ಕೆಂಭಾವಿ: ಬಿಸಿಯೂಟ ವಂಚಿತ ಮಕ್ಕಳು
ಕನ್ನಡಪ್ರಭ ವಾರ್ತೆ ಕೆಂಭಾವಿ ಮೇ 15
ಜಿಲ್ಲೆಯಲ್ಲಿ ಬರಗಾಲವಿದೆ ಎಂದು ಪ್ರತಿ ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಕಲ್ಪಿಸಿದ್ದರೂ ಕೆಂಭಾವಿ ವಲಯದ ಹೈಸ್ಕೂಲ್ಗಳ ಬಡ ಮಕ್ಕಳು ಬಿಸಿಯೂಟ ಭಾಗ್ಯದಿಂದ ವಂಚಿತರಾಗಿದ್ದಾರೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಅಕ್ಷರ ದಾಸೋಹ ಯೋಜನೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ಹಾಕಬೇಕೆಂದು ತಿಳಿಸಿದೆ. ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಬರಗಾಲವಿದ್ದ ಪ್ರಯುಕ್ತ ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ತಪ್ಪದೆ ನಡೆಸಬೇಕು ಎಂಬ ಅಧಿಕೃತ ಆದೇಶವಿದೆ.
ಮಕ್ಕಳು ಯೋಜನೆಯಿಂದ ವಂಚಿತ: ಆದರೂ ಕೆಂಭಾವಿಯ ಕನ್ಯಾ ಪ್ರೌಢ ಶಾಲೆ, ಉರ್ದು ಪ್ರೌಢ ಶಾಲೆ, ಸಂಯುಕ್ತ ಪ್ರೌಢ ಶಾಲೆ ಹಾಗೂ ಯಾಳಗಿ, ಮುದನೂರ, ನಗನೂರ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳು ಈ ಯೋಜನೆಯಿಂದ ವಂಚಿತರಾಗಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸಿಗದೆ ಪರದಾಡುತ್ತಿದ್ದಾರೆ.
ಈ ಬಗ್ಗೆ ಕೆಂಭಾವಿ ಬಾಲಕಿಯರ ಸರ್ಕಾರಿ ಹೈಸ್ಕೂಲ್ ಮುಖ್ಯಗುರು ಶಾಂತಗೌಡ ಕೆರುಟಗಿ ಅವರನ್ನು ಕೇಳಿದಾಗ, 'ನಮ್ಮ ಶಾಲೆಯಲ್ಲಿ ಬೇಸಿಗೆ ಕಾಲದ ಬಿಸಿಯೂಟ ಹಾಕುವುದರ ಬಗ್ಗೆ ನಮಗೆ ಯಾವುದೇ ಆದೇಶ ಬಂದಿಲ್ಲ. ಆದ್ದರಿಂದ ಮಧ್ಯಾಹ್ನದ ಬಿಸಿಯೂಟ ನಡೆಯುತ್ತಿಲ್ಲ. ಇಲ್ಲಿ ಮಾತ್ರವಲ್ಲದೆ ನಮ್ಮ ವಲಯದ ಯಾವುದೇ ಪ್ರೌಢಶಾಲೆಗಳಲ್ಲಿ ಈ ಯೋಜನೆ ಇಲ್ಲ' ಎಂದು ತಿಳಿಸಿದ್ದಾರೆ.
ಆದರೆ ಅಧಿಕಾರಿಗಳನ್ನು ಕೇಳಿದರೆ- 'ಎಲ್ಲ ಕಡೆ ಬೇಸಿಗೆ ರಜಾ ದಿನಗಳಲ್ಲೂ ಬಿಸಿಯೂಟ ಬಡಿಸಲಾಗುತ್ತಿದೆ' ಎಂಬ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.