ತಾಂಡಾದಲ್ಲಿ ಬೆಂಕಿ ಅವಘಡ
ಚಿತ್ತಾಪುರ: ಇಲ್ಲಿನ ಸ್ಟೇಷನ್ ತಾಂಡಾದ ರೈಲ್ವೆ ಕಂಪೌಂಡ್ಗೆ ಹೊಂದಿಕಕೊಂಡು ಅಲ್ಲಿನ ಜನ ಹಾಕಿರುವ ತೊಗರಿ ಕಟ್ಟಿಗೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಜನರು ಸಂಗ್ರಹಿಸಿದ ಅಪಾರ ಪ್ರಮಾಣದ ಕಟ್ಟಿಗೆ ಸುಟ್ಟು ಕರಕಲಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ಠಾಣಿ ಸಿಬ್ಬಂದಿ ಬಂದು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಘಟನೆಯಲ್ಲಿ ಯಾವುದೇ ಮನೆ ಹಾಗೂ ಜನ ಜಾನುವಾರುಗಳಿಗೆ ಹಾನಿಯಾಗಿಲ್ಲ. ಸ್ಥಳಕ್ಕೆ ಪಿಎಸ್ಐ ಹಾಗೂ ಪೊಲೀಸರು ಬಂದು ಬೆಂಕಿ ನಂದಿಸಲು ಜನರೊಂದಿಗೆ ಪ್ರಯತ್ನಿಸಿದರು. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಮೇಲೆ ಹಲ್ಲೆ
ಗುಲ್ಬರ್ಗ: ಹಾಗರಗಾ ರಸ್ತೆಯಲ್ಲಿರುವ ಸಭಾ ಫಂಕ್ಷನ್ ಹಾಲ್ ಬಳಿ ಇರುವ ಹಬೀಬ್ ಹೋಟೆಲ್ ಬಳಿ ವ್ಯಕ್ತಿಯೊಬ್ಬನಿಗೆ ಮೂರು ಜನ ಸೇರಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಗುಲ್ಬರ್ಗದ ಗುಲ್ಷನ್ ಅರಾಫತ್ ಕಾಲೋನಿಯ ನಿವಾಸಿ ಫರೀದಮಿಯ್ಯಾ ತಂದೆ ಸುಲೇಮಾನ್ ಖರಾದಿ ಎಂಬಾತ ಅಂಗಡಿಯೊಂದರಲ್ಲಿ ಕೆಲಸ ಮುಗಿಸಿಕೊಂಡು ಹೋಟೆಲ್ ಬಳಿ ಕುಳಿತುಕೊಂಡಾಗ ಗುಲ್ಬರ್ಗದ ಸೋನಿಯಾ ಗಾಂಧಿ ಕಾಲೋನಿಯ ಪರಿಚಿತರಾದ ಇಮ್ರಾನ್, ಬಡೇಶಹಾ ಮತ್ತು ಮದರಶಹಾ ಎಂಬುವರು ಕುಡಿದು ಕುಳಿತಿರುವೆ ಎಂದು ಅವಾಚ್ಯವಾಗಿ ಬೈದು ಬಾಯಿಗೆ ಹೊಡೆದ ಪರಿಣಾಮ ಆತನ ಎರಡು ಹಲ್ಲುಗಳು ಕಳಚಿ ಬಿದ್ದಿವೆ. ಈ ಕುರಿತು ಫರೀದಮಿಯ್ಯಾ ಗುಲ್ಬರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.