ಮಾಹಿತಿಗೆ ಕೋರಿಕೆ
ಗುಲ್ಬರ್ಗ: ದಾಸ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರಿಗೆ ಹರಿದಾಸ ಸಾಹಿತ್ಯ ರತ್ನಾಕರ ಹೆಸರಿನಲ್ಲಿ ಅಭಿನಂದನೆ ಗ್ರಂಥದ ಅರ್ಪಣೆ ಕಾರ್ಯ ನಡೆದಿದ್ದು, ದಾಸ ಸಾಹಿತ್ಯ ತಜ್ಞರು, ವಿದ್ವಾಂಸರು ಹಾಗೂ ಇದುವರೆಗೆ ಆಗಿರುವ ಪಿಎಚ್ಡಿ ಮತ್ತು ಬರೆದಿರುವ ದಾಸ ಸಾಹಿತ್ಯ ಕೃತಿಗಳ ಮಾಹಿತಿಗಳನ್ನು ದಾಖಲಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ವಿವರ ನೀಡಲು ಕೋರಲಾಗಿದೆ. ಈ ಗ್ರಂಥದಲ್ಲಿಯ ಒಂದು ಭಾಗದಲ್ಲಿ ರಾಜ್ಯ, ದೇಶ, ಹೊರದೇಶಗಳಲ್ಲಿ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸಂಘ, ಸಂಸ್ಥೆಗಳು, ವ್ಯಕ್ತಿಗಳು ತಮ್ಮ ಕಾರ್ಯಚಟುವಟಿಕೆ, ಸಾಧನೆ, ಪಿಎಚ್ಡಿ ವಿವರಗಳನ್ನು ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ಸ್ವಾಮಿರಾವ ಕುಲಕರ್ಣಿ, ಸಂಪಾದಕರು, ಪ್ಲಾಟ್ ನಂ. 11, ಮಹಾಲಕ್ಷ್ಮೀ ಲೇಔಟ್, ಬ್ರಹ್ಮಪುರ, ಗುಲ್ಬರ್ಗ- 585103 (ಸಂಚಾರ ದೂ. 9448333539) ಸಂಪರ್ಕಿಸಲು ಕೋರಲಾಗಿದೆ.
20 ರಿಂದ ಬೇಸಿಗೆ ಶಿಬಿರ
ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಬಾಲ ಭವನ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 9 ರಿಂದ 14 ವರ್ಷದೊಳಗಿನ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಮೇ 20ರಿಂದ 30ರವರೆಗೆ ನಗರದ ಜಿಲ್ಲಾ ಬಾಲ ಭವನದಲ್ಲಿ ಆಯೋಜಿಸಿದೆ. ಪ್ರವೇಶ ಪಡೆಯಲು ಇಚ್ಚಿಸುವ ಮಕ್ಕಳು ಮೇ 15ರಿಂದ 18ರೊಳಗೆ ಬಾಲ ಭವನದಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಪ್ರತಿ ತಂಡದಲ್ಲಿ 50 ಮಕ್ಕಳಿಗೆ ಅವಕಾಶವಿದ್ದು, ಆದ್ಯತೆಯ ಮೇರೆಗೆ ಮಕ್ಕಳನ್ನು ಆಯ್ಕೆ ಮಾಡಲಾಗುವುದು. ಶಿಬಿರದಲ್ಲಿ ಮಕ್ಕಳಿಗೆ ಸೃಜನಾತ್ಮಕ ಕಲೆ, ಬರವಣಿಗೆ, ಪ್ರದರ್ಶನಗಳು ಹಾಗೂ ಜೇಡಿ ಮಣ್ಣಿನ ಕಲಾಕೃತಿಗಳ ಬಗ್ಗೆ ಭೋದಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂ. 08472-228659 ಹಾಗೂ 9980630453ಗೆ ಸಂಪರ್ಕಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಕೋರಿದ್ದಾರೆ.
ಸಂಸ್ಕಾರ ಶಿಬಿರ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಹೊನ್ನಕಿರಣಗಿಯ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಚಂದ್ರಗುಂಡ ಶಿವಾಚಾರ್ಯರ ನೇತೃತ್ವದಲ್ಲಿ ಮೇ 1ರಿಂದ ಶಹಾಬಾದ್ನ ಶರಣಬಸವೇಶ್ವರ ದೇವಸ್ಥಾನದಿಂದ ಜಂಗಮ ಮಕ್ಕಳಿಗೆ ಸಂಸ್ಕಾರ ಶಿಬಿರ ನಡೆಯುತ್ತಿದ್ದು, ಇದು ಮೇ 30ರವರೆಗೆ ನಡೆಯಲಿದೆ. ಅಖಿಲ ಭಾರತ ವೀರಶೈವ ಮಹಾಸಭೆ ಶಹಾಬಾದ್ ಇವರ ಆಶ್ರಯದಲ್ಲಿ ಈ ಸಂಸ್ಕಾರ ಶಿಬಿರ ಆಯೋಜಿಸಲಾಗಿದೆ. ಚಂದ್ರಗುಂಡ ಶಿವಾಚಾರ್ಯರು ಪ್ರತಿದಿನ ರಾತ್ರಿ 8 ಗಂಟೆಯಿಂದ 9 ಗಂಟೆವರೆಗೆ ಸಿದ್ಧಾಂತ ಶಿಖಾಮಣಿ ಪ್ರವಚನವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಫರಹತಾಬಾದ್ ವಲಯ ಘಟಕದ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಯೋಗಗುರು ಶಿವಶರಣ ಪಾಟೀಲ್, ಸಂಸ್ಕಾರ ಶಿಬಿರದ ಮಾರ್ಗದರ್ಶಕರಾದ ವೇದಮೂರ್ತಿ ಕರಣಯ್ಯ ಸ್ವಾಮಿ ಸ್ಥಾವರಮಠ ಹಾಗೂ ವಿರೇಶ ಶಾಸ್ತ್ರಿ, ಶಿವಪ್ಪ ಕುಂಬಾರ, ಶರಣು ಸೇರಿಕರ್, ಬಸಯ್ಯಸ್ವಾಮಿ ಕಡಿಹಳ್ಳಿ, ಸಿದ್ದು ಕೊಡ್ಲಿ, ಕಲ್ಯಾಣಕುಮಾರ ನಂದಿಕೋಲ, ರಾಜು ಮಠ ಇತರರು ಉಪಸ್ಥಿತರಿದ್ದರು.ನಾಗಯ್ಯ ಸ್ವಾಮಿ ಕೂಡ್ಲಿ ಸ್ವಾಗತಿಸಿದರು. ದಾನಯ್ಯ ಬಸಯ್ಯ ಕಡಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು.