23ರಂದು ಕ್ಯಾಂಪಸ್ ಸಂದರ್ಶನ
ಗುಲ್ಬರ್ಗ: ಐಟಿಐನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುಣೆಯ ಫಿಯಟ್ ಇಂಡಿಯಾ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ನವರು ಪೇಂಟರ್ಸ್, ಶೀಟ್ ಮೆಟಲ್, ಫಿಟ್ಟರ್, ಎಂಎಂವಿ, ವೆಲ್ಡರ್, ಟರ್ನರ್ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಉದ್ಯೋಗ ಕಲ್ಪಿಸಿಕೊಡಲು ಮೇ 23ರಂದು ಬೆಳಗ್ಗೆ 10 ಗಂಟೆಗೆ ಜೇವರ್ಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಕ್ಯಾಂಪಸ್ ಸಂದರ್ಶನವನ್ನು ನಡೆಸಲಿದ್ದಾರೆ. ಆಸಕ್ತರು ತಮ್ಮ ಮೂಲ ದಾಖಲಾತಿಗಳೊಂದಿಗೆ ಜೇವರ್ಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಮೇ 23ರಂದು ಬೆಳಗ್ಗೆ 10 ಗಂಟೆಗೆ ಹಾಜರಾಗಬಹುದು. ವಿವರಕ್ಕೆ 98502 14152 ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಣೆಗೆ ಸೂಚನೆ
ಗುಲ್ಬರ್ಗ: ನಗರದ ಬ್ರಹ್ಮಪುರ ಪ್ರದೇಶದ ಸರ್ವೆ ನಂ. 44ರಲ್ಲಿ ಅಶ್ವಿನಿ ತಂದೆ ಸಿದ್ದಣ್ಣಗೌಡ ಪಾಟೀಲ್ ಇವರು ತಮ್ಮ ಒಡೆತನದ ಆಸ್ತಿ ಸಂ- 10-2/85ಜೆ ಮತ್ತು 10-2/85ಕೆಯನ್ನು ತಪ್ಪು ಮಾಹಿತಿ ನೀಡಿ ಮಹಾನಗರ ಪಾಲಿಕೆಯಿಂದ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಮಹಾನಗರ ಪಾಲಿಕೆಗೆ ದೂರು ಬಂದಿರುತ್ತದೆ. ಆದ್ದರಿಂದ ಸದರಿ ಆಸ್ತಿಯ ಮಾಲೀಕರು ಈ ಪ್ರಕಟಣೆ ಪ್ರಕಟಿಸಿದ 7 ದಿನದೊಳಗಾಗಿ ತಮ್ಮ ಸಮಜಾಯಿಷಿ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಯಾವುದೇ ಸೂಚನೆಯಿಲ್ಲದೆ ಸದರಿ ಆಸ್ತಿಯ ವರ್ಗಾವಣೆಯನ್ನು ರದ್ದುಪಡಿಸಲಾಗುವುದು ಎಂದು ಗುಲ್ಬರ್ಗ ಮಹಾನಗರ ಪಾಲಿಕೆಯ ವಲಯ ಕವೇರಿ-2ರ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
29ರಂದು ಅಹವಾಲು ಸ್ವೀಕಾರ
ಗುಲ್ಬರ್ಗ: ಭಾರತ ಸೈನ್ಯದ ಜಮ್ಮು ಮತ್ತು ಕಾಶ್ಮೀರ್ ಲೈಟ್ ಇನಫ್ಯಾಂಟ್ರಿ- ಅರ್ಮಿ 1 ತಂಡ, ಮೇ 29ರ ಬೆಳಗ್ಗೆ 9ಕ್ಕೆ ಗುಲ್ಬರ್ಗ ನಗರದ ಮಿನಿ ವಿಧಾನಸೌಧದ ಆವರಣದಲ್ಲಿರುವ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ಭೇಟಿ ನೀಡಿ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ವಿವಿಧ ಕುಂದುಕೊರತೆಯನ್ನು ಆಲಿಸಲಿದ್ದಾರೆ. ಅಂದು ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಗುಲ್ಬರ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಕೋರಿದ್ದಾರೆ.
ಕೇಂದ್ರ ಕಾರ್ಮಿಕ ಸಚಿವರ ಪ್ರವಾಸ
ಗುಲ್ಬರ್ಗ: ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಮೇ 20ರಂದು ರಾತ್ರಿ 8 ಗಂಟೆಗೆ ಹೈದ್ರಾಬಾದ್ನಿಂದ ರಸ್ತೆ ಮಾರ್ಗವಾಗಿ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮೇ 21ರಂದು ಸಾರ್ವಜನಿಕರೊಂದಿಗೆ ಭೇಟಿ ಮಾಡಿ ಮಧ್ಯಾಹ್ನ 12 ಗಂಟೆಗೆ ರಸ್ತೆ ಮೂಲಕ ಹೈದ್ರಾಬಾದ್ಗೆ ಪ್ರಯಾಣಿಸುವರು.
ಗ್ರಾಪಂ ಅಧ್ಯಕ್ಷರಿಂದ ಸದಸ್ಯನ ಮೇಲೆ ಹಲ್ಲೆ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಚೌಡಾಪುರ ಗ್ರಾಪಂ ಅಧ್ಯಕ್ಷರೊಬ್ಬರು ಸದಸ್ಯನ ಮೇಲೆ ಹಲ್ಲೆ ನಡೆಸಿದ ಘಟನೆ ಕಳೆದ ಗುರುವಾರ ಬೆಳಗ್ಗೆ ನಡೆದಿದೆ. ಚೌಡಾಪುರ ಗ್ರಾಪಂ ಅಧ್ಯಕ್ಷ ಮಲ್ಲಿನಾಥ ಜಮಾದಾರ ಎಂಬುವರು ಸದಸ್ಯ ರಾಜಕುಮಾರ ಭಜಂತ್ರಿ ಮೇಲೆ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಪಂ ಸದಸ್ಯರಾದ ರಾಜಕುಮಾರ ಮತ್ತು ಮಹಾಂತಪ್ಪ ತಳಕೇರಿ ಇಬ್ಬರು ಸೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಮೋದ ಮೋರೆ ಅವರಿಗೆ ಫೋನ್ ಮಾಡಿ ಕಳೆದ 8 ತಿಂಗಳಿಂದ ಗ್ರಾಪಂ ಸಭೆ ನಡೆಸಿಲ್ಲ. ಸಭೆ ನಡೆಸಿ ಅಭಿವೃದ್ಧಿ ಬಗ್ಗೆ ಮಾಹಿತಿ ಕೊಡಲು ಗ್ರಾಪಂ ಅಧ್ಯಕ್ಷರಿಗೆ ತಿಳಿಸುವಂತೆ ಹೇಳಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆ 9ರ ಸುಮಾರಿಗೆ ಇಬ್ಬರು ಗ್ರಾಪಂ ಸದಸ್ಯರು ರೇವಣಪ್ಪ ವಾಡೇದ್ ಅವರೊಂದಿಗೆ ಸೇರಿ ಚೌಡಾಪುರ ಗ್ರಾಮದಲ್ಲಿ ಅಂಬಾರಾಯ ಜಮಾದಾರ ಎಂಬುವರ ಮನೆಯ ಮಾರ್ಕ್ ಔಟ್ ಹಾಕುತ್ತಿದ್ದಾಗ ಗ್ರಾಪಂ ಅಧ್ಯಕ್ಷ ಮಲ್ಲಿನಾಥ ಜಮಾದಾರ ಇತರರೊಂದಿಗೆ ಅಲ್ಲಿಗೆ ಬಂದು ಅಧಿಕಾರಿಗಳಿಗೆ ಫೋನ್ ಮಾಡಿ ಲೆಕ್ಕ ಕೊಡುವಂತೆ ಹೇಳುತ್ತೀಯಾ, ನಾನು 8 ಲಕ್ಷ ನೀಡಿ ಅಧ್ಯಕ್ಷನಾಗಿ ಬಂದಿರುವೆ ಎಂದು ಹೇಳುತ್ತ ಗ್ರಾಪಂ ಸದಸ್ಯ ರಾಜಕುಮಾರ ಭಜಂತ್ರಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಹಿಳೆ ಮೇಲೆ ಹಲ್ಲೆ
ಗುಲ್ಬರ್ಗ: ಆಳಂದ ತಾಲೂಕಿನ ಹಿರೋಳಿ ಗ್ರಾಮದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮುಕ್ತಾಬಾಯಿ ಗಂಡ ಶರಣಪ್ಪ ಪುಲಾರಿ ಮನೆಯಲ್ಲಿದ್ದಾಗ ದತ್ತಾ ತಂದೆ ಉಮ್ಮಣ್ಣ ಪುಲಾರಿ, ಆತನ ಹೆಂಡತಿ ಕಾಶಿಬಾಯಿ, ಅಣ್ಣನ ಹೆಂಡತಿ ಕಸ್ತೂರಿಬಾಯಿ ಸೇರಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ಹೋಗಿದ್ದಾರೆ ಎನ್ನಲಾಗಿದೆ. ಮುಕ್ತಾಬಾಯಿ ಮಾದನ ಹಿಪ್ಪರಗಾ ಠಾಣೆಯಲ್ಲಿ ದೂರು ನೀಡಿದ್ದಾರೆ.