ಭೀಮರಾಯನಗುಡಿ ಅಧಿಸೂಚಿತ ಕಚೇರಿ ತೆರೆಯೋದು ಎಂದು?
ಶಹಾಪುರ: ಗ್ರಾಮ ಪಂಚಾಯ್ತಿ ಹಾಗೂ ಪುರಸಭೆ ವ್ಯಾಪ್ತಿಗೆ ಬಾರದ ಶಖಾಪುರ, ಹುಲಕಲ್, ಕಂಚನಕವಿ ಮತ್ತು ಕೆಲವು ತಾಂಡಾಗಳು ಇಂದಿಗೂ ಸ್ಥಳೀಯ ಚುನಾವಣೆಯಿಂದ ದೂರ ಇದ್ದು, ಇಲ್ಲಿ ಯಾವುದೇ ಸ್ಥಳೀಯ ಸಂಸ್ಥೆ ಆಡಳಿತವಿಲ್ಲ. ಈ ಪ್ರದೇಶಕ್ಕೆ ಅಧಿಸೂಚಿತ ಪ್ರದೇಶವೆಂದು ಸರ್ಕಾರ ಒಂದು ಕಚೇರಿ ತೆರೆದಿದ್ದು, ಅದೂ ಸದಾ ಬಾಗಿಲು ಹಾಕಿಯೇ ಇರುವುದರಿಂದ ಅಲ್ಲಿಯ ನಿವಾಸಿಗಳ ಸಮಸ್ಯೆ ಆಲಿಸುವವರೇ ಇಲ್ಲ ಎಂಬಂತಾಗಿದೆ.
ಭೀಮರಾಯನಗುಡಿ ಕೆಬಿಜೆಎನ್ನೆಲ್ ಕಚೇರಿಆವರಣದ ಕಟ್ಟಡದಲ್ಲಿಯೇ ಅಧಿಸೂಚಿತ ಪ್ರದೇಶದ ಕಾರ್ಯಾಲಯವಿದೆ. ಇದಕ್ಕೆ ಲಕ್ಷಾಂತರ ಅನುದಾನ ಬರುತ್ತಿದೆ. ಇಲ್ಲಿರುವ ಮುಖ್ಯಾಧಿಕಾರಿಯ ನಿರಾಸಕ್ತಿಯಿಂದ ಸಂಬಂಧಿಸಿದ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ತಿಂಗಳಿಗೊಮ್ಮೆ ವಾರಕ್ಕೊಮ್ಮೆ ಬರುವ ಇಲ್ಲಿನ ಅಧಿಕಾರಿಯ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣವಾಗಿದೆ. ಕಚೇರಿ ಯಾವಾಗಲೂ ಬಾಗಿಲಿಗೆ ಕೀಲಿ ಹಾಕಿದ ಸ್ಥಿತಿಯಲ್ಲೇ ಇರುತ್ತದೆ. ಆಡಳಿತ ಕುರಿತು ಕೇಳುವ ಯಾವ ಅಧಿಕಾರಿಗಳು ಇಂದಿನವರೆಗೂ ಕಾಣುತ್ತಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.
ಅಧಿಸೂಚಿತ ಗ್ರಾಮಗಳಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲದೆ ಕಂಗೆಟ್ಟಿವೆ. ಸೂಕ್ತ ರಸ್ತೆಗಳಿಲ್ಲದೆ ನಿವಾಸಿಗಳು ತೊಂದರೆಗೀಡಾಗಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಈ ಆಡಳಿತ ಅವ್ಯವಸ್ಥೆ ಮುಂದುವರೆದಿದ್ದು, ಜಿಲ್ಲಾಧಿಕಾರಿಗಳು ಗಮನ ಹರಿಸುತ್ತಿಲ್ಲ. ಇನ್ನಾದರೂ ಕಚೇರಿಯ ಸಮಯದಲ್ಲಿ ಕರ್ತವ್ಯ ನಿರ್ವಹಿಸುವ, ಜನಪರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಯನ್ನು ಸರ್ಕಾರ ನೀಡಬೇಕು ಎಂದು ಹುಲಕಲ್, ಕಂಚನಕವಿ ಹಾಗೂ ಶಾಖಾಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.