ಅತ್ಯಾಚಾರ: ರಸ್ತೆ ತಡೆ ನಡೆಸಿ ಪ್ರತಿಭಟನೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಆಶೋಕ ನಗರ ಬಡಾವಣೆಯಲ್ಲಿ ಶನಿವಾರ ಮದ್ಯಾಹ್ನ 5 ವರ್ಷದ ಮಗುವಿನ ಮೇಲೆ ಬಬಲು ಎಂಬ ಯುವಕ ಅತ್ಯಾಚಾರವೆಸಗಿದ ಪ್ರಕರಣವನ್ನು ಪ್ರತಿಭಟಿಸಿ ಎಐಎಂಎಸ್‌ಎಸ್, ಎಸ್‌ಯುಸಿಐ, ಎಐಡಿವೈಓ, ಎಐಡಿಎಸ್‌ಓ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
ಪ್ರತಿಭಟನಾಕಾರರು ಬೆಳಗ್ಗೆ 10ಗಂಟೆಗೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಗುಂಡಮ್ಮ ಮಡಿವಾಳ ಮಾತನಾಡಿ, ದೇಶದಲ್ಲಿ ಮಹಿಳೆಯರ, ಮಕ್ಕಳ ಮೇಲೆ ಅತ್ಯಾಚಾರ ನಿರಂತರವಾಗುತ್ತಿದೆ. ದೆಹಲಿ, ಉತ್ತರ ಪ್ರದೇಶದಲ್ಲಿ ಇಂಥ ಘಟನೆಗಳು ನಡೆದಿದ್ದು, ಈಗ ಶಹಾಬಾದ್ ನಗರದಲ್ಲಿ ನಡೆದಿರುವುದು ಖಂಡನೀಯವಾಗಿದೆ ಎಂದು ಖಂಡಿಸಿದರು.
ಆಕ್ರೋಶ: ಇಂಥ ಅತ್ಯಾಚಾರ ಪ್ರಕರಣಗಳಿಂದ ಮಹಿಳೆ, ಮಕ್ಕಳು ಇಂದು ಒಬ್ಬಂಟಿಯಾಗಿ ಓಡಾಡುವುದು ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಇಂಥ ಘಟನೆಗಳು ಮರುಕಳಿಸಲು ಅಶ್ಲೀಲ ಸಾಹಿತ್ಯ, ಸಿನಿಮಾ, ಜಾಹೀರಾತುಗಳು ಕಾರಣವಾಗಿವೆ. ಸರ್ಕಾರ ಕೂಡಲೇ ಇವುಗಳಿಗೆ ತಡೆ ಹಾಕಬೇಕು, ಇಂಥ ಘಟನೆಗಳಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್‌ಯುಸಿಐ ಸ್ಥಳೀಯ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪುರ ಮಾತನಾಡಿ, ಚಿಕ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಯುವಕನನ್ನು ಪೊಲೀಸರು ಕೇವಲ 16 ವರ್ಷ ಎಂದು ದಾಖಲಿಸಿದ್ದಾರೆ. ಆದರೆ ಮೇಲ್ನೊಟಕ್ಕೇ ಆ ಯುವಕ 20 ವರ್ಷದವನಂತೆ ಕಾಣುತ್ತಿದ್ದು, ಇದರಿಂದ ಬಾಲ ಅಪರಾಧಿಯಾಗಿ ಆತ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ನಿಜವಾದ ವಯಸ್ಸನ್ನು ಪತ್ತೆ ಹಚ್ಚಿ ಆರೋಪಿಯ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಮನವಿ: ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿದ್ದರಿಂದ ಶಹಾಬಾದ್ ಜೇವರ್ಗಿ, ಗುಲ್ಬರ್ಗ, ಚಿತ್ತಾಪುರ ಮಾರ್ಗಗಳ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ಎಸ್‌ಯುಸಿಐನ ರಾಮಣ್ಣ ಇಬ್ರಾಹಿಂಪುರ ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬರೆದ ಮನವಿಯನ್ನು ಪಿಎಸ್‌ಐ ರಘು ಎನ್. ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಐಎಂಎಸ್‌ಎಸ್ ಸದಸ್ಯರಾದ ರೇಷ್ಮಾ, ಅಂಬಿಕಾ, ಸುಭದ್ರಾ, ಜಯಶ್ರೀ, ಪಲ್ಲವಿ ಹಿರೇಮಠ, ಪೂಜಾ, ಮಹಾದೇವಿ, ಸುಮಿತ್ರಾ, ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಎಚ್. ಎಐಡಿಎಸ್‌ಓ ಅಧ್ಯಕ್ಷ ವಿರೇಶ ಎಸ್, ಎಐಡಿವೈಓ ಅಧ್ಯಕ್ಷ ನಿಂಗಣ್ಣ ಜಂಬಗಿ, ಲಕ್ಷ್ಮೀಕಾಂತ ಮಾನೆ, ಹಣಮಂತಜಾಧವ ಸೇರಿದಂತೆ ನೂರಾರು ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.