ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಳ್ಳಿಗಳತ್ತ ಹೆಜ್ಜೆ ಹಾಕಿ; ಪಿಡಿಒಗಳಿಗೆ ಡಿಸಿ ಸೂಚನೆ

Vishwanath S
Updated On : 19 May 2013, 11:58 am

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಮೇ 18
ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ನಿವಾರಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಮಸ್ಯೆ ಇರುವ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೂಡಲೇ ಸಮಸ್ಯೆ ನಿವಾರಣೆಗೆ ಯತ್ನಿಸಬೇಕೆಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗುಲ್ಬರ್ಗ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲ್ಲೆಲ್ಲಾ ತೀವ್ರ ಸಮಸ್ಯೆ: ಗುಲ್ಬರ್ಗ ತಾಲೂಕಿನ ಅವರಾದ(ಬಿ) ಗ್ರಾಪಂ ವ್ಯಾಪ್ತಿಯಲ್ಲಿ ಅವರಾದ ಗ್ರಾಮದ ಎಸ್ಸಿ ಬಡಾವಣೆ, ಕಲ್ಲಹಂಗರಾ ಗ್ರಾಪಂ ವ್ಯಾಪ್ತಿಯ ಜಂಬಗಾ, ಅಷ್ಟಗಾ, ಡೊಂಗರಗಾಂವ ಗ್ರಾಪಂ ವ್ಯಾಪ್ತಿಯ ಕಾಳಮಂದರಗಿ ಗ್ರಾಮ, ಹೇರೂರ (ಬಿ) ಗ್ರಾಪಂ ವ್ಯಾಪ್ತಿಯ ಅವರಾದ(ಕೆ), ಕಮಲಾಪುರ ಗ್ರಾಪಂ ವ್ಯಾಪ್ತಿಯ ಕಮಲಾಪುರ ವಾಡ್ 3, 5 ಮತ್ತು 6ರ ಬಡಾವಣೆಗಳು, ಹರಸೂರ ಗ್ರಾಪಂ ವ್ಯಾಪ್ತಿಯ ಹರಸೂರ ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ತಲೆದೋರಿದೆ ಎಂದರು.
ಕೂಡಲೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಾತ್ಕಾಲಿಕ ತುರ್ತು ಕ್ರಮ ಜರುಗಿಸಿ ಅಗತ್ಯವಾದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು, ಶಾಶ್ವತ ಪರಿಹಾರ ಕಲ್ಪಿಸಬೇಕು. ಯಾವುದೇ ಗ್ರಾಪಂ ವ್ಯಾಪ್ತಿಯಲ್ಲಿ 3ರಿಂದ 4 ದಿನಗಳವರೆಗೆ ಕುಡಿವ ನೀರಿನ ಸಮಸ್ಯೆ ಎದುರಾದಲ್ಲಿ ಸ್ಥಳೀಯ ಪಂಚಾಯತ್ ನಿಧಿಯಿಂದ ಟ್ಯಾಂಕರುಗಳ ಮೂಲಕ ನೀರಿನ ವ್ಯವಸ್ಥೆ ಮಾಡಿಸಿ ಪ್ರತಿ ಮನೆಗಳಿಗೆ ನೀರಿನ ಹಂಚಿಕೆ ಮಾಡಬೇಕು.
ಅಮಾನತು ಎಚ್ಚರಿಕೆ: ಟ್ಯಾಂಕರ್ ನೀರು ಒದಗಿಸುವ ಸಂದರ್ಭದಲ್ಲಿ ಅದಕ್ಕೊಂದು ನಿರ್ದಿಷ್ಟ ಸಮಯವನ್ನು ಅಳವಡಿಸಿಕೊಳ್ಳಬೇಕು, ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ನೀರನ್ನು ಒದಗಿಸಬೇಕು, ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಪಿಡಿಒಗಳು ಕೆಲಸ ಮಾಡಬೇಕು. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅರಿವಿರದ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ವಿದ್ಯುತ್- ಮಾಹಿತಿ ತಿಳಿದಿರಲಿ: ಕೊಳವೆ ಬಾವಿಗಳಿಂದ ಕುಡಿಯುವ ನೀರು ಸರಬರಾಜು ಮಾಡುವ ಹಂತದಲ್ಲಿ ಕೆಲವೊಮ್ಮೆ ಸಣ್ಣ ಪುಟ್ಟ ತಾಂತ್ರಿಕ ದೋಷಗಳಿಂದ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಕೊಳವೆಬಾವಿಗಳನ್ನು ಸ್ವಚ್ಛ ಮಾಡಿಸಬೇಕು. ನೀರನ್ನು ಎಳೆಯುವ ಯಂತ್ರದ ಸಾಮರ್ಥ್ಯವನ್ನು ಹೆಚ್ಚಿಸಬೇಕು, ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯುತ್ ಸರಬರಾಜು ವ್ಯವಸ್ಥೆಯ ಬಗ್ಗೆ ಸೂಕ್ತ ಮಾಹಿತಿ ಇರಬೇಕೆಂದರು.
ಸಿಂಗಲ್ ಹಾಗೂ ಡಬಲ್ ಫೇಸ್ ನೀರೆತ್ತುವ ಯಂತ್ರಗಳು ಸಂಜೆ 6ರಿಂದ ರಾತ್ರಿ 12ರವರೆಗೂ ಕಾರ್ಯನಿರ್ವಹಿಸುತ್ತವೆ. ತ್ರೀಫೆಸ್ ಯಂತ್ರಗಳು ರಾತ್ರಿ 12ರಿಂದ 3ರವರೆಗೆ ಕಾರ್ಯನಿರ್ವಹಿಸುತ್ತವೆ. ಈ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ: ಯಾವುದೇ ಕೊಳವೆಬಾವಿ ಕೊರೆದ ನಂತರ ಅದಕ್ಕೆ ಹ್ಯಾಂಡ್‌ಪಂಪ್ ಅಳವಡಿಸಲು 7 ದಿನಗಳ ಅವಧಿ ಸಾಕು. ಈ ಪ್ರಕ್ರಿಯೆಗಳನ್ನು ತುರ್ತಾಗಿ ಮಾಡಿ ಪೂರೈಸಬೇಕು, ನೀರು ಸಂಗ್ರಹಣ ಟ್ಯಾಂಕ್‌ಗಳನ್ನು ಪ್ರತಿ 15 ದಿನಗಳಿಗೊಮ್ಮೆ ಬಿಳಿ ಸುಣ್ಣವನ್ನು ಬಳಿದು ಸ್ಪಚ್ಛಗೊಳಿಸಿ ನಂತರ ನೀರು ಸಂಗ್ರಹಿಸಬೇಕೆಂದು ಅವರು ತಾಕೀತು ಮಾಡಿದರು.
ಕ್ರಿಮಿನಲ್ ಪ್ರಕರಣ: ಕೊಳವೆಬಾವಿಗಳನ್ನು ಕೊರೆಸಿ, ಅವುಗಳಲ್ಲಿ ನೀರು ಬಾರದ ಸಂದರ್ಭಗಳಲ್ಲಿ ಅವುಗಳನ್ನು ಹಾಗೆಯೇ ಬಿಟ್ಟಲ್ಲಿ ಸಂಬಂಧಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡಲಾಗುವುದು. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು. ಅದರೊಂದಿಗೆ ಕೊಳವೆಬಾವಿ ಕೊರೆದವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು.
 ಕೊಳವೆಬಾವಿ ಸುತ್ತ 500 ಮೀಟರ್ ಪರಿಧಿಯಲ್ಲಿ ಇನ್ನೊಂದು ಕೊಳವೆಬಾವಿ ಕೊರೆಯುವಂತಿಲ್ಲ. ಇದನ್ನು ಉಲ್ಲಂಘಿಸಿದಲ್ಲಿ ಕೊರೆಯಲಾದ ಕೊಳವೆಬಾವಿಯನ್ನು ವಶಕ್ಕೆ ಪಡೆದು ಅದನ್ನು ಸಾರ್ವಜನಿಕರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಬಳಸಬಹುದು. ಅಲ್ಲದೆ ಅವುಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಜೆಸ್ಕಾಂಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಯವರು ಜಿಪಂ ಸಿಇಒ ಪಲ್ಲವಿ ಆಕುರಾತಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ, ಜಿಪಂ ಮುಖ್ಯ ಯೋಜನಾಧಿಕಾರಿ ಈಶ್ವರಪ್ಪ ಕಿರಣಗಿ, ತಾಪಂ ಇಒ ಎನ್.ವಿ. ಪಟವೆಗಾರ್, ತಾಪಂ ಅಧ್ಯಕ್ಷ ಚನ್ನಬಸಪ್ಪ ಕುರಿಕೋಟಾ, ಗುಲ್ಬರ್ಗ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ತಂಡ ರಚಿಸಿ...: 500 ಮೀಟರ್ ಪರಿಧಿ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚಿನ ಕೊಳವೆಬಾವಿಗಳು ಕಂಡುಬಂದಲ್ಲಿ ಅವುಗಳನ್ನು ಪತ್ತೆ ಹಚ್ಚಲು ಪರಿಶೀಲನಾ ತಂಡವನ್ನು ರಚಿಸುವಂತೆ ಹಾಗೂ ಕೊಳವೆಬಾವಿಗಳ ಮೂಲಕ ಅಥವಾ ಕುಡಿಯುವ ನೀರಿನ ಮೂಲಗಳ ಮೂಲಕ ನೀರು ಸರಬರಾಜು ಮಾಡುವ ಹಂತದಲ್ಲಿ ಪೈಪುಗಳಲ್ಲಿ ಹಾಗೂ ನಲ್ಲಿಗಳಲ್ಲಿ ನೀರು ಸೋರಿಕೆಯಾಗುತ್ತಿದ್ದರೆ ಅದನ್ನು ತಡೆಗಟ್ಟಲು ಒಂದು ತಂಡವನ್ನು ರಚಿಸುವ ಅಗತ್ಯತೆ ಇದೆ. ಈ ಎರಡು ತಂಡಗಳನ್ನು ರಚಿಸುವಂತೆ ಸಿಇಒಗೆ ಜಿಲ್ಲಾಧಿಕಾರಿ ತಿಳಿಸಿದರು.
ವಾರದಲ್ಲಿ ಹಣ ಬಳಸಿಕೊಳ್ಳಿ...: ಜಿಪಂ ಸಿಇಒ ಪಲ್ಲವಿ ಆಕುರಾತಿ ಮಾತನಾಡಿ, ಗುಲ್ಬರ್ಗ ತಾಪಂ.ಗೆ 2012- 13ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳಿಗಾಗಿ 1 ಕೋಟಿ ಅನುದಾನ ನೀಡಲಾಗಿತ್ತು. ಈ ಪೈಕಿ ಕೇವಲ 51 ಲಕ್ಷ ಖರ್ಚು ಮಾಡಲಾಗಿದೆ. ಇನ್ನುಳಿದ 49 ಲಕ್ಷ ಕೇವಲ ಒಂದು ವಾರದಲ್ಲಿ ಬಳಸಿಕೊಂಡು ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮೇ 31ರೊಳಗೆ ಲೆಕ್ಕ ಆಡಿಟ್ ಮಾಡಿಸಬೇಕೆಂದು ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ನಿಜವಾದ ಕೂಲಿಗಾರರ ಬಳಿ ಪಾಸ್ ಬುಕ್ ಮತ್ತು ಜಾಬ್ ಕಾರ್ಡ್ ಇರಬೇಕು. ಒಂದು ವೇಳೆ ಕಾರ್ಮಿಕರ ಜಾಜ್ ಕಾರ್ಡ್ ಮತ್ತು ಪಾಸ್ ಬುಕ್‌ಗಳನ್ನು ಗುತ್ತಿಗೆದಾರರು ತಮ್ಮ ಬಳಿ ಇಟ್ಟುಕೊಂಡು ದುರ್ಬಳಕೆ ಮಾಡಿಕೊಂಡರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement