ಅಂಬೇಡ್ಕರ್ಗೆ ಅವಮಾನ: ರಸ್ತೆ ತಡೆ
ಗುಲ್ಬರ್ಗ: ದುಷ್ಕರ್ಮಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಮತ್ತು ಅವಮಾನಕಾರಿ ಹೇಳಿಕೆಯನ್ನು ಅಂತರ್ಜಾಲದ ಫೇಸ್ಬುಕ್ನಲ್ಲಿ ಹಾಕಿ ಅವಮಾನಿಸಿದ ಕ್ರಮವನ್ನು ಖಂಡಿಸಿ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿ ಒಕ್ಕೂಟ ಗುರುವಾರ ಸಂಜೆ ಗುಲ್ಬರ್ಗದಲ್ಲಿ ರಸ್ತೆ ತಡೆ ಚಳವಳಿ ನಡೆಸಿತು.
ಕೂಡಲೇ ಡಾ. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಗುಲ್ಬರ್ಗ ವಿಶ್ವವಿದ್ಯಾಲಯದ ಎದುರಿನ ರಸ್ತೆಯಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು. ದೇಶವೇ ಒಪ್ಪಿಕೊಳ್ಳುವಂತಹ ಒಂದೇ ಜಾತಿಗೆ ಸೀಮಿತವಾಗದಂತಹ ಜಾತ್ಯತೀತ ನಾಯಕ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಕುರಿತು ಅಂತರ್ಜಾಲದ ಫೇಸ್ಬುಕ್ನಲ್ಲಿ ಅವಮಾನಕಾರಿ ಹೇಳಿಕೆ ನೀಡಿ ಸುದ್ದಿ ಹರಿಬಿಟ್ಟಿದ್ದು, ಖಂಡನೀಯ. ಆ ವ್ಯಕ್ತಿಯನ್ನು ಬಂಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಲಕ್ಷ್ಮೀಕಾಂತ ಸಿಂಗೆ ಘತ್ತರಗಾ, ಗುಂಡಪ್ಪ ಸಿಂಗೆ, ಗೌತಮ ಎಂ. ಕೆ, ಅನೀಲ್ ಟೆಂಗಳಿ, ಜಿತೇಂದ್ರ ಕಾಂಬಳೆ, ಶೇಖರ ಸಲಗರ ಸೇರಿದಂತೆ ಹಲವಾರು ವಿದ್ಯಾರ್ಥಿಗಳು, ಅಂಬೇಡ್ಕರ್ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.