ಕುಡಿಯುವ ನೀರಿನ ಸಮಸ್ಯೆ; ಜನ, ಜಾನುವಾರು ತತ್ತರ
ಕನ್ನಡಪ್ರಭ ವಾರ್ತೆ ಚಿಂಚೋಳಿ ಮೇ 19
ತಾಲೂಕಿನಲ್ಲಿ ದಿನೇ ದಿನೇ ಬಿಸಿಲಿನ ತಾಪ ಏರುತ್ತಿರುವುದರಿಂದ ಅನೇಕ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಜನರೊಂದಿಗೆ ದನಕರುಗಳು ಸಹ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ.
ಕೂಡಲೇ ಕೆಳದಂಡೆ ಮುಲ್ಲಾಮಾರಿ ಯೋಜನೆ ಮತ್ತು ಚಂದ್ರಂಪಳ್ಳಿ ನೀರಾವರಿ ಯೋಜನೆಗಳಿಂದ ಹಳ್ಳಕ್ಕೆ ನೀರು ಹರಿದು ಬಿಡಬೇಕು ಎಂದು ಇಲ್ಲಿನ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಿಸಿಲಿನ ತಾಪದಿಂದಾಗಿ ನೀರಿನ ತಳಮಟ್ಟದ ಕುಸಿಯುತ್ತಿದೆ. ಬೋರ್ವೆಲ್ ಮತ್ತು ಬಾವಿಗಳಲ್ಲಿ ನೀರು ತಳಕಂಡಿವೆ. ಇದರಿಂದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಜನ, ಜಾನುವಾರುಗಳಿಗೆ ಸಹ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಈ ಯೋಜನೆ ವ್ಯಾಪ್ತಿಯಲ್ಲಿ ಬರುವ ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ, ನಿಮಾಹೊಸಳ್ಳಿ, ಗೌಡನಹಳ್ಳಿ, ಚಿಂಚೋಳಿ, ಪೋಲಕಪಳ್ಳಿ, ಬುರುಗಪಳ್ಳಿ, ಇರಗಪಳ್ಳಿ, ಅಣವಾರ, ಗಂಗನಪಳ್ಳಿ, ಐನೋಳಿ, ಪತ್ತೇಪುರ ಮುಂತಾದ ಗ್ರಾಮಗಳ ಮೂಲಕ ಹರಿದು ಹೋಗುವ ನೀರು ಅಲ್ಲಲ್ಲಿ ತೆಗ್ಗುಗಳಲ್ಲಿ ನಿಂತುಕೊಂಡಿದ್ದು ನೀರು ಹರಿಯುತ್ತಿಲ್ಲ. ಹೀಗಾಗಿ ಜನ, ಜಾನುವಾರುಗಳಿಗೆ ನೀರಿನ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಯೋಜನೆ ಮುಖ್ಯ ಕಾಲುವೆಗೆ ಮತ್ತು ಹಳ್ಳಕ್ಕೆ ನೀರು ಹರಿದು ಬಿಟ್ಟರೆ ಸ್ವಲ್ಪಮಟ್ಟಿಗೆ ನೀರಿನ ಅನುಕೂಲವಾಗಲಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ. ಕೆಳದಂಡೆ ಮುಲ್ಲಾಮಾರಿ ಯೋಜನೆ ಮತ್ತು ಚಂದ್ರಂಪಳ್ಳಿ ನೀರಾವರಿ ಯೋಜನೆಗಳಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಿದ್ದು, ಜಿಲ್ಲಾಧಿಕಾರಿ ಸಂಬಂಧಪಟ್ಟ ಯೋಜನೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಹಳ್ಳಕ್ಕೆ ನೀರು ಹರಿಸಬೇಕು ಎಂದು ಭೀಮಶೆಟ್ಟಿ ಮುಕ್ಕಾ ಮನವಿ ಮಾಡಿಕೊಂಡಿದ್ದಾರೆ.