ನೀರು ಬಿಡಲು ಆಗ್ರಹ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 16
ಕಂದಳ್ಳಿ ಬ್ಯಾರೇಜ್ನಿಂದ ನೀರು ಸರಬರಾಜು ಆಗುವುದು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಶಹಾಪುರ ತಾಲೂಕಿನ ವಡಗೇರಾ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕುಡಿವ ನೀರಿಗಾಗಿ ಮಹಿಳೆಯರು ದೂರದಿಂದ ನೀರನ್ನು ತರುವುದು ಸಾಮಾನ್ಯವಾಗಿದೆ. ಆದ್ದರಿಂದ ಬ್ಯಾರೇಜಿನಿಂದ ನೀರು ಬಿಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಡು ಬೇಸಿಗೆಯಲ್ಲಿ ಕುಡಿವ ನೀರು ತರಲು ಕೆಲವರು ಸೈಕಲ್ ಬಳಕೆ ಮಾಡಿಕೊಂಡರೆ ಇನ್ನೂ ಕೆಲವರು ತಮ್ಮ ದ್ವಿಚಕ್ರ ವಾಹನಗಳಲ್ಲಿ, ಮತ್ತೆ ಕೆಲವರು ಟಂಟಂಗಳಲ್ಲಿ ನೀರನ್ನು ತರುತ್ತಿದ್ದಾರೆ. ಹೋಟೆಲ್ಗಳಲ್ಲಿ ಏನಾದರೂ ತಿಂಡಿ ತೆಗೆದುಕೊಂಡರೆ ಮಾತ್ರ ಕುಡಿಯಲು ನೀರು ಕೊಡುತ್ತಾರೆ.
“ಕುಡಿವ ನೀರು ಅಷ್ಟು ತುಟ್ಟಿಯಾಗಿದೆ. ನಾವು ನೂರಾರು ರುಪಾಯಿ ಕೊಟ್ಟ ದೂರದಿಂದ ನೀರನ್ನು ತರುತ್ತೇವೆ. ನಮ್ಮ ಗ್ರಾಹಕರಿಗೆ ಕುಡಿಯಲು ನೀರು ಕೊಡುವುದೇ ಕಷ್ಟ, ಇನ್ನು ಸಾರ್ವಜನಿಕರಿಗೆ ಎಲ್ಲಿಂದ ನೀರು ಕೊಡಬೇಕುಎಂದು ಹೋಟೆಲ್ ಮಾಲೀಕರು ಪ್ರಶ್ನೆ ಮಾಡುತ್ತಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಕುಡಿವ ನೀರನ ಸಮಸ್ಯೆ ಗ್ರಾಮದಲ್ಲಿ ಉಲ್ಬಣಗೊಂಡಿದ್ದರೂ ಯಾವೊಬ್ಬ ಅಧಿಕಾರಿ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಕರವೇ ಗ್ರಾಮೀಣ ಘಟಕದ ಅಧ್ಯಕ್ಷ ಶರಣು ಇಟಗಿ ಆರೋಪಿಸಿದ್ದಾರೆ. ಗ್ರಾಮದಲ್ಲಿ ಇರುವ ಬೋರ್ವೆಲ್ಗಳಲ್ಲಿ ಲವಣಾಂಶವಿರುವ ನೀರು ಬರುತ್ತಿದೆ. ಇದು ಕುಡಿಯಲು ಬಳಸುತ್ತಿಲ್ಲ. ಇದರಿಂದಾಗಿ ಕೊಳವೆಬಾವಿಯ ನೀರು ಕೇವಲ ಬಟ್ಟೆ ಒಗೆಯಲು ಮಾತ್ರ ಬಳಸುತ್ತಾರೆ.
ಕುಡಿಯಲು ನೀರು ಬೇಕಾದರೆ ದೂರದ ಸ್ಥಳಗಳಿಂದ ನೀರನ್ನು ತರಬೇಕಾಗುತ್ತದೆ. ಇಲ್ಲವೇ ಗ್ರಾಮದ ಅನತಿ ದೂರದಲ್ಲಿರುವ ಸಿಹಿ ನೀರಿನ ಬಾವಿಯಿಂದ ನೀರನ್ನು ಸೇದಿ ತರಬೇಕಾಗಿದೆ. ಈ ಉರಿ ಬೇಸಿಗೆಯಲ್ಲಿ ಮಹಿಳೆಯರು ಬಾವಿಯಿಂದ ನೀರನ್ನು ಸೇದಿ ಹೈರಾಣಾಗುತ್ತಿದ್ದಾರೆ. ಆದ್ದರಿಂದ ಆದಷ್ಟು ಬೇಗ ಕಂದಳ್ಳಿ ಬ್ಯಾರೇಜ್ನಿಂದ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.