ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜನ ಶಾಪ ಹಾಕ್ತಾರೆ.. ಹುಷಾರು!

Lingaraj Badiger
Updated On : 18 May 2013, 11:57 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಮೇ 17
ಜಿಲ್ಲೆಯ ಅನೇಕ ಕಡೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಇರುವ ಬಗ್ಗೆ ಮಾಧ್ಯಮಗಳಲ್ಲಿ ನಿತ್ಯವೂ ವರದಿಯಾಗುತ್ತಿದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಇದ್ದಲ್ಲಿ ಪರಿಹರಿಸಬೇಕು. ಕುಡಿಯಲು ನೀರು ಕೊಡದಿದ್ದರೆ ಜನ ನಿಮಗೆ ಶಾಪ ಹಾಕುತ್ತಾರೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅಧಿಕಾರಿಗಳಿಗೆ ಎಚ್ಚರಿಕೆಯ ರೀತಿಯಲ್ಲಿ ಸಲಹೆ ನೀಡಿದರು.
  ಜಿಲ್ಲಾಧಿಕಾರಿ ಕಚೇರಿ ಸಭಾ ಭವನದಲ್ಲಿ ಶುಕ್ರವಾರ ಕುಡಿವ ನೀರಿನ ಕಾಮಗಾರಿ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿವಿಧ ಇಲಾಖೆ ಅಧಿಕಾರಿಗಳಿಗೆ ನಿಧಾನವಾಗಿಯೇ ಕ್ಲಾಸ್ ತೆಗೆದುಕೊಂಡರು.
  ಜಿಲ್ಲೆಯಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆಯಿದೆ ಎಂಬುದರ ಸಂಪೂರ್ಣ ಮಾಹಿತಿ ಪಡೆದರು. ಶಹಾಪುರ ತಾಲೂಕಿನ ವಡಗೇರಾದಲ್ಲಿ ನೀರಿನ ಸಮಸ್ಯೆಯಿದೆ ಎಂದು ಇಂದಿನ ಪತ್ರಿಕೆಯಲ್ಲಿ ವರದಿಯಾಗಿದೆ. ಗುರುವಾರದ 'ಕನ್ನಡಪ್ರಭ' ಪತ್ರಿಕೆಯಲ್ಲಿ ಕೊಂಗಂಡಿಯಲ್ಲಿ ಸಮಸ್ಯೆ ತೀವ್ರಗೊಂಡಿರುವ ಬಗ್ಗೆ ಪ್ರಕಟವಾಗಿದೆ. ಹೀಗೆ ನಿತ್ಯವೂ ನೀರಿನ ಸಮಸ್ಯೆ ಬಗ್ಗೆ ವರದಿ ಬರುತ್ತಲೇ ಇವೆ. ಆದರೆ ಅಧಿಕಾರಿಗಳು ಆ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ.
ಕೂತಲ್ಲೇ ಕತೆ ಹೇಳ್ಬೇಡಿ..: ಮಾಧ್ಯಮಗಳಿಗೂ ಜವಾಬ್ದಾರಿ ಇರುವುದರಿಂದ ಅವರು ಮಾಡುವ ವರದಿ ಸುಳ್ಳಾಗಲು ಸಾಧ್ಯವಿಲ್ಲ. ಸ್ಥಳಕ್ಕೆ ಹೋಗಿ ವಾಸ್ತವಾಂಶ ಅರಿತೇ ವರದಿ ಮಾಡುತ್ತಾರೆ. ಆದರೆ ಅಧಿಕಾರಿಗಳು ಕುಳಿತಲ್ಲೇ ಮಾಹಿತಿ ಪಡೆದು ಸಮಸ್ಯೆ ಏನಿಲ್ಲ ಎಂದು ಹೇಳುತ್ತೀರಿ, ಇದು ಸರಿಯಲ್ಲ. ಮಾಧ್ಯಮಗಳಲ್ಲಿ ಬರುವ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಸ್ಯೆ ಪರಿಹರಿಸಿ ಸ್ಪಷ್ಟೀಕರಣ ಕೊಡಬೇಕು. ಇಂದೇ ಆ ಗ್ರಾಮಗಳಿಗೆ ಹೋಗಬೇಕೆಂದು ತಾಕೀತು ಮಾಡಿದರು.
 ಪ್ರತಿಯೊಬ್ಬ ಅಧಿಕಾರಿಯೂ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಬೇಕು. ಅಲ್ಲಿ ಜನರು ನೀರಿಗಾಗಿ ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಎಂಬುದನ್ನು ಅರಿಯಬೇಕು. ಸಮಸ್ಯೆಗೆ ತುರ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ನಾವು ಪೂರೈಸುವ ನೀರು ಹೇಗಿದೆ ಎಂಬುದನ್ನು ಪರಿಶೀಲಿಸಬೇಕು. ಅಧಿಕಾರಿಗಳು ಗ್ರಾಮಸ್ಥರು ಕುಡಿಯುವ ನೀರನ್ನು ಕುಡಿದು ಬರಬೇಕು. ಹೀಗಾದಾಗ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದರು.
ಅನುದಾನ ಸಾಕಷ್ಟಿದೆ: ಕುಡಿವ ನೀರಿನ ತುರ್ತು ಕಾಮಗಾರಿಗೆ ಹಣಕಾಸಿನ ತೊಂದರೆಯಿಲ್ಲ. ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ತಲಾ 75 ಲಕ್ಷ ನೀಡಲಾಗಿದೆ. ಜಿಪಂ ಬಳಿ ಇನ್ನೂ 11 ಲಕ್ಷ ಅನುದಾನ ಲಭ್ಯವಿದೆ. ಸಮಸ್ಯೆ ಇರುವ ಗ್ರಾಮಗಳನ್ನು ಬಿಟ್ಟು ನೀವು ಕುಳಿತಲ್ಲೇ ಕ್ರಿಯಾಯೋಜನೆ ಸಿದ್ಧಪಡಿಸುತ್ತೀರಿ. ಈಗ ಸಮಸ್ಯೆ ಎದುರಾಗಿರುವ ಗ್ರಾಮಗಳನ್ನು ಇದಕ್ಕೆ ಸೇರಿಸಿ, ತುರ್ತಾಗಿ ಜನರಿಗೆ ನೀರು ಪೂರೈಸುವ ಕೆಲಸವಾಗಬೇಕು. ಎಲ್ಲರೂ ಸಾಂಘಿಕವಾಗಿ ಈ ಕಾರ್ಯ ಮಾಡಿದಾಗ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಜಮಾದಾರ ಹೇಳಿದರು.
ಬಿತ್ತನೆ ಬೀಜ ಕೊರತೆ: ಕೃಷಿ ಇಲಾಖೆ ಮುಂಗಾರು ಹಂಗಾಮಿಗಾಗಿ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಕೋರಿದರು. ಆಗ ಜಂಟಿ ಕೃಷಿ ನಿರ್ದೇಶಕ ಎಂ.ಎಚ್. ಬಂತನಾಳ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 2.60 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ವಾಡಿಕೆ ಮಳೆ ಪ್ರಮಾಣ ಕಡಿಮೆಯಾಗಿದ್ದು, ಜೂನ್ ವೇಳೆಗೆ ಮುಂಗಾರು ಆರಂಭವಾಗುವ ಸೂಚನೆಯಿದೆ.
  ಸುಮಾರು 21 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಆದರೆ ಕೇವಲ 25 ಕ್ವಿಂಟಲ್ ಬಿತ್ತನೆ ಹೆಸರು ಲಭ್ಯವಿದೆ. ಕನಿಷ್ಠ 1 ಸಾವಿರ ಕ್ವಿಂಟಲ್ ಬಿತ್ತನೆ ಹೆಸರು ಬೇಡಿಕೆಯಿದೆ. ಮಳೆ ವಿಳಂಬವಾದರೆ ರೈತರು ಹೆಸರು ಬಿತ್ತನೆ ಕೈಬಿಡುವುದರಿಂದ ಪೂರೈಕೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂಬ ಸತ್ಯವನ್ನು ಬಿಚ್ಚಿಟ್ಟರು.
ದಾಸ್ತಾನು ಮಾಡಿಕೊಳ್ಳಿ: ಆಗ ಜಿಲ್ಲಾಧಿಕಾರಿ ಮಾತನಾಡಿ, ಮುಂಗಾರು ಪ್ರವೇಶಕ್ಕೂ ಮುನ್ನ ಬಿತ್ತನೆ ಬೀಜ ದಾಸ್ತಾನು ಇಟ್ಟುಕೊಳ್ಳಬೇಕು. ಮಳೆ ಬಾರದಿದ್ದರೆ.. ಎಂದು ನಾವು ಸುಮ್ಮನಿರಬಾರದು. ತಕ್ಷಣ ಬೇಡಿಕೆ ಸಲ್ಲಿಸಿ ದಾಸ್ತಾನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
  ಕಳೆದ ಬಾರಿ ಬರಗಾಲದಿಂದ ಬೆಳೆ ನಷ್ಟವಾಗಿರುವ 34 ಸಾವಿರ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಬೆಳೆ ನಷ್ಟ ಪರಿಹಾರ ಇನ್ನೂ ಕೊಡದಿರುವ ಬಗ್ಗೆ ಜಿಲ್ಲಾಧಿಕಾರಿ ಬೇಸರ ವ್ಯಕ್ತಪಡಿಸಿದರು. ವಾರದೊಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮೇವು ದಾಸ್ತಾನು: ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಮಂಜುನಾಥ ಮಾತನಾಡಿ, ಸದ್ಯ ಜಿಲ್ಲೆಯಲ್ಲಿ 7.76 ಸಾವಿರ ಮೆಟ್ರಿಕ್ ಟನ್ ಮೇವು ದಾಸ್ತಾನಿದೆ. ಇದು ಇನ್ನೂ 32 ವಾರ ಸಾಕಾಗಲಿದೆ. ಅಲ್ಲದೆ 9 ಮೇವು ಕೇಂದ್ರದಲ್ಲಿ 49.7 ಮೆಟ್ರಿಕ್ ಟನ್ ಮೇವು ದಾಸ್ತಾನಿದೆ. ಆದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಆಗದು.
  ಕಾಲು ಹಾಗೂ ಬಾಯಿಬೇನೆ ರೋಗ ತಡೆಯಲು ಈಗಾಗಲೇ ಲಸಿಕೆ ಹಾಕಲಾಗಿದ್ದು, ಯಾವುದೇ ಸಮಸ್ಯೆಯಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. ಜಿಪಂ ಸಿಇಒ ಎಸ್.ಎ. ಜಿಲಾನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement