'ಕತ್ತಲೆ ಕಳೆಯಲು ಸೂರ್ಯ, ಬದುಕು ಬೆಳಗಲು ಗುರು ಬೇಕು'
ಕನ್ನಡಪ್ರಭ ವಾರ್ತೆ ಶಹಾಪುರ ಮೇ 17
ಬಾಳಿನ ಭಾಗ್ಯೋದಯಕ್ಕೆ ಧರ್ಮ ಪರಿಪಾಲನೆ ಅಗತ್ಯ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಧರ್ಮಪ್ರಜ್ಞೆ ಅವಶ್ಯ. ಜಗತ್ತಿನ ಕತ್ತಲೆ ಕಳೆಯಲು ಸೂರ್ಯ ಎಷ್ಟು ಅಗತ್ಯವೋ ಅದೇ ರೀತಿ ಮಾನವನ ಬದುಕು ಬೆಳಗಲು ಗುರುವಿನ ಮಾರ್ಗದರ್ಶನದ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ತಾಲೂಕಿನ ದೊಡ್ಡಸಗರ ಗ್ರಾಮದ ನಾಗಠಾಣ ಹಿರೇಮಠದ ಶ್ರೀಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅನ್ಯ ಧರ್ಮ, ಸಂಸ್ಕೃತಿಗಳ ದಬ್ಬಾಳಿಕೆ ನಡೆಯುತ್ತಿರುವುದರಿಂದ ನಮ್ಮ ಆದರ್ಶ ಸಂಸ್ಕೃತಿ ಕಲುಷಿತಗೊಳ್ಳುತ್ತಿದೆ. ವೀರಶೈವ ಧರ್ಮ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಿದೆ. ಜಗದ್ಗುರು ರೇಣುಕಾಚಾರ್ಯರು ಅಹಿಂಸಾವಾದಿ ಧ್ಯಾನ ಪರ್ಯಂತರವಾದ ದಶ ಧರ್ಮಸೂತ್ರಗಳನ್ನು ಬೋಧಿಸಿ ಹರಿಸಿದ್ದಾರೆ. ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳು ಈ ಧರ್ಮದ ಭದ್ರ ಬುನಾದಿಯ ತತ್ವಗಳು ಎಂದು ಹೇಳಿದರು.
ಹಾರೈಕೆ: ಸಗರದ ನಾಗಠಾಣ ಹಿರೇಮಠ ಬಾಳೆಹೂನ್ನೂರಿನ ರಂಭಾಪುರಿ ಪೀಠದ ಶಾಖಾಮಠವಾಗಿರುತ್ತದೆ. ನೂತನ ಶ್ರೀಗಳು ಹಿರಿಯ ಮಹಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಸದಿಚ್ಛೆಯಂತೆ ಮಠದ ಪ್ರಗತಿ ಮತ್ತು ಶಿಷ್ಯ ಸದ್ಭಕ್ತರ ಕಲ್ಯಾಣವನ್ನು ಉಂಟು ಮಾಡಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ದೋರನಹಳ್ಳಿ ವೀರಮಹಾಂತ ಶಿವಾಚಾರ್ಯ, ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಸಗರದ ಒಕ್ಕಲಿಗೇರ ಹಿರೇಮಠದ ಮರಳ ಮಹಾಂತ ಶಿವಾಚಾರ್ಯರು, ತಡವಲಗಾ ರಾಚೋಟೇಶ್ವರ ಶಿವಾಚಾರ್ಯರು, ಮದ್ರಕಿ ಶೀಲವಂತ ಶಿವಾಚಾರ್ಯರು, ಅಚಲೇರಿ ಶಿವಮೂರ್ತಿ ಶಿವಾಚಾರ್ಯರು, ಚರಬಸವೇಶ್ವರ ಗದ್ದುಗೆಯ ಬಸಯ್ಯ ಶರಣರು, ಸಗರ ಅಕ್ಕಮಹಾದೇವಿ ಮಠದ ಶರಣಮ್ಮ ತಾಯಿ, ಕೆಂಭಾವಿ ಚನ್ನಬಸವ ಶಿವಾಚಾರ್ಯರು, ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ನೂತನ ಶ್ರೀಗಳಾದ ಸೋಮೇಶ್ವರ ಶಿವಾಚಾರ್ಯರು ಇದ್ದರು.