ಛೀ... ಥೂ... ಗಲೀಜು... ಸಾರ್ವಜನಿಕರ ಆಕ್ರೋಶ
ಯಾದಗಿರಿ: ನಗರದ ವಾರ್ಡ್ ನಂ 8ರ ಜೈನ್‌ವಾಡಿ ಬಡಾವಣೆಯಲ್ಲಿ ಒಳಚರಂಡಿಯ ನೀರು ರಸ್ತೆ ಮೇಲೆ ಹರಿದು ದುರ್ವಾಸನೆ ಬರುತ್ತಿದೆ. ಮೂಗು ಮಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಚರಂಡಿಯ ನೀರು ರಸ್ತೆ ಮೇಲೆ ಹರಿದ ಪರಿಣಾಮ ವಿಪರೀತ ಸೊಳ್ಳೆಗಳ ಕಾಟವೂ ಹೆಚ್ಚಿದೆ. ಈ ಮಾರ್ಗದ ಮೂಲಕ ಹಾದು ಹೋಗಬೇಕಾದರೆ ಗಬ್ಬು ವಾಸನೆ ಬೀರುತ್ತಿದೆ. ಹಲವು ಸಾಂಕ್ರಾಮಿಕ ರೋಗಗಳ ಆಹ್ವಾನ ಕೇಂದ್ರವಾಗಿ ಮಾರ್ಪಟ್ಟಿದೆ.
ಚುನಾಯಿತ ಪ್ರತಿನಿಧಿ ಗದ್ದೆ ಮೇಲೆ ಈ ಕಡೆ ತಲೆ ಹಾಕಿಯೂ ನೋಡುತ್ತಿಲ್ಲ. ತನ್ನಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಳಚರಂಡಿ ನೀರು ತ್ಯಾಜ್ಯ ವಸ್ತುಗಳು ಸಂಗ್ರಹವಾಗಿ ಸರಗವಾಗಿ ಹರಿಯಲು ವ್ಯವಸ್ಥೆ ಇಲ್ಲದಂತಾಗಿದೆ. ಅದಕ್ಕಾಗಿ ರಸ್ತೆ ಮಧ್ಯೆ ಸಾಕಷ್ಟು ಪ್ರಮಾಣದಲ್ಲಿ ಕೊಳಚೆ ನೀರು ಹರಿಯುತ್ತಿದೆ. ಈ ಪ್ರದೇಶದಲ್ಲಿ ಪಾದಚಾರಿಗಳು ಓಡಾಡುವುದು ಬಲು ಕಠಿಣವಾಗಿದೆ.
ಆರೋಗ್ಯದ ದುಷ್ಪರಿಣಾಮ: ಬಡಾವಣೆ ಸುತ್ತಲೂ ಸಾರ್ವಜನಿಕರು ಸಾಕಷ್ಟು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಕಸ ಸಂಗ್ರಹದ ತೊಟ್ಟಿಯಿಲ್ಲ. ಜನರು ಬಯಲು ಪ್ರದೇಶದಲ್ಲಿಯೇ ಕಸ ಬಿಸಾಡುತ್ತಾರೆ. ಇದರಿಂದ ದುರ್ವಾಸನೆ ಕುಡಿದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ. ಕಲುಷಿತ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪಾದನೆಗೆ ಹೇಳಿ ಮಾಡಿಸಿದಂತಹ ಜಾಗವಾಗಿದೆ. ನಗರಸಭೆ ಅಧಿಕಾರಿಗಳು ಇತ್ತ ಗಮನಹರಸಿ ಬಡಾವಣೆ ಸಮಸ್ಯೆ ಪರಿಹರಿಸಬೇಕೆಂಬುದು ನಿವಾಸಿಗಳ ಆಗ್ರಹವಾಗಿದೆ.