ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಧರಣಿ
ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 15
ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಬಿಸಿಎಂ ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ವಸತಿ ನಿಲಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಹಿಂದುಳಿದ ವರ್ಗಗಳ ಇಲಾಖೆ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಮತ್ತು ಅವರ ಓದಿಗೆ ಅನುಕೂಲವಾಗಲೆಂದು ವಸತಿ ನಿಲಯಗಳನ್ನು ಪ್ರಾರಂಭ ಮಾಡಲಾಗಿದೆ. ಆದರೆ, ಇಲ್ಲಿರುವ ವಸತಿ ನಿಲಯ ಅದಕ್ಕೆ ತದ್ವಿರುದ್ಧವಾಗಿದೆ. ಯಾಕೆಂದರೆ ಇಲ್ಲಿನ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಆರೋಪಿಸಿದರು.
ಈ ಇಲಾಖೆಯ ಅಧಿಕಾರಿಗಳು ಬಾಡಿಗೆ ಕಟ್ಟಡ ಸಿಗುತ್ತಿಲ್ಲ ಎನ್ನುವ ಮೂಲಕ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದಾರೆ. ಇವರಿಗೆ ಸಿಗುವ ಕಟ್ಟಡದ ಮನೆಯ ಮಾಲೀಕರಿಗೆ ಸರಿಯಾಗಿ ಕಟ್ಟಡದ ಬಾಡಿಗೆ ಕೊಡುವುದಿಲ್ಲ. ಅವರ ಕಟ್ಟಡದ ಬಾಡಿಗೆಗಾಗಿ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಕಟ್ಟಡ ದುರಸ್ಥಿಗಾಗಿ ಯಾವುದೇ ಹಣ ಬಳಸದೆ ಇರುವುದು ಹಾಗೂ ಇವರಿಗೆ ಬರುವ ಬಾಡಿಗೆ ಹಣದಲ್ಲಿ ಅಧಿಕಾರಿಗಳಿಗೆ ಕಮೀಷನ್ ಕೊಟ್ಟರೆ ಮಾತ್ರ ಬಾಡಿಗೆ ಬರುತ್ತದೆ. ಈ ಕಾರಣಕ್ಕಾಗಿ ಈ ಹಿಂದೆ ಬಾಡಿಗೆ ಮನೆ ಬಿಡಿಸಲು ಕಾರಣವಾಗಿದೆ ಎಂದು ತಿಳಿಸಿದರು.
ಆಕ್ರೋಶ: ಬಿಸಿಎಂ ಬಾಲಕಿಯರ ವಸತಿ ನಿಲಯ ಹೊಸ ಜೇವರ್ಗಿ ರಸ್ತೆಗೆ ಸ್ಥಳಾಂತರವಾಗಿನಿಂದ ಸರಿಯಾದ ಕೋಣೆಗಳಿಲ್ಲ, ಕೇವಲ ಆರು ಕೋಣೆಗಳಲ್ಲಿ 120 ವಿದ್ಯಾರ್ಥಿನಿಯರು ಇರಬೇಕು, ಕೇವಲ ಎರಡು ಶೌಚಾಲಯ, ಎರಡು ಸ್ನಾನದ ಕೋಣೆ, ಫ್ಯಾನಿನ ವ್ಯವಸ್ಥೆ ಇಲ್ಲ, ಸರಿಯಾದ ಕುಡಿಯುವ ನೀರು ಸಿಗುತ್ತಿಲ್ಲ. ಸರಿಯಾದ ಊಟದ ವ್ಯವಸ್ಥೆ ಇಲ್ಲ. ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಇಲ್ಲಿಯ ವಿದ್ಯಾರ್ಥಿನಿಯರು ಎದುರಿಸುತ್ತಿದ್ದರು ಇಲ್ಲಿನ ತಾಲೂಕು ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೇ. 25 ಕಮೀಷನ್: ಇಲ್ಲಿನ ವಿದ್ಯಾರ್ಥಿನಿಯರು ಹಲವಾರು ಬಾರಿ ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಸವಾಗಿದೆ. ಅದೇ ರೀತಿ ವಸತಿ ನಿಲಯದ ವಾರ್ಡ ಅವರನ್ನು ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುವರು ಮತ್ತು ನಿಮಗೆ ಬರುವ ಊಟದ ವೆಚ್ಚದ ಒಪ್ಪಂದದಲ್ಲಿ ಶೇ. 25ರಷ್ಟು ತೆಗೆದುಕೊಳ್ಳುತ್ತಾರೆ ಮತ್ತು ತಾಲೂಕು ಅಧಿಕಾರಿ, ಜಿಲ್ಲಾಧಿಕಾರಿಗಳಿಗೆ ಕೊಡಬೇಕು ಇದರಲ್ಲಿ ಏನೂ ಉಳಿಯುವುದಿಲ್ಲ. ನಾನು ಕೈಯಿಂದ ಹಾಕಿ ನಡೆಸಲು ಆಗುವುದಿಲ್ಲ.
ಇರುವುದರಲ್ಲಿ ಹೊಂದಾಣಿಕೆ ಮಾಡಿಕೊಂಡು ಇರಬೇಕು ಎನ್ನುವುದು ವಾರ್ಡನ್ ಮಾತು. ಆದರೆ, ಇಲ್ಲಿಯ ವಿದ್ಯಾರ್ಥಿನಿಯರು ನನಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನಮಗೆ ಕೊಡಿ ಎಂದು ಕೇಳಿದರೆ ಇಲ್ಲಿಯವರೆಗೆ ಯಾವ ಅಧಿಕಾರಿಗಳು ಸ್ಪಂದಿಸದೆ ಇರುವುದು ಆಶ್ಚರ್ಯವಾಗಿದೆ ಎಂದರು. ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಿ ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಭೀಮಾಶಂಕರ ಮಾಡಿಯಾಳ, ರಾಜೇಂದ್ರ ರಾಜವಾಳ, ಸಂಗೀತಾ, ಲಕ್ಷ್ಮೀ ಸೇರಿದಂತೆ ಹಲವಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.