ನೀರಿಗಾಗಿ ನದಿಯಲ್ಲೇ ಹೊಂಡ ತೆಗಿಬೇಕು!
ವಾರ್ತೆ ಯಾದಗಿರಿ ಮೇ 15
ಎರಡು ವರ್ಷಗಳ ಬರದ ಪರಿಣಾಮದಿಂದ ಈ ಬಾರಿ ಜಲಕ್ಷಾಮ ಬಂದೆರಗಿದೆ.
ಜಿಲ್ಲಾದ್ಯಂತ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕೊಡ ನೀರಿಗೂ ಜನ ಪರದಾಡುವಂತಾಗಿದೆ. ನದಿಯಲ್ಲೇ ಹೊಂಡ ತೆಗೆದರೂ ಬೊಗಸೆ ನೀರು ಸಿಗುವುದು ಕಷ್ಟವಾಗಿದೆ. ಕುರಿಗಳಿಗೆ ಕುಡಿಸಲು ಕುದುರೆ ಮೇಲೆ ನೀರು ತರುವಂತಾಗಿದೆ.
ನೀರಿನ ತುಟಾಗ್ರತೆ ಈ ಹಿಂದಿನ ಕೆಲ ವರ್ಷಗಳಿಗಿಂತ ಈ ಬಾರಿ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಂತೂ ನಿತ್ಯವೂ ನೀರಿನದ್ದೇ ಸುದ್ದಿ. ಎಷ್ಟು ಹೇಳಿದರೂ ಅಧಿಕಾರಿಗಳು ಬಂದು ಮಾಡುವುದು ಅಷ್ಟರಲ್ಲೇ ಇದೆ ಎಂಬ ತಾತ್ಸಾರ ಭಾವನೆಯೂ ಗ್ರಾಮೀಣರಲ್ಲಿ ಬೇರೂರಿದೆ. ಆದ್ದರಿಂದ ಕಷ್ಟವಾದರೂ ಸಹಿಸಿಕೊಂಡು ಖಡಕ್ ಬಿಸಿಲಿನಲ್ಲಿ ಕೊಡ ಹೊರುತ್ತಲೇ ಮಳೆ ದಿನಕ್ಕಾಗಿ ಕಾಯುತ್ತಿದ್ದಾರೆ.
ಕೆಲ ಹಳ್ಳಿಗಳಲ್ಲಿ ನೀರಿನ ಅಭಾವ ಎಷ್ಟಿದೆಯೆಂದರೆ ಜಾನುವಾರುಗಳಿಗೂ ನೀರು ಸಿಗುತ್ತಿಲ್ಲ. ಕುರಿಗಾಹಿಗಳು ಕುದುರೆ ಮೇಲೆ ಕೊಡ ಹೇರಿಕೊಂಡು ಕುರಿಯಿದ್ದಲ್ಲಿಗೆ ನೀರು ತಂದು ಕುಡಿಸುತ್ತಿದ್ದಾರೆ. ಇಂಥ ತೀವ್ರತೆ ಕಳೆದ ಅನೇಕ ವರ್ಷಗಳಿಂದ ಕಂಡೇ ಇಲ್ಲ ಎಂದು ಹಿರಿಯರು ಹೇಳುತ್ತಿದ್ದಾರೆ. ಆದರೆ ಈ ಸಮಸ್ಯೆಗಳೆಲ್ಲವೂ ಈ ಬಾರಿ ಚುನಾವಣಾ ಆರ್ಭಟದ ಮಧ್ಯೆ ಕಳೆದು ಹೋಗಿರುವುದು ದುರ್ದೈವ.
273 ಸಮಸ್ಯಾತ್ಮಕ ಹಳ್ಳಿಗಳು: ಮೇ ತಿಂಗಳ ಉತ್ತರಾರ್ಧಕ್ಕೆ ಕಾಲಿಟ್ಟಿದ್ದು, ಬೇಸಿಗೆಯ ಕೊನೆಯ ಹಂತ ಬಂದಿದೆ. ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಮಾರ್ಚ್ ಆರಂಭದಲ್ಲೇ ಶುರುವಾಗಿತ್ತು. ಜಿಲ್ಲಾಡಳಿತ 273 ಕುಡಿವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿದೆ. ಅವುಗಳ ಪೈಕಿ 7 ಹಳ್ಳಿಗಳಲ್ಲಿ ಗಂಭೀರ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದೆ.
ಶಹಾಪುರ ತಾಲೂಕಿನಲ್ಲಿ 58, ಸುರಪುರ ತಾಲೂಕಿನಲ್ಲಿ 78 ಹಾಗೂ ಯಾದಗಿರಿ ತಾಲೂಕಿನಲ್ಲಿ 87 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದರಾಗಿದೆ. ಇದುವರೆಗೆ 18 ದೂರುಗಳು ಬಂದಿದ್ದು, ಅದಕ್ಕೆ ಸ್ಪಂದಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ.
ನೂರಾರು ಹಳ್ಳಿಗಳಲ್ಲಿ ಸಮಸ್ಯೆ ಉಲ್ಬಣಗೊಂಡಿದ್ದರೂ, ನೀರಿಗಾಗಿ ಕೇವಲ 18 ದೂರುಗಳು ಬಂದಿವೆ ಎಂದರೆ ಆಡಳಿತ ಯಂತ್ರದ ಬಗ್ಗೆ ಜನರಿಗೆ ವಿಶ್ವಾಸವೇ ಇಲ್ಲವೆನ್ನುವುದು ಗೊತ್ತಾಗುತ್ತದೆ. ಶಹಾಪುರ ತಾಲೂಕಿನ ಖಾನಾಪುರ, ಕರಿಬಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಶಾಶ್ವತ ಸಮಸ್ಯೆ: ಜಿಲ್ಲೆಯ ಕೆಲ ಗ್ರಾಮಗಳಲ್ಲಂತೂ ಸಮಸ್ಯೆಗೆ ಇತಿಶ್ರೀ ದೊರೆಯುವುದೇ ಇಲ್ಲ. ಇದಕ್ಕೆ ಕಾರಣ ಸಮಸ್ಯೆ ಎಷ್ಟೇ ಇದ್ದರೂ ಅದನ್ನು ನಿವಾರಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸದೇ ಅದನ್ನು ಶಾಶ್ವತವಾಗಿ ಜೀವಂತವಾಗಿಡುತ್ತಿದ್ದಾರೆ.
ಪ್ರತಿ ಬಾರಿಯೂ ಅಷ್ಟಿಷ್ಟು ಹಣ ಹಾಕಿ ಜನರ ಕಣ್ಣಿಗೆ ಕೆಲಸ ಮಾಡಿದಂತೆ ತೋರಿಸುತ್ತಿದ್ದಾರೆ. ಶಾಶ್ವತ ಯೋಜನೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನೀರಿನ ಮೂಲ ಹುಡುಕದೇ ಇದ್ದ ಕೊಳವೆಬಾವಿಯನ್ನೇ ದುರಸ್ತಿ ಮಾಡುತ್ತ ಕಾಲ ಕಳೆಯುತ್ತಿದ್ದಾರೆ.
ಇದರಿಂದ ಜನರು ಬೇಸತ್ತಿದ್ದು, ನಾವು ಎಷ್ಟು ಬೊಬ್ಬೆ ಹೊಡೆದರೂ ನೀರು ಬರುವುದಿಲ್ಲ ಎಂಬ ವಾಸ್ತವ ಅರಿತುಕೊಂಡಿದ್ದಾರೆ. ಆದ್ದರಿಂದ ಕುದುರೆ, ಎತ್ತಿನ ಬಂಡಿ, ತಲೆಹೊರೆ ಮೇಲೆ ಕೊಡ ಇಟ್ಟುಕೊಂಡು ಬತ್ತಿ ಹೋಗಿರುವ ಹಳ್ಳದಲ್ಲಿ ಹೊಂಡ ತೋಡಿ ಅಶುದ್ಧ ನೀರನ್ನೇ ತುಂಬಿ ಬಳಸುತ್ತಿದ್ದಾರೆ.
ಕೃಷ್ಣಾ ನದಿಯಲ್ಲೂ ನೀರಿಲ್ಲ: ಜಿಲ್ಲೆಯ ಜೀವನದಿಯಾಗಿರುವ ಕೃಷ್ಣಾ ಹಾಗೂ ಭೀಮಾ ನದಿಯಲ್ಲೇ ನೀರು ಬತ್ತುತ್ತಿದೆ. ನಾರಾಯಣಪುರ ಜಲಾಶಯದಲ್ಲಿ ಕುಡಿವ ನೀರಿಗಾಗಿ ನೀರು ಸಂಗ್ರಹಣೆ ಮಾಡಿಟ್ಟಿದ್ದರೂ ಎಲ್ಲ ಗ್ರಾಮಗಳಿಗೆ ಅದು ಪೂರೈಕೆಯಾಗುತ್ತಿಲ್ಲ. ಸುರಪುರ ಪಟ್ಟಣಕ್ಕೇ ನಿತ್ಯ ನೀರು ಪೂರೈಕೆಯಾಗುತ್ತಿಲ್ಲ.
ಅದೇ ರೀತಿ ಭೀಮಾ ನದಿಯಲ್ಲೂ ನೆಲ ಕಾಣುತ್ತಿದ್ದು, ಇನ್ನು ಎಂಟ್ಹತ್ತು ದಿನಗಳಲ್ಲಿ ಮಳೆಯಾಗದಿದ್ದರೆ ಪರಿಸ್ಥಿತಿ ಗಂಭೀರವಾಗುವುದರಲ್ಲಿ ಸಂಶಯವಿಲ್ಲ. ಅನೇಕ ತೆರೆದ ಬಾವಿಗಳಲ್ಲಿ ನೀರು ತಳ ಕಂಡಿದೆ. ನದಿ ಮಧ್ಯದಲ್ಲೇ ಮರಳಿನ ಮಧ್ಯೆ ಹೊಂಡ ತೋಡಿ ಅಲ್ಲಿ ಅಸರುವ ನೀರನ್ನು ಜನ ಸೋಸಿ ಕುಡಿಯುತ್ತಿದ್ದಾರೆ.
ಇಂಥ ಭೀಕರ ಜಲಕ್ಷಾಮ ಎದುರಾಗಿದ್ದರೂ, ಜನರ ದನಿಗೆ ಸ್ಪಂದಿಸಬೇಕಾದವರು ಮಂತ್ರಿ ಪದವಿ ಪಡೆಯಲು ದೆಹಲಿಗೆ ಹೋಗಿ ಕುಳಿತಿದ್ದಾರೆ. ಅಧಿಕಾರಿಗಳು ಈಗಷ್ಟೇ ಚುನಾವಣೆ ಮುಗಿಸಿ ದೊಡ್ಡ ಉಸಿರು ಎಳೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಜನಸಾಮಾನ್ಯ ಮಾತ್ರ ನೀರಿಗಾಗಿ ಕಣ್ಣೀರು ಸುರಿಸುತ್ತಿರುವುದು ಕಾಣುತ್ತಲೇ ಇಲ್ಲ.
-ನಾರಾಯಣ ಹೆಗಡೆ