ಮಹಾಗಾಂವ ಬಳಿ ಟಂಟಂಗೆ ಟ್ರಕ್ ಡಿಕ್ಕಿ; ಯುವತಿ ಸಾವು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 16
ಟಂಟಂಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಹಾಗಾಂವ- ಹರಕಂಚಿ ಮಾರ್ಗ ಮಧ್ಯೆದಲ್ಲಿ ಬುಧವಾರ ರಾತ್ರಿ ನಡೆದಿದೆ.
ಹರಕಂಚಿ ಗ್ರಾಮದ ಸರೋಜಾ ತಂದೆ ಗುಂಡಪ್ಪ ಕೋತಿ(19) ಎಂಬ ಮೃತ ಯುವತಿ. ಮಹಾಗಾಂವ ಕ್ರಾಸ್‌ನಿಂದ ಹರಕಂಚಿಗೆ ಟಂಟಂನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿ ಟ್ರಕ್ ಡಿಕ್ಕಿ ಹೊಡೆದು ಯುವತಿ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಘಟನಾ ಸ್ಥಳಕ್ಕೆ ಸಿಪಿಐ ಸತೀಶ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ, ಜೀವ ಬೆದರಿಕೆ
ಗುಲ್ಬರ್ಗ: ನಾಲ್ಕೈದು ಜನ ಸೇರಿ ಅತ್ತಿಗೆ ಮತ್ತು ಮೈದುನನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಸಿಐಬಿ ಕಾಲೋನಿಯಲ್ಲಿ ನಡೆದಿದೆ. ಶ್ರೀದೇವಿ ಗಂಡ ಪ್ರಶಾಂತ ಆಲೂರಕರ್ ಮತ್ತು ಶ್ರೀದೇವಿ ಅವರ ಮೈದುನ ಹಲ್ಲೆಗೊಂಡವರು. ಸಿಐಬಿ ಕಾಲೋನಿಯಲ್ಲಿ ವಾಸವಾಗಿರುವ ಶ್ರೀದೇವಿ ಗಂಡ ಖಾಸಗಿ ಬಸ್ಸಿನ ನಿರ್ವಾಹಕನಾಗಿದ್ದು, ಅವರು ಎರಡು ದಿನಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಈ ಸಂದರ್ಭವನ್ನು ದುರುಪಯೋಗಿಸಿಕೊಳ್ಳಲು ಪಕ್ಕದ ಮನೆಗೆ ಬಾಡಿಗೆಗೆ ಬಂದಿರುವ ಉತ್ತರ ಪ್ರದೇಶದ ಮೂಲದ ನಾಲ್ಕೈದು ಜನರು ಶ್ರೀದೇವಿ ಮನೆಗೆ ಹೊರಗೆ ಬಟ್ಟೆ ತೊಳೆಯಲು ಮತ್ತು ಹೊರಗಡೆ ಹೋಗುವಾಗ ಚುಡಾಯಿಸುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಶ್ರೀದೇವಿ ಮೈದುನನಿಗೆ ಹೇಳಿದಾಗ ಆತ ಚುಡಾಯಿಸಬೇಡಿ ಎಂದು ಎಚ್ಚರಿಸಿ ಬಂದಿದ್ದಾನೆ. ಕಳೆದ ಮಂಗಳವಾರ ರಾತ್ರಿ 8.30ರ ಸುಮಾರಿಗೆ ರಾಜು, ಸಾಬು, ವೈಯುಮ ಹಾಗೂ ಇತರರು ಕಾರಿಯಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದು ಶ್ರೀದೇವಿ ಮತ್ತು ಆಕೆಯ ಮೈದುನನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ. ಈ ಕುರಿತು ಶ್ರೀದೇವಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದ್ವಿಚಕ್ರ ವಾಹನ ಕಳವು
ಗುಲ್ಬರ್ಗ: ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಶ್ರೀನಿವಾಸ ಬುಕ್ ಸ್ಟಾಲ್ ಹತ್ತಿರ ನಿಲ್ಲಿಸಿದ ದ್ವಿಚಕ್ರ ವಾಹನ ಕಳವಾಗಿದೆ. ನಗರದ ಎನ್‌ಜಿಒ ಕಾಲೋನಿಯ ನಿವಾಸಿಯಾಗಿರುವ ಮದನ ತಂದೆ ಬಂಡೇರಾವ ಕುಲಕರ್ಣಿ ಎಂಬುವರು ವಾಹನ ಕಳ್ಳತನ ಮಾಡಲಾಗಿದೆ. ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.