹೇಳಿ ಕಾಲ ಕಳೆಯುತ್ತಿರುವರು.
ಇಲ್ಲೆಲ್ಲಾ ತೊಂದರೆ: ಅಧಿಕಾರಿಗಳು ಹೇಳುವ ಪ್ರಕಾರ- ತೋನಸನಹಳ್ಳಿ(ಎಸ್), ಡೊಣ್ಣೂರ, ರಾಜೋಳಾ, ಡೋಣಗಾಂವ, ದಂಡಗುಂಡ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ನೀರಿನ ತೊಂದರೆ ಇದ್ದರೆ, ಬಳವಡಗಿ ತಾಂಡಾದಲ್ಲಂತೂ ಹನಿ ನೀರಿಗೂ ತತ್ವಾರ. ಇಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.
ಅದರೆ ಕೆಲವು ಗ್ರಾಮಗಳಲ್ಲಿ ಕರೆಂಟ್ನದ್ದೇ ದೊಡ್ಡ ಸಮಸ್ಯೆ. ಯಾವಾಗ ಕರೆಂಟ್ ಬರುತ್ತದೋ ಯಾವಾಗ ನೀರು ಬಿಡುವುದೋ ಎಂದು ಜನ ರಾತ್ರಿ- ಹಗಲು ಎನ್ನದೆ ನೀರಿಗೆ ಕಾಯಬೇಕು. ಕರೆಂಟ್ ಕೈಕೊಟ್ಟರೆ ಕೊಡ ನೀರು ಸಿಗೋದಿಲ್ಲಾ ಎನ್ನುತ್ತಾರೆ ಗ್ರಾಮಸ್ಥರು.
ಭೀಮಳ್ಳಿ ಪಂಚಾಯ್ತಿ ಗೋಳು: ಭೀಮನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಜೋಳ, ಡೋಣಗಾಂವ ಗ್ರಾಮಗಳಲ್ಲಿ ಕರೆಂಟ್ ತೊಂದರೆ ಇರುವ ಕಾರಣ ಜನರೇಟರ್ ಬಳಸಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸುತ್ತಾರೆ. ಅದರೆ ಗ್ರಾಮಸ್ಥರು ನಮಗೆ ನೀರಿನ ತೊಂದರೆ ಬಹಳ ಇದೆ ಎಂದು ಹೇಳುತ್ತಾರೆ.
ಇನ್ನು ತಾಲೂಕಿನ ದಿಗ್ಗಾಂವ, ಅಲ್ಲೂರ, ದಂಡಗುಂಡ, ಭಾಗೋಡಿ, ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಿಂದ ನಮಗೆ ನೀರಿನ ತೊಂದರೆ ಕಾಡುತ್ತಿದೆ. ಪರಿಹಾರ ಯಾವಾಗೋ ದೇವರೇ ಬಲ್ಲ ಎಂದು ದೇವರ ಮೊರೆ ಹೋಗುತ್ತಾರೆ. ತಾಲೂಕಿನ ಬಳವಡಗಿ ತಾಂಡಾದಲ್ಲಿ ಜನರು ಕೊಡ ನೀರಿಗಾಗಿ ಹೋರಾಟ ಮಾಡಬೇಕಾಗಿದೆ. ಕಾರಣ ಇಲ್ಲಿಯ ಕೊಳವೆಬಾವಿಗಳು ಸಂಪೂರ್ಣ ಬತ್ತಿವೆ. ಸ್ಥಳೀಯ ಆಡಳಿತ ಕೊಳವೆ ಬಾವಿಯ ಹೂಳು ತೆಗೆಸಿದರೂ ನೀರಿನ ಮೂಲವೇ ಬತ್ತಿ ಹೋಗಿದೆ. ಇನ್ನೂ ಬೋರವೆಲ್ಗಳಲ್ಲಿಯೂ ಇದೇ ಸ್ಥಿತಿ 650 ಫೀಟ್ ಪೈಪ್ ಹಾಕಿದರೂ ನೀರು ಬರುತ್ತಿಲ್ಲ ಎಂಬುದು ಸ್ಥಳಿಯ ಅಧಿಕಾರಿಗಳ ಅಳಲು. ಗ್ರಾಮಕ್ಕೆ ಶಾಶ್ವತವಾಗಿ ಕುಡಿವ ನೀರಿನ ತೊಂದರೆ ತಪ್ಪಿಸಲು ಭೀಮಾ ನದಿಯಿಂದ ಗ್ರಾಮಕ್ಕೆ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡಿದರೆ ಮಾತ್ರ ನಮ್ಮ ಗ್ರಾಮಕ್ಕೆ ನೀರಿನ ಬವಣಿ ತಪ್ಪುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ತಂದೆಯಂತೆ ಮಗ ಕ್ಷೇತ್ರ ಪೊರೆಯುವರೇ?
ರಾಜ್ಯದಲ್ಲಿ ನೂತನ ಸರ್ಕಾರ ರಚನೆಗೊಂಡಿದೆ. ಪ್ರಿಯಾಂಕ್ ಖರ್ಗೆ ಈ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಈಗ ನೀರಿನ ಸಮಸ್ಯೆಗೆ ಪರಿಹಾರ ಹುಡುಕುವ ಜವಾಬ್ದಾರಿ ಅವರ ಹೆಗಲೇರಿದೆ. ಆದರಿವರು ಚುನಾವಣೆ ಫಲಿತಾಂಶ ಹೊರಬಿದ್ದ ಮರುದಿನ ಬೆಂಗಳೂರು ಸೇರಿದವರು ಇನ್ನೂ ಕ್ಷೇತ್ರದತ್ತ ಹೆಜ್ಜೆ ಹಾಕಿಲ್ಲ. ಸಿಎಂ ಪ್ರಮಾಣ ವಚನ, ದೆಹಲಿ- ಬೆಂಗಳೂರು ನಡುವಿನ ಓಡಾಟಗಳಲ್ಲೇ ಪ್ರಿಯಾಂಕ್ ಮಗ್ನರಾಗಿದ್ದಾರೆ.
ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಮಾದರಿಯಲ್ಲೇ ಪ್ರಿಯಾಂಕ್ ಖರ್ಗೆ ಕ್ಷೇತ್ರವನ್ನು ಪೊರೆಯುವರೇ ಎಂಬುದೇ ಇಲ್ಲಿನವರ ಪ್ರಶ್ನೆ. ಕಾಳಜಿ ವಹಿಸಿ ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಮೂಲ ಸೌಕರ್ಯದ ಜೊತೆ ವಿದ್ಯುತ್, ಕುಡಿವ ನೀರಿನ ತೊಂದರೆಗೆ ಶಾಶ್ವತ ಪರಿಹಾರ ಕಂಡುಹಿಡಿದು ಮುಂದಿನ ದಿನಗಳಲ್ಲಿ ನೀರಿನ ತೊಂದರೆ ಬರದಂತೆ ಮಾಡುವರೇ ಎಂದು ಜನರು ಕಾದು ನೋಡುತ್ತಿದ್ದಾರೆ.
ಡೊಣ್ಣೂರ ಗ್ರಾಮದ ಕತೆಯೆ ಬೇರೆ...
ಇಲ್ಲಿ ನೀರಿದೆ. ಆದರೆ ಸರಬರಾಜು ಮಾಡುವ ಪಂಪ್ಸೆಟ್ ತಿಂಗಳಲ್ಲಿ ಒಂದು ಬಾರಿಯಾದರೂ ಬಂದ ಬೀಳುತ್ತದೆ. ಸ್ಥಳೀಯ ಆಡಳಿತ ಪಂಪ್ಸೆಟ್ ಬದಲಿಸಿ ಹೊಸ ಪಂಪ್ಸೆಟ್ ಕೊಡಿಸುವ ಮನಸ್ಸು ಮಾಡದೆ ಹಳೆಯದನ್ನೇ ದುರಸ್ತಿ ಮಾಡುತ್ತಿರುವುದೇ ಇದಕ್ಕೆ ಕಾರಣ.
ಇದನ್ನು ದುರಸ್ತಿ ಮಾಡುವವರೆಗೂ ನಮಗೆ ನೀರಿಲ್ಲ. ಆಗ ಹಳ್ಳದ ನೀರೇ ಕುಡಿಯಬೇಕು. ಹಳ್ಳದ ನೀರು ಕುಡಿಯಲು ಯೋಗ್ಯವಿಲ್ಲ. ಬೇರೆ ದಾರಿಯಿಲ್ಲದೆ ಇದೇ ನೀರು ಕುಡಿದು ಜನರು ಅನೇಕ ಸಲ ರೋಗಕ್ಕೆ ತುತ್ತಾದ ಘಟನೆ ನಡೆದಿದೆ ಎನ್ನುತ್ತಾರೆ ಗ್ರಾಮದ ತಿಪ್ಪಣ್ಣ ಇಂಗನಕಲ್.