ನಾಳೆ ರೆಡ್ಡಿ ಸಮಾಜ ಬೃಹತ್ ಪ್ರತಿಭಟನೆ
ಶಹಾಪುರ: ಹಿರಿಯರು ಆಡಳಿತದಲ್ಲಿ ಅಪಾರ ಅನುಭವ ಹೊಂದಿದ ಮುತ್ಸದ್ಧಿ ರಾಜಕಾರಣಿ ಡಾ. ಎ.ಬಿ. ಮಾಲಕರಡ್ಡಿ ಅವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನದ ಪ್ರಾತಿನಿಧ್ಯ ನೀಡದೆ ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಶಹಾಪುರ ತಾಲೂಕು ರಡ್ಡಿ ಸಮಾಜ ಇತರ ಸಮಾಜದ ಸಹಕಾರದೊಂದಿಗೆ ಮಂಗಳವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಮಾಜದ ಪ್ರಮುಖರು ಪತ್ರಿಕಾ ಹೇಳಿಕೆ ನೀಡಿ, ಪಕ್ಷ ನಿಷ್ಠೆ ಹಲವು ಜವಾಬ್ದಾರಿಯುತ ಖಾತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮುತ್ಸದ್ಧಿ ರಾಜಕಾರಣಿಗೆ ಸಚಿವ ಸ್ಥಾನ ತಪ್ಪಿರುವುದು ಕಾಂಗ್ರೆಸ್ನ ಒತ್ತಡದ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಮೃದು ಸ್ವಭಾವದಿಂದಲೇ ರಾಜ್ಯ ರಾಜ್ಯಕಾರಣ ಮತ್ತು ಕೇಂದ್ರದ ಹೈಕಮಾಂಡ್ದಲ್ಲಿಯೂ ಉತ್ತಮ ಹೆಸರಿದ್ದು ಕಾಂಗ್ರೆಸ್ ಶಿಸ್ತು ಸಮಿತಿಯ ಅಧ್ಯಕ್ಷರಾಗಿಯೂ ಕರ್ತವ್ಯನಿರ್ವಹಿಸಿ ಕಳಂಕ ರಹಿತರಾಗಿದ್ದು ಹೈದ್ರಾಬಾದ್ ಕರ್ನಾಟಕದ ಶಕ್ತಿಯಾಗಿದ್ದು ಅಂಥವರನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಗುರುತಿಸದಿರುವುದು ಅಪಾರ ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಈ ಕುರಿತು ಗಮನ ಸೆಳೆಯಲು ಪ್ರತಿಭಟನೆಗೆ ಸಜ್ಜಾಗಿದ್ದು, ಅಂದು ಸಿ.ಬಿ. ಕಮಾನ್ದಿಂದ ಬಸವೇಶ್ವರ ವೃತ್ತದವರೆಗೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬೃಹತ್ ಪ್ರತಿಭಟನೆ ಮೆರವಣಿಗೆ ಆಯೋಜಿಸಿದ್ದು ಅಭಿಮಾನಿಗಳು ಪಾಲ್ಗೊಳ್ಳಲು ಮನವಿ ಮಾಡಲಾಗಿದೆ.
ಇಂದು ಕನ್ನಿಕಾ ದೇವಿ
ಕಳಸಾರೋಹಣ
ಸುರಪುರ: ಇಲ್ಲಿಯ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಮೇ 20ರಂದು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ದೇವಸ್ಥಾನದಲ್ಲಿ ಶನಿವಾರ ಕನ್ನಿಕಾ ಪರಮೇಶ್ವರಿ ಸುಪ್ರಭಾತ, ಲಲಿತಾ ಸಹಸ್ರನಾಮ ಪಾರಾಯಣ, ಪುಣ್ಯಾಹವಾಚನ ಮತ್ತು ಋತ್ವಿಜರಪೂಜೆ, ಅಮ್ಮನವರ ಮೂರ್ತಿಗೆ ಅಭಿಷೇಕ, ಮಹಾಪೂಜೆ, ಮಂಗಳರಾತಿ, ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಿಂದ ದಾಸವಾಣಿ, ಅಷ್ಟವಧಾನ ಹಾಗೂ ಮಹಮಂಗಳಾರತಿ ಜರುಗಿತು. ಭಾನುವಾರ ಬೆ. 5.30ಕ್ಕೆ ಲಕ್ಷ್ಮಿವೆಂಕಟೇಶ ಸುಪ್ರಭಾತ, 6.30ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ, 8ಕ್ಕೆ ಕಳಸ ಪ್ರತಿಷ್ಟಾಂಗ ಹೋಮ, 11ಕ್ಕೆ ಲಕ್ಷ ಕುಂಕುಮಾರ್ಚನೆ, 12ಕ್ಕೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹಾಗೂ ತಂಡದಿಂದ ನಗೆಹಬ್ಬ, ರಾತ್ರಿ 8ಕ್ಕೆ ಮಹಾಮಂಗಳಾರತಿ, ಮಂತ್ರಪುಷ್ಪ ಜರುಗಲಿವೆ. ಮೇ 20ರಂದು ಬೆ.5.30ಕ್ಕೆ ಸಾಮೂಹಿಕ ಸುಪ್ರಭಾತ, 6.30ಕ್ಕೆ ಲಕ್ಷ್ಮಿ ಸೋಭಾನ ಕಾರ್ಯಕ್ರಮ, 7ಕ್ಕೆ ಪಂಚಾಮೃತ ಅಭಿಷೇಕ, 9ಕ್ಕೆ ಸ್ಥಬ್ದಚಿತ್ರ ಮೆರವಣಿಗೆ ಹಾಗೂ ದೇವತಾ ಪೂಜೆ ಜರುಗಲಿದೆ. ಮ.12ಕ್ಕೆ ಹುಣಸಿಹೂಳೆ ಕಣ್ವಮಠದ ವಿದ್ಯಾಬಾಸ್ಕರ ತೀರ್ಥರಿಂದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ, ನಂತರ ತೀರ್ಥ ಪ್ರಸಾದ ವಿನಿಯೋಗ, ರಾತ್ರಿ 8ಕ್ಕೆ ಅಮ್ಮನವರ ತೊಟ್ಟಿಲೋತ್ಸವದೊಂದಿಗೆ ಕಾರ್ಯಕ್ರಮ ಸಂಪನಗೊಳ್ಳಲಿದೆ. ಕಾರ್ಯಕ್ರಮಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮಾಜ ಬಾಂಧವರು ಆಗಮಿಸಿ ಭಾಗವಹಿಸಲಿದ್ದಾರೆ.