ನಾಲ್ಕು ಕಾರುಗಳ ಗಾಜಿಗೆ ಕಲ್ಲು: ಆತಂಕದಲ್ಲಿ ಜನತೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 16
ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ 4 ಕಾರುಗಳಿಗೆ ಕಿಡಿಗೇಡಿಗಳು ಕಲ್ಲು ಹೊಡೆದು ಕಾರುಗಳ ಗ್ಲಾಸ್ಗಳನ್ನು ಒಡೆದು ಹಾಕಿದ ಘಟನೆ ನಗರದ ಬಸವೇಶ್ವರ ಕಾಲೋನಿಯ ಹೊಸ ಬಡಾವಣೆಯ ಕೆಎನ್ಝಡ್ ಫಂಕ್ಷನ್ ಹಾಲ್ ಹತ್ತಿರ ಗುರುವಾರ ಬೆಳಗಿನ ಜಾವ ನಡೆದಿದೆ.
ಹೆಸರಾಂತ ಕಂಪನಿಯ ಸ್ಯಾಂಟ್ರೋ, ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳಿಗೆ ಕಲ್ಲು ಹೊಡೆದು ಕಾರಿನ ಗ್ಲಾಸುಗಳನ್ನು ಒಡೆದು ಹಾಕಲಾಗಿದ್ದು, ಎರಡು ಕಾರುಗಳ ಮುಂದಿನ ಗ್ಲಾಸುಗಳನ್ನು ಮತ್ತು ಇನ್ನೆರೆಡು ಕಾರುಗಳ ಹಿಂದಿನ ಗ್ಲಾಸುಗಳನ್ನು ಒಡೆದು ಪುಡಿ ಪುಡಿ ಮಾಡಲಾಗಿದೆ.
ನಗರದಲ್ಲಿ ಈ ರೀತಿ ನಡೆಯುತ್ತಿರುವುದು ಮೂರನೇ ಘಟನೆ ಇದಾಗಿದ್ದು, ಈ ಹಿಂದೆ ಬಸವೇಶ್ವರ ಕಾಲೋನಿ, ಖೂಬಾ ಪ್ಲಾಟ್ ಮತ್ತು ವೆಂಕಟೇಶ್ವರ ನಗರದಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರುಗಳಿಗೆ ಕಲ್ಲು ಹೊಡೆದು ಕಾರಿನ ಗ್ಲಾಸ್ಗಳನ್ನು ಪುಡಿ ಪುಡಿ ಮಾಡಲಾಗಿತ್ತು.
ಇಂತಹ ಘಟನೆಗಳು ನಗರದಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಈ ರೀತಿಯ ದುಷ್ಕೃತ್ಯವೆಸಗುತ್ತಿರುವವರು ಯಾರು ಮತ್ತು ಕಾರುಗಳನ್ನೇ ಗುರಿಯಾಗಿಟ್ಟುಕೊಂಡು ಅವರು ಯಾಕೆ ಈ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂಬುದು ಪೊಲೀಸರಿಗೆ ತಲೆ ನೋವಾಗಿದೆ.
ಈ ಹಿಂದೆ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಮತ್ತು ಇದೀಗ ನಡೆದ ಪ್ರಕರಣ ಯಾರಿಂದ ನಡೆಯಿತು ಎಂಬುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಈ ಸುದ್ದಿ ತಿಳಿದ ತಕ್ಷಣ ಎಂ.ಬಿ. ನಗರ ಪಿಎಸ್ಐ ಶ್ರೀಮಂತ ಇಲ್ಲಾಳ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.