'ಕೈ' ಭದ್ರಕೋಟೆಗೆ ಚಿಂಚನಸೂರ ಅಧಿಪತಿ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 18
ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಪ್ರತಿ ಚುನಾವಣೆಯಲ್ಲೂ ಸಾಬೀತು ಮಾಡಿರುವ ಜಿಲ್ಲೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಮೊದಲ ಪಟ್ಟಿಯಲ್ಲೇ ಮಂತ್ರಿ ಸ್ಥಾನ ಸಿಕ್ಕಿದೆ. ಗುರುಮಠಕಲ್ ಶಾಸಕ ಬಾಬುರಾವ ಚಿಂಚನಸೂರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದು, ನೂತನ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲೇರಿದೆ.
ಚಿಂಚನಸೂರ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಕ್ಕಿರುವುದು ಅನಿರೀಕ್ಷಿತವೇನಲ್ಲ. ಈ ಹಿಂದೆ ಚಿತ್ತಾಪುರ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಅವರು 1999ರಲ್ಲಿ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸ್ಟೇಟ್ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಣ್ಣ ಉಳಿತಾಯ ಸೇರಿದಂತೆ ಒಟ್ಟು 7 ಖಾತೆ ನಿಭಾಯಿಸುವ ಮೂಲಕ ಸಪ್ತ ಖಾತೆ ಸಚಿವರು ಎಂದೇ ಖ್ಯಾತಿ ಗಳಿಸಿದ್ದರು.
ಜಾತಿ ಲೆಕ್ಕಾಚಾರ: ನಂತರ 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಿಂದ ಗುರುಮಠಕಲ್ ಕ್ಷೇತ್ರಕ್ಕೆ ಮೀಸಲು ತಪ್ಪಿದ್ದರಿಂದ ಸತತ 8 ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಚಿತ್ತಾಪುರಕ್ಕೆ ಹೋದರು. ಆಗ ಚಿಂಚನಸೂರ ಗುರುಮಠಕಲ್ ಕ್ಷೇತ್ರಕ್ಕೆ ಆಗಮಿಸಿದರು. 2008ರ ಚುನಾವಣೆಯಲ್ಲಿ ಸುಮಾರು 9 ಸಾವಿರ ಮತಗಳ ಅಂತರದಿಂದ ಗೆದ್ದು, 2013ರ ಚುನಾವಣೆಯಲ್ಲೂ ಪುನರಾಯ್ಕೆಯಾದರು. ಒಟ್ಟು 5 ಬಾರಿ ಶಾಸಕರಾಗಿರುವ ಅವರು ಹೈ-ಕ ಭಾಗದ ಕಾಂಗ್ರೆಸ್ನ ಹಿರಿಯ ರಾಜಕಾರಣಿ. ಅಷ್ಟೇ ಅಲ್ಲ, ಹಿಂದುಳಿದ ಕಬ್ಬಲಿಗ ಸಮುದಾಯಕ್ಕೆ ಸೇರಿದವರಾದ್ದರಿಂದ ಜಾತಿ ಲೆಕ್ಕಾಚಾರವೂ ಮಂತ್ರಿ ಸ್ಥಾನ ಸಿಗುವಲ್ಲಿ ಅವರಿಗೆ ಸಹಾಯಕವಾಗಿದೆ.
ವರ್ಣರಂಜಿತ ಬದುಕು: ಚಿಂಚನಸೂರ ಅವರದ್ದು ವರ್ಣರಂಜಿತ ಬದುಕು. ಕೆಲಸ ಆಗಬೇಕಿದ್ದರೆ ಯಾರಿಗೆ ಬೇಕಾದರೂ ಸಲಾಮ್ ಹೊಡೆಯುವ ಹಾಗೂ ಯಾರನ್ನು ಬೇಕಾದರೂ ಅಷ್ಟೇ ಸಲೀಸಾಗಿ ದೂರುವ ವ್ಯಕ್ತಿ. ಕ್ಷೇತ್ರದಲ್ಲಿ ಅವರಿಗೆ ವಿರೋಧಿಗಳೂ ಸಾಕಷ್ಟು ಜನರಿದ್ದಾರೆ. ಪ್ರೀತಿಸುವ ಮಂದಿಯೂ ಇದ್ದಾರೆ.
ಆದರೆ ಅವರು ಯಾವುದರ ಬಗ್ಗೆಯೂ ತಲೆಕೆಸಿಕೊಳ್ಳುವ ಜಾಯಮಾನದವರಲ್ಲ. ಅಲ್ಲದೇ ಅವರಿಗೆ ಬಂಗಾರ ಎಂದರೆ ಅಚ್ಚುಮೆಚ್ಚು. ಎಲ್ಲಾ ಬೆರಳಿಗೆ ಉಂಗುರು ಹಾಕುವ ಅವರು, ಕಾಣಿಕೆ ರೂಪದಲ್ಲಿ ಅನೇಕರಿಗೆ ಚಿನ್ನವನ್ನೇ ನೀಡಿದ್ದಾರೆ. ಇದಕ್ಕೆ ಸ್ವಪಕ್ಷೀಯರು ಹಾಗೂ ವಿರೋಧ ಪಕ್ಷದವರು ಎಂಬ ತಾರತಮ್ಯವಿಲ್ಲ. ಕಾರಿನಲ್ಲಿ ಹೋಗುವಾಗ ದಾರಿಯಲ್ಲಿ ಬಡವರು ಕಂಡರೆ ನಿಲ್ಲಿಸಿ ಅವರಿಗೆ ಗರಿಗರಿ ನೋಟು ಕೊಟ್ಟು ಹೋಗುವುದು ಇವರ ಜಾಯಮಾನ. ಆದ್ದರಿಂದ ಅವರನ್ನು ಕಂಡರೆ ಅನೇಕರಿಗೆ ಅಚ್ಚುಮೆಚ್ಚು.
ವಿರೋಧದ ನಡುವೆ ಗೆಲವು: ಚಿಂಚನಸೂರ ಅವರಿಗೆ ಕ್ಷೇತ್ರದಲ್ಲಿ ಸ್ವಪಕ್ಷೀಯರೇ ಅನೇಕರು ವಿರೋಧಿಗಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದು ವಿಪರೀತಕ್ಕೆ ಹೋಗಿ ಅನೇಕರು ಬಂಡಾಯದ ಬಾವುಟ ಹಾರಿಸಿದ್ದರು. ಚಿಂಚನಸೂರಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಬಹಿರಂಗ ಹೇಳಿಕೆಯನ್ನೂ ಕೊಟ್ಟರು.
ಆದರೆ ಇದೆಲ್ಲವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಬಲ್ಲ ಚಿಂಚನಸೂರ ಟಿಕೆಟ್ ತಂದು ವಿರೋಧಿಗಳನ್ನು ತಣ್ಣಗೆ ಮಾಡಿದ್ದರು. ಅಷ್ಟೇ ಅಲ್ಲ, ಚುನಾವಣೆಯಲ್ಲಿ ಗೆದ್ದೂ ತೋರಿಸಿದರು. ಆದರೆ ಈ ಬಾರಿ ಅವರು ಕೇವಲ 1650 ಮತಗಳ ಅಂತರದಿಂದ ಗೆದ್ದಿರುವುದು ಚಿಂಚನಸೂರಗೆ ಎಚ್ಚರಿಕೆ ಗಂಟೆಯಾಗಿದೆ.
ಅಸಮಾಧಾನದ ಹೊಗೆ: ಚಿಂಚನಸೂರಗೆ ಮಂತ್ರಿ ಸ್ಥಾನ ಸಿಕ್ಕಿರುವ ಬಗ್ಗೆ ವಿರೋಧ ಇಲ್ಲದಿದ್ದರೂ ಮಾಲಕರೆಡ್ಡಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕದಿರುವುದು ಅನೇಕ ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಕಾರ್ಯಕರ್ತರಿಗೆ ಅವರು ಸಿಗುವುದಿಲ್ಲ, ಅಧಿಕಾರಿಗಳ ಸಭೆ ನಡೆಸುವುದಿಲ್ಲ ಎಂದೂ ಹೇಳಲಾಗುತ್ತಿದೆ. ಸಹಜವಾಗಿಯೇ ಈಗ ಉಸ್ತುವಾರಿ ಸಚಿವರೂ ಅವರೇ ಆಗುವುದರಿಂದ ಈ ಎಲ್ಲ ಆರೋಪ ಮೆಟ್ಟಿ ನಿಂತು ಕೆಲಸ ಮಾಡಿ ತೋರಿಸಬೇಕಿದೆ.
ಜವಾಬ್ದಾರಿ ಜಾಸ್ತಿ: ನೂತನ ಜಿಲ್ಲೆಯಾಗಿರುವುರಿಂದ ಉಸ್ತುವಾರಿ ಸಚಿವರ ಜವಾಬ್ದಾರಿಯೂ ಅಧಿಕ. ರಸ್ತೆ, ಕುಡಿಯುವ ನೀರು, ನೀರಾವರಿ ಸೌಲಭ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ತುರ್ತು ಅಗತ್ಯವಾಗಿದೆ.
ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಒಂದು ಕಡೆ ಕೆಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕಿದೆ. ನೇರವಾಗಿ ಹಾಗೂ ಮೊಬೈಲ್ಗೂ ಸಿಗದ ಶಾಸಕರು ಎಂಬ ಆರೋಪ ಅವರ ಮೇಲಿದ್ದು, ಇನ್ನು ಮುಂದೆ ಎಲ್ಲರೊಂದಿಗೆ ಸಂಪರ್ಕ ಹೊಂದುವುದೂ ಮುಖ್ಯವಾಗಿದೆ.
ಮಂತ್ರಿ ಸ್ಥಾನ ಪಡೆಯಲು ತೋರಿದ ಆಸಕ್ತಿಯನ್ನು ಜಿಲ್ಲೆಯ ಬಗ್ಗೆ ಕೂಡ ತೋರಿಸಬೇಕಿದೆ. ಒಟ್ಟಿನಲ್ಲಿ ಅವರು ಗೂಟದ ಕಾರಿನಲ್ಲಿ ಬರುವುದನ್ನು ಕಾಂಗ್ರೆಸ್ ಕಾರ್ಯಕರ್ತರು ಕಾಯುತ್ತಿದ್ದಾರೆ.