ಸಂಗೀತಾ ಡಿಸ್ಟಿಂಕ್ಷನ್
ಚಿತ್ತಾಪುರ: ಇಲ್ಲಿಯ ಅಂಬಿಕಾ ಮಹಿಳಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಗೀತಾ ಬಸವರಾಜ ಅವರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 534(ಶೇ.89) ಅಂಕಗಳನ್ನು ಪಡೆದು ಡಿಸ್ಟಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಸಂಸ್ಥೆಯ ಅಧ್ಯಕ್ಷ ಶಿವರಾಜ ಮೇತ್ರೆ ಹಾಗೂ ಪ್ರಾಚಾರ್ಯ ಶ್ರೀನಿವಾಸ ಪಿ. ಕಾಂಬಳೆ ಹಾಗೂ ಬೋಧಕ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಿದ್ದುಗೆ ಅಭಿನಂದನೆ
ಗುಲ್ಬರ್ಗ: ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದಿಸಿರುವ ಜಿಲ್ಲಾ ಬಸವ ಕೇಂದ್ರ, ಐದು ವರ್ಷದಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಿಕೊಂಡು ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು ಎಂದು ಮನವಿ ಮಾಡಿದೆ. ಶರಣರು ಕಂಡ ಮಾನವ ಏಕತೆಯ ಕಲ್ಯಾಣ ರಾಜ್ಯದ ಪುನರ್ ನಿರ್ಮಾಣ ತಮ್ಮಂತ ಧೀಮಂತ ಮತ್ತು ನಿರ್ಭಯ ನಾಯಕನಿಂದ ಮಾತ್ರ ಸಾಧ್ಯ ಎಂದು ಬಸವ ಕೇಂದ್ರದ ಮುಖಂಡರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರವೇಶಕ್ಕಾಗಿ ಅರ್ಜಿ
ಗುಲ್ಬರ್ಗ: ನಗರದ ಅಂಜನಾ ಕಿವುಡ ಮತ್ತು ಮೂಕ ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ 2013-14ನೇ ಸಾಲಿಗಾಗಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ತರಗತಿಗಳ ಉಚಿತ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಪ್ರವೇಶಗಳು ಆರಂಭವಾಗಿದ್ದು, ಆಸಕ್ತ ಪಾಲಕರು ತಮ್ಮ ವಿಕಲಚೇತನ ಮಕ್ಕಳ ಪ್ರವೇಶ ಪಡೆಯಬಹುದು. ಇಲ್ಲಿ ಉಚಿತ ಊಟ, ಬಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಿವುಡ ಮತ್ತು ಮೂಕ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ವಿಶೇಷ ಶಿಕ್ಷಣ ತರಬೇತಿ ಹೊಂದಿದ ಶಿಕ್ಷಕರಿಂದ ಬೋಧನೆ ಮಾಡಲಾಗುತ್ತಿದೆ. ವಿವರಕ್ಕೆ ಮೊ. 99022 25508, 97316 28591 ಸಂಪರ್ಕಿಸಬಹುದು.
ಆಕಸ್ಮಿಕ ಬೆಂಕಿ: ನಷ್ಟ
ಗುಲ್ಬರ್ಗ: ಚಿಂಚೋಳಿ ತಾಲೂಕಿನ ಹೊಡೆಬಿರನಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮೂರು ಮನೆ ಭಸ್ಮವಾದ ಘಟನೆ ಇತ್ತೀಚೆಗೆ ನಡೆದಿದ್ದು, ಈ ಘಟನೆಯಿಂದಾಗಿ ಅಪಾರ ನಷ್ಟ ಉಂಟಾಗಿದೆ. ಏಕಕಾಲಕ್ಕೆ ಮೂರು ಮನೆಗಳಿಗೆ ಬೆಂಕಿ ತಗುಲಿರುವುದರಿಂದ ಲಕ್ಷಾಂತರ ರು. ಬೆಲೆ ಬಾಳುವ ವಸ್ತುಗಳು ನಾಶವಾಗಿವೆ. ಗ್ರಾಮದ ಬಸವರಾಜ ಉಳ್ಳಾಗಡ್ಡಿ, ಶಾಂತಾಬಾಯಿ ಮಜಿತಗಾಂವ ಹಾಗೂ ಸೂರ್ಯಕಾಂತ ಶೆಳ್ಳಗಿ ಅವರ ಮನೆಗಳೇ ಬೆಂಕಿಗೆ ಆಹುತಿಯಾಗಿವೆ.ಮನೆಯಲ್ಲಿದ್ದ ನಗದು ಹಣ, ಬಂಗಾರದ ವಸ್ತುಗಳು ಹಾಗೂ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿವೆ. ಸುಲೇಪೇಟ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಕೂಡಲೇ ಜಿಲ್ಲಾಡಳಿತ ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೈಕ್ ಸವಾರ ಸಾವು
ಗುಲ್ಬರ್ಗ: ಆಳಂದ ಹೊರವಲಯದ ಚೆಕ್ಪೋಸ್ಟ್ ಸಮೀಪದ ಆಳಂದ- ವಾಗ್ದರಿ ಮುಖ್ಯ ರಸ್ತೆಯಲ್ಲಿ ಗುರುವಾರ ಸಂಜೆ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಖಾನಾಪುರದ ಖಾಜಾ ಮುಲ್ಲಾ(40) ಮೃತಪಟ್ಟ ದುರ್ದೈವಿ. ಅಕ್ಕಲಕೋಟ ಮಾರ್ಗದಲ್ಲಿ ಡಿಕ್ಕಿ ಹೊಡೆದಿದೆ. ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.