ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಪಿಎಂಸಿ ದಾಖಲೆ ವಹಿವಾಟು

Mainashree
Updated On : 17 May 2013, 11:37 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಮೇ 16
ಈ ಬಾರಿ ಬರದಿಂದ ಹಿಂಗಾರು ಬೆಳೆಗಳೆಲ್ಲ ಕೈಕೊಟ್ಟರೂ ಶೇಂಗಾ ಮಾತ್ರ ರೈತರ ಹಾಗೂ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಮಾನ ಕಾಪಾಡಿದೆ. ಎಪಿಎಂಸಿಯಿಂದ ಈ ಬಾರಿ ದಾಖಲೆಯ 3.95 ಕೋಟಿ ಆದಾಯ ಗಳಿಸಿದ್ದು, ಇದು ಕಳೆದ ಬಾರಿಗಿಂತ ಸುಮಾರು 41 ಲಕ್ಷ ಏರಿಕೆ ಕಂಡಿದೆ.
ಮಳೆಯ ಅಭಾವದಿಂದಾಗಿ ಕಳೆದ ಹಿಂಗಾರಿ ಬಳೆಗಳೆಲ್ಲವೂ ರೈತರಿಗೆ ಕೈಕೊಟ್ಟಿವೆ. ಆದರೂ ಇಲ್ಲಿಯ ಎಪಿಎಂಸಿಗೆ 2012- 13ನೇ ಸಾಲಿನಲ್ಲಿ ಆದಾಯಕ್ಕೆ ಹೊಡೆತ ಬಿದ್ದಿಲ್ಲ. ಗುರುಮಠಕಲ್, ಸೈದಾಪುರ ಉಪ ಮಾರುಕಟ್ಟೆಯನ್ನು ಹೊಂದಿರುವ ಯಾದಗಿರಿ ಎಪಿಎಂಸಿಗೆ ಬಂದ ಕೃಷಿ ಉತ್ಪನ್ನಗಳ ಮೇಲೆ ಶೇ. 1ರಷ್ಟು ಮಾರುಕಟ್ಟೆ ಶುಲ್ಕ ಹಾಗೂ ಶೇ. 0.50 ಆವರ್ತ ನಿಧಿ ಶುಲ್ಕ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಒಟ್ಟು ಶುಲ್ಕ 3,95,35,750 ಆಗಿದೆ. 2011- 12ನೇ ಸಾಲಿನಲ್ಲಿ ಎಪಿಎಂಸಿ ಆದಾಯ 3.44 ಕೋಟಿ ಆಗಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಯು 3.45 ಕೋಟಿ ಶುಲ್ಕ ಸಂಗ್ರಹಿಸುವ ಗುರಿ ಇಟ್ಟುಕೊಂಡಿತ್ತು. ಈಗ ಆ ಗುರಿ ಮೀರಿ ಸಾಧನೆಯಾಗಿದೆ. ಬರದಿಂದಾಗಿ ಎಲ್ಲಾ ಬೆಳೆಗಳೂ ಕೈಕೊಟ್ಟಿದ್ದರಿಂದ ಆದಾಯಕ್ಕೆ ಹೊಡೆತ ಬೀಳಬಹುದು ಎಂಬ ಆತಂಕ ಈಗ ದೂರವಾಗಿದೆ.
ದಾಖಲೆ ವಹಿವಾಟು: ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಈ ವಹಿವಾಟು ದಾಖಲೆ ನಿರ್ಮಿಸಿದೆ. 2009- 10ನೇ ಸಾಲಿನಲ್ಲಿ ಎಪಿಎಂಸಿಯ ಮಾರುಕಟ್ಟೆ ಶುಲ್ಕದಿಂದ ಬಂದ ಒಟ್ಟು ಆದಾಯ 2.05 ಕೋಟಿ ಆಗಿತ್ತು. 2010- 11ನೇ ಸಾಲಿನಲ್ಲಿ ಇದು 3,06,73,368 ಕೋಟಿಗೆ ತಲುಪಿತ್ತು. 2011- 12ನೇ ಸಾಲಿನಲ್ಲಿ 3.44 ಕೋಟಿ ಶುಲ್ಕ ಸಂಗ್ರಹಿಸಲಾಗಿತ್ತು.
ಈ ವರ್ಷದ ಬರದ ಮಧ್ಯೆಯೂ ಗುರಿ ಮೀರಿ ಸಾಧನೆಯಾಗಿದ್ದು, 3.95 ಕೋಟಿ ಆದಾಯ ಬಂದಿದೆ. ಅಲ್ಲದೇ ವಹಿವಾಟು ಕೂಡ ದಾಖಲೆಯಾಗಿದೆ. 287 ಕೋಟಿ ಮೌಲ್ಯದ 6.57 ಲಕ್ಷ ಚೀಲ ಶೇಂಗಾ ಮಾರಾಟವಾಗಿದ್ದರೆ, 120 ಕೋಟಿ ಮೌಲ್ಯದ ಹೆಸರು ಹಾಗೂ 70 ಕೋಟಿ ಮೌಲ್ಯದ ತೊಗರಿ ಮಾರಾಟವಾಗಿದೆ. 6.3 ಕೋಟಿ ಮೌಲ್ಯದ ಕಡಲೆ, 2.16 ಕೋಟಿ ಮೌಲ್ಯದ ಸೂರ್ಯಕಾಂತಿ ಮಾರಾಟವಾಗಿದೆ.
ಶೇಂಗಾ, ಹೆಸರು ಆದಾಯಕ್ಕೆ ಮೂಲ: ಈ ಬಾರಿ ತೊಗರಿ, ಕಡಲೆ, ಸೂರ್ಯಕಾಂತಿ ಹೀಗೆ ಈ ಭಾಗದಲ್ಲಿ ಬೆಳೆಯುತ್ತಿದ್ದ ಹಾಗೂ ಎಪಿಎಂಸಿಗೆ ಬರುತ್ತಿದ್ದ ಎಲ್ಲ ಉತ್ಪನ್ನಗಳೂ ಗಣನೀಯವಾಗಿ ಕುಸಿದಿವೆ. ಆದರೆ ಬೇಸಿಗೆ ಹಂಗಾಮಿನಲ್ಲಿ ಬರದ ಮಧ್ಯೆಯೂ ಶೇಂಗಾ ಮತ್ತು ಹೆಸರು ಉತ್ತಮ ಇಳುವರಿ ಬಂದಿದೆ. 2010- 11ನೇ ಸಾಲಿನಲ್ಲಿ ಎಪಿಎಂಸಿಗೆ 3,78,739 ಚೀಲ ಶೇಂಗಾ ಆವಕವಾಗಿತ್ತು. 2011- 12ನೇ ಸಾಲಿನಲ್ಲಿ 4,36,555 ಚೀಲ ಶೇಂಗಾ ಆವಕವಾಗಿತ್ತು. ಆದರೆ 2012- 13ರಲ್ಲಿ 6,57,824 ಚೀಲ ಶೇಂಗಾ ಮಾರಾಟವಾಗಿದೆ. ಹಿಂದಿನ ವರ್ಷಕ್ಕಿಂತ ಸುಮಾರು 2 ಲಕ್ಷ ಚೀಲ ಶೇಂಗಾ ಹೆಚ್ಚು ಉತ್ಪನ್ನವಾಗಿದೆ. ಇದರಿಂದ ಎಪಿಎಂಸಿ ಆದಾಯದಲ್ಲಿ ಶೇಂಗಾದ ಪಾತ್ರ ಗಣನೀಯವಾಗಿದೆ. ಅದೇ ರೀತಿ 2.52 ಲಕ್ಷ ಚೀಲ ಹೆಸರು ಮಾರಟವಾಗಿದೆ. ತೊಗರಿ 2 ಲಕ್ಷ, ಸೂರ್ಯಕಾಂತಿ 6,491 ಚೀಲ ಮಾರಾಟವಾಗಿದೆ.
ಕೈಕೊಟ್ಟ ಇತರ ಬೆಳೆಗಳು..: ಈ ಭಾಗದ ಪ್ರಮುಖ ಬೆಳೆಯಾದ ತೊಗರಿ ಉತ್ಪಾದನೆ ಈ ಸಲ ಗಣನೀಯವಾಗಿ ಕುಸಿದಿದೆ. ಕಳೆದ ಸಲ 3,32,170 ಕ್ವಿಂಟಲ್ ತೊಗರಿ ಆವಕವಾಗಿತ್ತು. ಆದರೆ ಈ ಬಾರಿ 2,00,643  ಕ್ವಿಂಟಲ್ ಆವಕವಾಗಿದ್ದು, ಕಳೆದ ಬಾರಿಗಿಂತ 1.32 ಲಕ್ಷ ಕ್ವಿಂಟಲ್ ಕಡಿಮೆಯಾಗಿದೆ. ಕಡಲೆ ಸುಮಾರು 22 ಸಾವಿರ ಕ್ವಿಂಟಲ್ ಬಂದಿದೆ. ಈ ವರ್ಷ ಸೂರ್ಯಕಾಂತಿ 6,491 ಕ್ವಿಂಟಲ್ ಮಾರಾಟವಾಗಿದ್ದರೆ, ಕಳೆದ ವರ್ಷ 19,078 ಕ್ವಿಂಟಲ್ ಆಗಿತ್ತು. ಅಲಸಂದಿ ಕೇವಲ 120 ಕ್ವಿಂಟಲ್ ಹಾಗೂ ಉದ್ದು 170 ಕ್ವಿಂಟಲ್ ಆವಕವಾಗಿದೆ.
ಮೂಲ ಸೌಲಭ್ಯವಿಲ್ಲ: ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಯಾದಗಿರಿ ಎಪಿಎಂಸಿ ಎಂಬ ಮಾತಿದೆ. ಇದಕ್ಕೆ ಇಲ್ಲಿಯ ವ್ಯಾಪಾರಸ್ಥರು ಕಾರಣ. ಆದ್ದರಿಂದ ಇತರ ತಾಲೂಕುಗಳ ರೈತರೂ ಯಾದಗಿರಿ ಎಪಿಎಂಸಿಗೆ ಬಂದು ಉತ್ಪನ್ನ ಮಾರಾಟ ಮಾಡುತ್ತಾರೆ. ಆದರೆ ಪ್ರತಿ ವರ್ಷ ಗುರಿ ಮೀರಿ ಸಾಧನೆ ಮಾಡಿ ಕೋಟ್ಯಂತರ ರು. ಶುಲ್ಕ ಸಂಗ್ರಹ ಮಾಡುತ್ತಿದ್ದರೂ ಅದನ್ನು ಸರಿಯಾಗಿ ವಿನಿಯೋಗಿಸುತ್ತಿಲ್ಲ ಎಂಬ ಆರೋಪವಿದೆ. ಸೌಲಭ್ಯ ಕಲ್ಪಿಸಲು ಗಮನ ನೀಡುತ್ತಿಲ್ಲ. ಕುಡಿವ ನೀರು, ಜಾನುವಾರು ಮಾರಾಟದ ಸ್ಥಳದಲ್ಲಿ ತಂಪಿನ ವ್ಯವಸ್ಥೆ, ರಸ್ತೆ ಇತ್ಯಾದಿ ಸೌಲಭ್ಯ ಕಲ್ಪಿಸಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕಿದೆ.

ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement