'ಕುಡಿವ ನೀರು ಸಮಸ್ಯೆ ನಿವಾರಣೆಗೆ ದೀರ್ಘಾವಧಿ ಯೋಜನೆ ಅಗತ್ಯ'
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಮೇ 18
ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಇದರ ಪರಿಣಾಮಕಾರಿ ನಿವಾರಣೆ ದೀರ್ಘಾವಧಿಯ ಯೋಜನೆಗಳಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಗುಲ್ಬರ್ಗ ತಾಲೂಕು ಹಾಗೂ ಗ್ರಾಪಂ.ಗಳ ವ್ಯಾಪ್ತಿಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಬಂದಾಗ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತದೆ. ಇಂತಹ ದಿನಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗಳ ಮೂಲಕ ಜನಸಾಮಾನ್ಯರಿಗೆ ನೀರು ಒದಗಿಸುವುದರ ಜತೆಗೆ ಸಂಬಂಧಿಸಿದ ಗ್ರಾಮಗಳಲ್ಲಿಯೇ ಶಾಶ್ವತವಾಗಿ ನೀರು ಲಭಿಸುವ ಯೋಜನೆಗಳನ್ನು ರೂಪಿಸುವ ಅಗತ್ಯತೆ ಇದೆ. ಇದಕ್ಕೆ ಪಂಚಾಯತ್ ರಾಜ್ ಎಂಜಿನಿಯರ್ ಇಲಾಖೆಯ ಕಿರಿಯ ಅಭಿಯಂತರರು ಹಾಗೂ ಗ್ರಾಪಂ.ಗಳ ಅಭಿವೃದ್ಧಿ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಪಲ್ಲವಿ ಆಕುರಾತಿ ಮಾತನಾಡಿ, ಗುಲ್ಬರ್ಗ ತಾಲೂಕಿನ ಪ್ರತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಂಚಾಯ್ತಿ ವ್ಯಾಪ್ತಿಯ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಎಂಜಿಎನ್‌ಆರ್‌ಇಜಿಎಸ್ ಅಡಿಯಲ್ಲಿ 2012-13ರ ಅನುಷ್ಠಾನದ ಕುರಿತು ಪರಿಶೀಲನೆ, ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ, ಲೆಕ್ಕ ಶಾಖೆಗೆ ಸಂಬಂಧಿಸಿದಂತೆ(ವಿವಿಧ ಯೋಜನೆಗಳ ಅಡಿಟ್, ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸುವುದು ಮತ್ತು ಪಂಚತಂತ್ರ), ಬಿಆರ್‌ಜಿಎಫ್ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಯಾಯಿತು.