...ದಿಡ್ಡಿ ಬಾಗಿಲು ಹಾಕಿದರು
ಕ.ಪ್ರ. ವಾರ್ತೆ ಗುಲ್ಬರ್ಗ/ಶಹಾಬಾದ್ ಮೇ 19
ಚಿತ್ತಾಪುರ ತಾಲೂಕಿನ ಕದ್ದರಗಿ, ಮುತ್ತಗಿ, ಶಂಕರವಾಡಿ, ಶಹಾಬಾದ್, ಗೋಳಾ(ಕೆ), ಹೊನಗುಂಟಾ ಗ್ರಾಮಗಳ ವ್ಯಾಪ್ತಿಯ ಕಾಗಿಣಾ ನದಿಯಲ್ಲಿ ಕಳೆದ ಆರು ತಿಂಗಳಿಂದ ಹಗಲು- ರಾತ್ರಿ ನಿರಂತರವಾಗಿ ಅಕ್ರಮ ಮರಳು ಲೂಟಿ ಮಾಡುತ್ತಿದ್ದರೂ ಕಣ್ಣೆತ್ತಿ ನೋಡದ ಕಂದಾಯ ಇಲಾಖೆ ಅಧಿಕಾರಿಗಳು, ಈಗ ಮರಳು ಖಾಲಿಯಾದ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ಆರು ತಿಂಗಳಿಂದ ಕಂದಾಯ ಇಲಾಖೆ ಪರವಾನಗಿ ಇಲ್ಲದೆ ಈ ಭಾಗದಲ್ಲಿ ಜೆಸಿಬಿ, ಹಿಟಾಚಿಗಳನ್ನು ಬಳಸಿ, ಹಗಲು ರಾತ್ರಿ ಎನ್ನದೆ ಪ್ರತಿ ದಿನ 250ರಿಂದ 300 ಲೋಡ್ ಮರಳನ್ನು ಲಾರಿ, ಟಿಪ್ಪರ್ ಟ್ರ್ಯಾಕ್ಟರ್‌ಗಳ ಮೂಲಕ ಮುಖ್ಯ ರಸ್ತೆಗಳ ಮೂಲಕವೇ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳ ಕಣ್ಣ ಮುಂದೆಯೇ ರಾಜಾರೋಷವಾಗಿ ಸಾಗಿಸಲಾಗುತ್ತಿದ್ದರು ಸಹ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದರು. ಅಧಿಕಾರಿಗಳ ನಿರ್ಲಕ್ಷತೆ, ಹೊಂದಾಣಿಕೆಗಳಿಂದ ಕಾಗಿಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ಉಳಿದಿರುವ ನೀರು ಕಲುಷಿತವಾಗಿದೆ.
ಲೂಟಿಕೋರರೊಂದಿಗೆ ಶಾಮೀಲು: ಪೊಲೀಸರು ಇದು ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದು, ಅವರು ದೂರು ನೀಡಿದರೆ ಕ್ರಮ ಕೈಗೊಳ್ಳುವದಾಗಿ ಹೇಳಿದರೆ, ಸರ್ಕಾರದ ಬೊಕ್ಕಸ ಭರ್ತಿಗೆ ಕ್ರಮ ಕೈಗೊಳ್ಳಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ಲೂಟಿಕೋರರೊಂದಿಗೆ ಶಾಮೀಲಾಗಿದ್ದರಿಂದ ಕಳೆದ ಆರು ತಿಂಗಳಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ರಾಜಧನ ಇಲ್ಲವಾಗಿದೆ.
ಕಳೆದ ಒಂದು ತಿಂಗಳ ಹಿಂದೆ ನದಿ ದಂಡೆಗೆ ಹೊಂದಿಕೊಂಡಂತೆ ಇರುವ ಹೊಲದವರು ತಮ್ಮ ಹೊಲದಲ್ಲಿ ಲಾರಿ, ಟಿಪ್ಪರ್‌ಗಳನ್ನು ಸಾಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರ ನೀಡಿದರೆ, ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆ, ವಿಧಾನಸಭೆ ಚುನಾವಣೆಗಳು ಮುಗಿದ ನಂತರ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ.
ಚುನಾವಣೆ ನೆಪ- ಖಾಲಿ ಖಾಲಿ: ಆದರೆ, ಈ ಎರಡು ಚುನಾವಣೆ ಪ್ರಕ್ರಿಯೆ ಮುಗಿಯಲು ಮೂರು ತಿಂಗಳು ತೆಗೆದುಕೊಂಡಿದ್ದರಿಂದ ಅಷ್ಟರಲ್ಲಿ ಮರಳು ಲೂಟಿ ಮಾಡುವವರು ಸಂಪೂರ್ಣ ನದಿಯ ಒಡಲನ್ನು ಖಾಲಿ ಮಾಡಿದ್ದು, ಶಹಾಬಾದ್‌ದಿಂದ ಹೊನಗಂಟಾದ ಭೀಮಾ ನದಿಯ ಸಂಗಮದವರೆಗಿನ ನದಿ ಪಾತ್ರದಲ್ಲಿ ಕಪ್ಪು ಮಣ್ಣು ಮಿಶ್ರಿತ ಮರಳು ಹೊರಬಂದಿದೆ.
ಬರೀ ವಾಹನ ಜಪ್ತಿ..: ಈಗಾಗಲೇ ಆರು ತಿಂಗಳಿಂದ ಮರಳನ್ನು ಲೂಟಿ ಮಾಡುತ್ತಿದ್ದರೂ ಏನಾದರು ಸಬೂಬು ಹೇಳಿ ನಿರ್ಲಕ್ಷ್ಯ ಧೋರಣೆಯನ್ನು ತಾಳಿದ ಸೇಡಂ ಉಪ ಆಯುಕ್ತರು, ತಾಲೂಕು ತಹಸೀಲ್ದಾರರು, ಕಂದಾಯ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಶಹಾಬಾದ್, ಹೊನಗುಂಟಾ ಬಳಿ ದಾಳಿ ನಡೆಸಿದ್ದು, ಶಹಾಬಾದ್ ಬಳಿ ಹೊಲದಲ್ಲಿ ಖಾಲಿಯಾಗಿ ನಿಂತಿದ್ದ 4 ಟಿಪ್ಪರ್, 3 ಹಿಟಾಚಿ ವಶಕ್ಕೆ ತೆಗೆದುಕೊಂಡರೆ, ಹೊನಗುಂಟಾ ಬಳಿ ಮರಳು ತುಂಬಿದ 7 ಟಿಪ್ಪರ್, ಒಂದು ಟ್ರ್ಯಾಕ್ಟರ್ ವಶಕ್ಕೆ ಪಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಒಬ್ಬ ಮರಳು ಸಾಗಾಣಿಕೆ ನಡೆಸುವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿಲ್ಲ.
ರಾಜ್ಯದ ಬೊಕ್ಕಸಕ್ಕೆ ಹಾನಿ: ಇಷ್ಟು ದಾಳಿ ನಡೆದರೂ ಅಧಿಕಾರಿಗಳಿಗೆ, ಕಾನೂನಿಗೆ ಬೆದರದ ಲೂಟಿಕೋರರು ಶನಿವಾರ ಮಧ್ಯರಾತ್ರಿಯಿಂದ ಬೆಳಗ್ಗೆಯವರೆಗೆ ಯಥಾವತ್ತಾಗಿ ಮರಳನ್ನು ಲೂಟಿ ಮಾಡಿ, ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿದ್ದಾರೆ. ಜಿಲ್ಲಾಧಿಕಾರಿಗಳ, ಉಪ ಆಯುಕ್ತರ, ತಹಸೀಲ್ದಾರರು, ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಜಾಣ ಕುರುಡುತನದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ಕಂದಾಯ ಹಣ ಹಾನಿಯಾಗಿದ್ದಲ್ಲದೆ, ನೈಸರ್ಗಿಕವಾಗಿ ಹರಿಯಬೇಕಾದ ನದಿ ಅಕ್ರಮಕಾರರ ದಾಳಿಯಂದ ಕಾಗಿಣೆ ಬರಿದಾಗಿದೆ.