ಇನ್ನೂ ಉದ್ಘಾಟನೆ ಭಾಗ್ಯ ಕಾಣದ ಸಾಮರ್ಥ್ಯ ಸೌಧ
ಕ.ಪ್ರ. ವಾರ್ತೆ ಯಾದಗಿರಿ ಮೇ 16
ಇಲ್ಲಿನ ತಾಲೂಕು ಪಂಚಾಯಿತಿ ಕಾರ್ಯಾಲಯದ ಪಕ್ಕ ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಾಮರ್ಥ್ಯಸೌಧ ಕಾಮಗಾರಿ ಮುಕ್ತಾಯವಾಗಿ 8 ತಿಂಗಳು ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ.
ತಾಲೂಕಿಗೆ ಸಂಬಂಧಪಟ್ಟಂತೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಂಘ ಸಂಸ್ಥೆಗಳಿಗೆ ತರಬೇತಿ, ಕಾರ್ಯಾಗಾರ ಮತ್ತು ಶಿಬಿರಗಳನ್ನು ನಡೆಸಲು ಅನುಕೂಲ.ವಾಗುವ ನಿಟ್ಟಿನಲ್ಲಿ ನಿರ್ಮಿಸಲಾಗಿದ್ದು, ಕಟ್ಟಡದ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಆದರೆ ಸಂಬಂಧಪಟ್ಟವರ ಇಚ್ಛಾಶಕ್ತಿ ಕೊರತೆಯಿಂದ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಈ ಸಾಮರ್ಥ್ಯಸೌಧದಲ್ಲಿ ಒಟ್ಟು 5 ಕೋಣೆಗಳಿದ್ದು, ಮುಂಭಾಗದಲ್ಲಿ ದೊಡ್ಡ ಸಭಾಂಗಣವಿದೆ. ಎಲ್ಲಾ ರೀತಿಯಿಂದಲೂ ಉತ್ತಮವಾಗಿ ನಿರ್ಮಾಣವಾಗಿದೆ.
ಉದ್ಘಾಟನೆಗೆ ಯಾಕೆ ಹಿಂದೇಟು?: ಸುಸಜ್ಜಿತ ಕಟ್ಟಡವಿದ್ದರೂ ತಾಪಂ ಕಚೇರಿ ಮುಂಭಾಗದ ಇಕ್ಕಟ್ಟಿನ ಸಭಾಂಗಣದಲ್ಲಿಯೇ ಸದ್ಯ ಅನೇಕ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ತಾಪಂ ಕಚೇರಿಯಲ್ಲಿ ಶೌಚಾಲಯವಿಲ್ಲದ ಕಾರಣ ತರಬೇತಿಗೆ ಬರುವ ಸಂಘ ಸಂಸ್ಥೆಗಳ ಕಾರ್ಯಕರ್ತರಿಗೆ ಸಮಸ್ಯೆಯಾಗುತ್ತಿದೆ. ಇದು ಗೊತ್ತಿದ್ದರೂ ನೂತನ ಕಟ್ಟಡವನ್ನು ಮುಕ್ತಗೊಳಿಸದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ರಾತ್ರಿಯಾದರೆ ಕಟ್ಟಡದಲ್ಲಿ ಪುಂಡರ ಕಾಟ ಹೆಚ್ಚಾಗುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಕಾವಲುಗಾರರನ್ನು ನೇಮಕ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಕಾಮಗಾರಿ ಬಿಲ್ ಬಾಕಿ: ಕಟ್ಟಡದ ಸುತ್ತಮುತ್ತ ಜಾಲಿ ಮರ ಬೆಳೆದಿದ್ದು, ಇದರಿಂದ ವಿಷಜಂತುಗಳ ಹಾವಳಿಯೂ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಯಾಕೆಂದು ಗೊತ್ತಿಲ್ಲ. ಕಟ್ಟಡ ಕಾಮಗಾರಿಯ ಬಿಲ್ ಬಾಕಿ ಇರುವುದರಿಂದ ಗುತ್ತಿಗೆದಾರರು ಇದನ್ನು ತಾಪಂ ಸುಪರ್ದಿಗೆ ಒಪ್ಪಿಸಿಲ್ಲ ಎಂದು ಹೇಳಲಾಗುತ್ತಿದೆ.
ನಿರ್ಮಾಣವಾಗಿ ಅನೇಕ ತಿಂಗಳುಗಳೇ ಗತಿಸಿದರೂ ಇನ್ನೂ ಉದ್ಘಾಟನೆ ಕಾಣದ ಕಟ್ಟಡಕ್ಕೆ ಶೀಘ್ರದಲ್ಲಿಯೇ ಕ್ರಮ ಕೈಗೊಂಡು ಇದಕ್ಕೆ ಮುಕ್ತಿ ಕಾಣಿಸುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಕಟ್ಟಡ ಕೊರತೆಯಿರುವ ಜಿಲ್ಲಾ ಕೇಂದ್ರದಲ್ಲಿ ಇದ್ದೂ ಅದನ್ನು ಬಳಸುತ್ತಿಲ್ಲ ಎಂದರೆ ಅದಕ್ಕೆ ಯಾರು ಹೊಣೆ ಎಂಬುದು ಜನರ ಪ್ರಶ್ನೆಯಾಗಿದೆ.