ಟಂಟಂ ಪಲ್ಟಿ; ಮಹಿಳೆ ಸಾವು, ನಾಲ್ವರಿಗೆ ಗಾಯ
ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 15
ಟಂಟಂವೊಂದು ಉರುಳಿ ಬಿದ್ದ ಪರಿಣಾಮ ಮಹಿಳೆ ಮೃತಪಟ್ಟಿದ್ದು, ನಾಲ್ಕು ಜನ ಗಾಯಗೊಂಡ ಘಟನೆ ಅಫಜಲ್ಪುರ ತಾಲೂಕಿನ ದೇಸಾಯಿ ಕಲ್ಲೂರ ತಾಂಡಾ ದರ್ಗಾದ ಬಳಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸಂಭವಿಸಿದೆ.
ಅಫಜಲ್ಪುರ ತಾಲೂಕಿನ ಕರಜಗಿ ಗ್ರಾಮದ ಮೈನಾಬಾಯಿ ಗಂಡ ಶಂಕರ ರಾಠೋಡ ಮೃತ ಮಹಿಳೆ. ಶಂಕರ ರಾಠೋಡ, ಸಿದ್ದಪ್ಪ ಕೋಳಿ, ಶ್ರೀದೇವಿ, ಮಲ್ಲಯ್ಯ ಮುತ್ಯಾ ಗಾಯಗೊಂಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ ರಾಠೋಡ ಮತ್ತು ಮೈನಾವತಿ ರಾಠೋಡ ಅವರ ಪುತ್ರಿ ಶ್ರೀದೇವಿ ಎಂಬಾಕೆಯನ್ನು ಬಟಗೇರಿಯಲ್ಲಿ ಆಯುರ್ವೇದಿಕ್ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಹೋಗಲು ಕರಜಗಿ ಗ್ರಾಮದಿಂದ ಟಂಟಂವೊಂದನ್ನು ಗುತ್ತಿಗೆ ಪಡೆದುಕೊಂಡು ಎಲ್ಲರೂ ಗ್ರಾಮದಿಂದ ಬಟಗೇರಿಗೆ ಹೋಗಿದ್ದರು. ಅಲ್ಲಿ ಆಯುರ್ವೇದಿಕ್ ಔಷಧಿ ಪಡಿದುಕೊಂಡು ಮರಳಿ ಗ್ರಾಮಕ್ಕೆ ಬರುತ್ತಿದ್ದಾಗ ಚಾಲಕನ ನಿರ್ಲಕ್ಷ್ಯದಿಂದ ದೇಸಾಯಿ ಕಲ್ಲೂರ ತಾಂಡಾ ದರ್ಗಾದ ಹತ್ತಿರ ಉರುಳಿ ಬಿದ್ದಿದೆ. ಇದರ ಪರಿಣಾಮವಾಗಿ ಅನಾರೋಗ್ಯಕ್ಕೆ ಒಳಗಾದ ಶ್ರೀದೇವಿ ಅವರ ತಾಯಿ ಮೈನಾಬಾಯಿ ರಾಠೋಡ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮೈನಾವತಿಯ ಮಗಳು ಶ್ರೀದೇವಿ ಮತ್ತು ಗಂಡ ಶಂಕರ ರಾಠೋಡ ಇತರರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಫಜಲ್ಪುರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಸಿದ್ದಪ್ಪ ಕೋಳಿ ನೀಡಿರುವ ದೂರು ದಾಖಲಿಸಿಕೊಂಡಿದ್ದಾರೆ.